ನಾನು ಎಂದರೆ ನಾನಲ್ಲ, ಸಾಂಕೇತಿಕವಾಗಿ ಸಾಮಾನ್ಯ ವ್ಯಕ್ತಿ…
ಕನ್ನಡದ ನಟ ಯಶ್ ಎಂಬ ವ್ಯಕ್ತಿಯ ಸಿನಿಮಾ ಪ್ರಚಾರದ ಅಬ್ಬರದಲ್ಲಿ ಅವರ ಸಾಧನೆಯನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಳವಾಗಿ ಪ್ರಶಂಸೆ ಮಾಡಲಾಗುತ್ತಿದೆ. ಕನ್ನಡ ನೆಲದ ವ್ಯಕ್ತಿಯೊಬ್ಬ ಹಾಲಿವುಡ್ ಮಟ್ಟಕ್ಕೆ ಬೆಳೆದು ನಿಂತ ಬಗೆಯನ್ನು ವಿಧವಿಧವಾಗಿ ವರ್ಣಿಸಲಾಗುತ್ತಿದೆ. ಅವರ ಶ್ರಮ, ಶ್ರದ್ಧೆ, ಬದ್ಧತೆ, ಯಶಸ್ಸು ಖಂಡಿತ ಅಭಿನಂದನಾರ್ಹ….
ಆದರೆ ಈ ಹೊಗಳಿಕೆಯ ಭರದಲ್ಲಿ ವಾಸ್ತವದ ವಿಮರ್ಶೆಯ ಅವಶ್ಯಕತೆಯೂ ಇರುತ್ತದೆ. ಸಾಧನೆಯ ವರ್ಣನೆಯ ಭ್ರಮೆಯಲ್ಲಿ ಸತ್ಯವೂ ಮುಖ್ಯವಾಗಬೇಕಾಗುತ್ತದೆ. ಅರಮನೆಯ ಭವ್ಯತೆಯಲ್ಲಿ ಅಲ್ಲಿನ ಧೂಳು, ಕಸಗಳನ್ನು ಗಮನಿಸಬೇಕಾದದ್ದು ಸಹ ಕೆಲವು ಬರಹಗಾರರ ಕರ್ತವ್ಯವೂ ಹೌದು…
ಟೀ ಮಾರುತ್ತಿದ್ದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಿದ್ದು ಅದ್ಭುತ ಸಾಧನೆಯೇ ಸರಿ. ಕುರಿ ಕಾಯುತ್ತಿದ್ದ ವ್ಯಕ್ತಿಯೊಬ್ಬ ರಾಜ್ಯಕ್ಕೆ ಮುಖ್ಯಮಂತ್ರಿಯಾಗುವುದು ಅತ್ಯುತ್ತಮ ಸಾಧನೆ. ಗೂಡಂಗಡಿಯಲ್ಲಿ ತರಕಾರಿ ಮಾರುತ್ತಿದ್ದವರ ಮಗಳೊಬ್ಬಳು ಐಎಎಸ್ ಅಧಿಕಾರಿಯಾಗಿದ್ದು ಇನ್ನೂ ಉತ್ತಮ ಸಾಧನೆ. ಆಟೋ ಚಾಲಕರೊಬ್ಬರ ಮಗ ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರನಾಗಿದ್ದು ಮಹೋನ್ನತ ಸಾಧನೆ. ನಿಜ ಇವರೆಲ್ಲ ಸಾಧಕರು ಮತ್ತು ಅಭಿನಂದನಾರ್ಹರು.
ಹಾಗಾದರೆ ಈ ವರ್ಣನೆಯಲ್ಲಿ ಸಾಧನೆ ಎಂದರೆ ಸಮಾಜದ ಅತ್ಯುನ್ನತ ಸ್ಥಾನಕ್ಕೆ ಇರುವುದು, ಸಮಾಜದಲ್ಲಿ ಅತ್ಯಂತ ಜನಪ್ರಿಯರಾಗುವುದು, ಸಾಕಷ್ಟು ಹಣ ಮಾಡಿ ಶ್ರೀಮಂತರಾಗುವುದು, ಯಾವುದೋ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುವುದು, ಯಾವುದಾದರೂ ದೊಡ್ಡ ಪ್ರಶಸ್ತಿಯನ್ನು ಗಳಿಸುವುದು ಇನ್ನೂ ಮುಂತಾದ ಕೆಲವೇ ಕೆಲವು ಕ್ರಿಯೆಗಳನ್ನು ಸಾಧನೆ ಎಂದು ಗುರುತಿಸಲಾಗುತ್ತದೆ. ಇಲ್ಲಿಯವರೆಗೂ ಭಾರತದಲ್ಲಿ ಸ್ವಾತಂತ್ರ್ಯ ನಂತರ ಎಷ್ಟು ಜನ ಈ ರೀತಿಯ ಸಾಧನೆ ಮಾಡಿರಬಹುದು ?
ಸಮಾಜದ ಯಾವುದೇ ಕ್ಷೇತ್ರವಿರಬಹುದು, ಈ ರೀತಿಯ ಸಾಧಕರ ಸಂಖ್ಯೆಯನ್ನು ಅಂದಾಜು ಲೆಕ್ಕ ಹಾಕಿದರೆ ಕಾಲಕ್ಕೆ ತಕ್ಕಂತೆ ಎಲ್ಲಾ ಕಾಲದಲ್ಲೂ ಇಡೀ ಸಮಾಜದಲ್ಲಿ ಅತಿ ಹೆಚ್ಚು ಎಂದರು ಶೇಕಡ ಒಂದರಷ್ಟು ಜನರು ಇರಬಹುದು. ಇದನ್ನು ಹೊರತುಪಡಿಸಿ ಇನ್ನೊಂದಷ್ಟು ಎರಡನೆಯ ದರ್ಜೆಯ ಸಾಧಕರು ಎಂದು ಪರಿಗಣಿಸುವುದಾದರೆ ಅತಿ ಹೆಚ್ಚು ಎಂದರೆ ಇನ್ನೂ 9% ಇರಬಹುದು. ಒಟ್ಟಾರೆ ಸಾಧಕರು ಶೇಕಡಾ 10%. ಉಳಿದ 20 ಪರ್ಸೆಂಟ್ ಸ್ವಂತ ಮನೆ, ಒಂದು ಕಾರು, ಒಂದಷ್ಟು ವಿದೇಶ ಪ್ರವಾಸ, ಇನ್ನೊಂದಷ್ಟು ಸರ್ಕಾರಿ ಉದ್ಯೋಗ ಹೇಗೋ ಏನೋ ಮಧ್ಯಮ ದರ್ಜೆಗೆ ಸೇರುವುದನ್ನೇ ತಮ್ಮ ಬದುಕಿನ ಬಹು ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರಿಗೆ ಸಾಮಾಜಿಕ ಮಾನ್ಯತೆ ಇರುವುದಿಲ್ಲ. ಹಾಗಾದರೆ ಉಳಿದವರ ಪಾಡೇನು.
ಯಶ್ ವಿಷಯದಲ್ಲಿ ಬಂದ ಲೇಖನಗಳಲ್ಲಿ ಎಲ್ಲ ವರ್ಣನೆಯೂ ಶೇಕಡಾ ಒಂದರಷ್ಟು ಸಾಧನೆ ಮಾಡಿದ ಸಾಧಕರ ಬಗ್ಗೆ ಇರುವಂತಹುದೇ ಆಗಿತ್ತು. ಹಾಗಾದರೆ ಉಳಿದ ಶೇಕಡ 90ರಷ್ಟು ನಮ್ಮಂತ ಸಾಮಾನ್ಯ ಜನರ ಸಾಮಾನ್ಯ ಬದುಕಿಗೆ ಯಾವ ಅರ್ಥ ಇದೆ. ಹಾಗಾದರೆ ನಾವು ಬದುಕಿದ್ದು ಅಥವಾ ಬದುಕುತ್ತಿರುವುದು ಏತಕ್ಕಾಗಿ. ಸುಮ್ಮನೆ ಊಟ ಮಾಡಿಕೊಂಡು, ಬದುಕಿನೊಂದಿಗೆ ಸಂಘರ್ಷ ಮಾಡುತ್ತಾ ಸಾವನ್ನು ನಿರೀಕ್ಷಿತ್ತಾ ಇರುವುದೇ ನಮ್ಮ ಜೀವನವೇ……
ಈಗ ಸಾಮಾನ್ಯ ಜನರಾದ ನಾವುಗಳು ಯೋಚಿಸಬೇಕಿದೆ. ಬದುಕಲ್ಲಿ ಶೇಕಡ ಒಂದರಷ್ಟು ಅಥವಾ ಶೇಕಡಾ ಹತ್ತರಷ್ಟು ಯಶಸ್ವಿ ವ್ಯಕ್ತಿಗಳಂತೆ ನಾವು ಕೂಡ ಈ ಸಮಾಜದ ಭಾಗವೇ. ಈ ಪರಿಸರದ ಭಾಗವೇ. ನಮಗೆ ಜನಪ್ರಿಯತೆ ಇಲ್ಲದೇ ಇರಬಹುದು, ಹಣ, ಅಧಿಕಾರ, ಪ್ರಶಸ್ತಿಯೂ ಇಲ್ಲದೇ ಇರಬಹುದು. ಯಾವುದೇ ಕ್ಷೇತ್ರದಲ್ಲಿ ಮಹಾನ್ ದೊಡ್ಡ ಸಾಧನೆ ಮಾಡದೆಯೂ ಇರಬಹುದು. ಆದರೆ ಈ ಭೂಮಿಯ ಮೇಲೆ ನಮ್ಮ ಸಹಜ ಅಸ್ತಿತ್ವವಿದೆ. ಬದುಕಿನ ಕ್ಷಣಗಳನ್ನು ಪ್ರಕೃತಿಯೊಂದಿಗೆ ಆಸ್ವಾದಿಸುತ್ತಾ, ಸಮಾಜದೊಂದಿಗೆ ಸ್ಪಂದಿಸುತ್ತಾ ಕಳೆಯುವುದು ಕೂಡ ಒಂದು ದೊಡ್ಡ ಸಾಧನೆಯೇ.
ಏಕೆಂದರೆ ಶೇಕಡಾ ಒಂದರಷ್ಟು ಸಾಧಕರಂತೆ ಸಾಧನೆ ಮಾಡಲು ಸಾಕಷ್ಟು ಪೈಪೋಟಿ ಇರುತ್ತದೆ, ಸಾಕಷ್ಟು ಶ್ರಮವೂ ಹಾಕಬೇಕಾಗುತ್ತದೆ. ಜೊತೆಗೆ ಅದರಲ್ಲಿ ಯಶಸ್ಸಿನ ಪ್ರಮಾಣ ಶೇಕಡಾ ಒಂದು ಅಥವಾ ಹತ್ತು ಮಾತ್ರ. ಇನ್ನು ಉಳಿದ ಶೇಕಡಾ 90ರಷ್ಟು ಜನರ ಬದುಕಿನಲ್ಲಿ ವಿಫಲತೆ ಅಥವಾ ಸಹಜತೆಯೇ ಹೆಚ್ಚು. ಅಂದರೆ ನಾವು ವಿಫಲತೆಯಲ್ಲಿ ಒಬ್ಬರಾಗುವ ಚಿಂತೆಗಿಂತ ಸಹಜವಾಗಿಯೇ ಬದುಕು ಕಳೆಯುವುದು ಒಂದು ಸಾಧನೆ ಅಲ್ಲವೇ. ಅದೇ ಹೆಚ್ಚು ಖುಷಿ ನೀಡಬಹುದಲ್ಲವೇ…
ಯಾರೋ ಒಬ್ಬ ಮಹತ್ವಾಕಾಂಕ್ಷಿ ಗುರಿ ಮುಟ್ಟಬಹುದು. ಆದರೆ ಆ ಗುರಿ ಮುಟ್ಟಿದವನನ್ನು ವರ್ಣಿಸಿ ಬರೆದ ವ್ಯಕ್ತಿಗಳು ಸಹ ಸಾಮಾನ್ಯರೇ ಅಲ್ಲವೇ. ಬರೆದವರು ಸಹ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿರುವುದಿಲ್ಲವಲ್ಲವೇ…
ಇಲ್ಲಿ ಇನ್ನೂ ಒಂದು ಸೂಕ್ಷ್ಮತೆ ಇದೆ. ಕ್ರೀಡೆ, ಸಂಗೀತ, ಸಾಹಿತ್ಯ, ಲಲಿತಕಲೆ ಇತ್ಯಾದಿಗಳನ್ನು ಹೊರತುಪಡಿಸಿ ಉದ್ಯಮ, ಸಿನಿಮಾ, ರಾಜಕೀಯದಲ್ಲಿ ಯಶಸ್ವಿಯಾದವರು ಅನುಸರಿಸಿದ ಮಾರ್ಗಗಳನ್ನು ಸಹ ಪ್ರಶ್ನಿಸಬೇಕಾಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಯಡಿಯೂರಪ್ಪ, ಬೊಮ್ಮಾಯಿ, ದೇವೇಗೌಡ, ಕುಮಾರಸ್ವಾಮಿ, ನರೇಂದ್ರ ಮೋದಿ, ಅಮಿತ್ ಶಾ ಮುಂತಾದವರು ಯಶಸ್ವಿಯಾಗಲು ಅನುಸರಿಸಿದ ಮಾರ್ಗಗಳು ಒಂದು ಹಂತಕ್ಕೆ ಮುಖ್ಯವಾಗಬೇಕಾಗುತ್ತದೆ. ಏಕೆಂದರೆ ಸಮಾಜದ ಕ್ರಮಬದ್ಧ, ಶಾಂತಿಯುತ ಚಲನೆಗೆ ಇವರ ಕೊಡುಗೆ ಏನು ಎಂಬುದು ಕೂಡ ಗಮನಿಸಬೇಕು. ಈಗ ಉದಾಹರಣೆಗೆ ಯಶ್ ಅವರ ಕೆಜಿಎಫ್ ಸಿನಿಮಾ ಆಗಲಿ, ಈಗ ಇನ್ನೂ ಬಿಡುಗಡೆಯಾಗದ ಟಾಕ್ಸಿಕ್ ಸಿನಿಮಾವೇ ಆಗಲಿ ಸಮಾಜಕ್ಕೆ ಅದ್ಬುತ ಕೊಡುಗೆ ಎಂದೇನು ಅನಿಸುವುದಿಲ್ಲ. ಅವರ ವೈಯಕ್ತಿಕ ಸಾಧನೆ ದೊಡ್ಡದಾದರೂ ಸಮಾಜದ ವಿರುದ್ಧ ಮೌಲ್ಯಗಳನ್ನು ಅದು ಪ್ರತಿಪಾದಿಸುತ್ತದೆ. ಹಸಿ ಹಸಿ ಲೈಂಗಿಕ ದೃಶ್ಯಗಳು, ಹೊಡಿ, ಕಡಿ, ಬಡಿ ಎಂಬ ಹಿಂಸಾತ್ಮಕ ದೃಶ್ಯಗಳು ಯುವಜನರಲ್ಲಿ ಹುಚ್ಚೆಬ್ಬಿಸಬಹುದು. ಆದರೆ ಆ ರೀತಿಯ ಸಿನಿಮಾಗಳನ್ನು ನಾವು ಪ್ರೋತ್ಸಾಹ ಮಾಡಿ ಅದು ಯಶಸ್ವಿಯಾದ ನಂತರ, ನಮ್ಮ ಮಕ್ಕಳು ಮಾತ್ರ ಆ ರೀತಿ ಆಗಬಾರದು, ನಮ್ಮ ಮಕ್ಕಳು ಅತ್ಯುತ್ತಮ ಚಿಂತನೆಯ, ಒಳ್ಳೆಯ ನಡತೆಯ ವ್ಯಕ್ತಿಗಳಾಗಬೇಕು ಎಂದು ಬಯಸುವ ನಾವು, ಸಿನಿಮಾಗಳಲ್ಲಿ ಕ್ರೌರ್ಯವನ್ನು ತೋರಿಸುವುದು ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದಂತಾಗುವುದಿಲ್ಲವೇ. ಹೊಗಳಿಕೆ, ತೆಗಳಿಕೆಗಳಲ್ಲಿ ಕೂಡ ನಿಯಂತ್ರಣವಿರಬೇಕು ಮತ್ತು ಮಿತಿಯೂ ಇರಬೇಕು.
ಸಾಧಕರೆಂದರೆ ಗೌತಮ ಬುದ್ಧ, ಮಹಾವೀರ, ಮೀರಾಬಾಯಿ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಸಂತ ಕಬೀರ, ಶಂಕರಾಚಾರ್ಯ, ಬಸವಣ್ಣ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಕಿತ್ತೂರು ಚೆನ್ನಮ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ಇನ್ನೂ ಸಾಕಷ್ಟು ಹೆಸರುಗಳಿರುತ್ತದೆ. ಅವರು ಒಂದು ಜೀವನ ವಿಧಾನವನ್ನೇ ರೂಪಿಸಿದವರು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದವರು. ಆದರೂ ಅವರು ನಮ್ಮಂತೆ ಮನುಷ್ಯರೇ. ಅವರಷ್ಟೇ ನಾವೂ ಪ್ರಮುಖರು.
ಅಂಬಾನಿ, ಅದಾನಿ, ನಾರಾಯಣ್ ಮೂರ್ತಿ, ಅಜೀಮ್ ಪ್ರೇಮ್ ಜಿ, ಅಮಿತಾ ಬಚ್ಚನ್, ಚಿರಂಜೀವಿ, ರಜನಿಕಾಂತ್, ದೀಪಿಕಾ ಪಡುಕೋಣೆ ನಯನತಾರ, ಮಮ್ಮೂಟಿ, ವಿಜಯ್ ಮುಂತಾದವರು ಸಹ ಸಮಾಜದ ದೃಷ್ಟಿಯಲ್ಲಿ ಸಾಧಕರು ನಿಜ, ಆದರೆ ಅವರುಗಳಷ್ಟೇ ಸಮಾಜದಲ್ಲಿ ಮಾನ್ಯತೆ ಪಡೆದ ತಕ್ಷಣ ಸಾಧನೆ ಮಾಡಿದವರು, ಉಳಿದವರದು ಸಾಧನೆ ಅಲ್ಲ, ಅದೊಂದು ವಿಫಲ ಜೀವನ ಎನ್ನುವ ನಿರಾಸೆ ಅಥವಾ ಆ ರೀತಿಯ ವಿಮರ್ಶೆ ಅಥವಾ ತಪ್ಪು ಅಭಿಪ್ರಾಯ ಬೇಡ.
ನಾವೆಲ್ಲರೂ ಸಾಮಾನ್ಯರು. ಒಬ್ಬ ದರ್ಜಿ, ಒಬ್ಬ ಸೈನಿಕ, ಒಬ್ಬ ವೈದ್ಯ, ಒಬ್ಬ ಅಗಸ, ಒಬ್ಬ ಕ್ಷೌರಿಕ, ಒಬ್ಬ ಚಾಲಕ, ಒಬ್ಬ ಪೈಂಟರ್, ಒಬ್ಬ ಪೌರಕಾರ್ಮಿಕ, ಒಬ್ಬ ಅಡುಗೆ ಕಾಯಕದವರು ಇತ್ಯಾದಿ ಎಲ್ಲರೂ ಕೂಡ ಮುಖ್ಯರು, ಪ್ರಮುಖರು ಮತ್ತು ಈ ಸಮಾಜದ ನಿಜವಾದ ಆಧಾರ ಸ್ಥಂಭಗಳು. ಅವರ ಬದುಕು ಕೂಡ ಸಾಕಷ್ಟು ವೈವಿಧ್ಯತೆಯಿಂದಲೇ ಕೂಡಿರುತ್ತದೆ.
ದೊಡ್ಡ ಮಟ್ಟದಲ್ಲಿ ಜನಪ್ರಿಯರಾಗಿ ಯಶಸ್ವಿಯಾದವರು ಮಾತ್ರ ಕಷ್ಟಪಟ್ಟಿರುವುದಿಲ್ಲ. ಅವರಂತೆಯೇ ಉಳಿದ ಶೇಕಡಾ 90ರಷ್ಟು ಜನ ಸಹ ಕಷ್ಟಪಟ್ಟಿರುತ್ತಾರೆ. ಆದರೆ ಯಶಸ್ವಿ ಎಂದು ಭಾವಿಸಿದವರ ಕಷ್ಟ ಸಾರ್ವಜನಿಕವಾಗಿ ಪ್ರಚಾರ ಸಿಗುವುದರಿಂದ ಅದಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಸಾಮಾನ್ಯರ ಕಷ್ಟಗಳು ಆಂತರಿಕವಾಗಿರುತ್ತದೆ. ದೊಡ್ಡ ಮಟ್ಟದ ಯಶಸ್ವಿಯಾದವರಿಗೆ ಕನಿಷ್ಠ ಈಗಲಾದರೂ ಒಂದಷ್ಟು ಸೌಕರ್ಯಗಳು ಹೆಚ್ಚಾಗಿರಬಹುದು. ಆದರೆ ಉಳಿದ 90ರಷ್ಟು ಜನ ನಿರಂತರವಾಗಿ ಕೊನೆಯವರೆಗೂ ಕಷ್ಟಪಡುತ್ತಲೇ ಇರುತ್ತಾರೆ.
ನಿಜ, ಹಣ ಅಧಿಕಾರ ಒಂದಷ್ಟು ಸುಖಭೋಗಗಳನ್ನು ಕೊಡಬಹುದೇ ಹೊರತು ಅದರ ನೆರಳಲ್ಲಿ ಇತರರದು ವಿಫಲತೆ ಎಂಬ ಮಾತನ್ನು ಒಪ್ಪುವುದು ಒಳ್ಳೆಯ ಲಕ್ಷಣವಲ್ಲ. ನಾನು ಸಹ ಬದುಕನ್ನು ನನ್ನ ಮಟ್ಟಿಗೆ ಯಶಸ್ವಿಯಾಗಿಯೇ ಅನುಭವಿಸುತ್ತಾ ಸಾಗುತ್ತಿದ್ದೇನೆ. ನಿರಾಸೆ, ಆಕ್ರೋಶಗಳು ಬದುಕಿನ ಭಾಗಗಳೇ ಹೊರತು ಅದೇ ಬದುಕಾಗಿ ಉಳಿಯಲು ಬಿಟ್ಟಿಲ್ಲ. ಯಶಸ್ವಿ ಬದುಕಿನಲ್ಲಿ ನೆಮ್ಮದಿಯ ಕ್ಷಣಗಳು ಮುಖ್ಯವೇ ಹೊರತು ಬಾಹ್ಯ ಆಕರ್ಷಣೆಗಳಲ್ಲ.
ಜೊತೆಗೆ ಜನರು ಸ್ವಲ್ಪವಾದರೂ ಸ್ವಾಭಿಮಾನಿಗಳಾಗಬೇಕು. ಯಾರದೋ ಹಿಂಬಾಲಕರಾಗಿ, ಯಾರಿಗೋ ಜೈಕಾರ ಹಾಕುತ್ತಾ, ಇನ್ನೊಬ್ಬರ ಗುಲಾಮರಾಗುವ ಮನಸ್ಥಿತಿಗಿಂತ, ಇರುವುದರಲ್ಲಿ ಸ್ವಾಭಿಮಾನದಿಂದ, ನಮಗೆ ನಾವೇ ರಾಜರಂತೆ ಬದುಕುವ ಮನಸ್ಥಿತಿ ಬೆಳೆಸಿಕೊಂಡಲ್ಲಿ, ನಾವು ಕೂಡ ಯಶಸ್ವಿ ವ್ಯಕ್ತಿಗಳೇ. ಇದೊಂದು ಹುಚ್ಚು ಕಲ್ಪನೆ ಎನಿಸಿದರು, ನನ್ನ ಮನಸ್ಸಿಗೆ ನಾನೇ ರಾಜನಾಗಿ,ಬದುಕಿನ ಕ್ಷಣಗಳನ್ನು ಅನುಭವಿಸುತ್ತಾ, ಸಾವಿನಡಗೆ ಯಾತ್ರೆ ಮುಂದುವರಿಸಿದ್ದೇನೆ.
ಒಟ್ಟಿನಲ್ಲಿ ಯಾರ ಯಶಸ್ಸು ಎಷ್ಟೇ ದೊಡ್ಡಮಟ್ಟದ್ದಾಗಿರಲಿ, ಸಮಾಜದ, ದೇಶದ, ಮಾನವೀಯ ಮೌಲ್ಯಗಳು, ಸಂವಿಧಾನಾತ್ಮಕ ಮೌಲ್ಯಗಳು, ನಾಗರೀಕ ಮೌಲ್ಯಗಳು ಶಿಥಿಲವಾಗದಂತೆ, ಕುಸಿಯದಂತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು. ನಮ್ಮ ಅಭಿಪ್ರಾಯಗಳು, ಆಲೋಚನೆಗಳು ಹೆಚ್ಚಾಗಿ ಆ ನಿಟ್ಟಿನಲ್ಲಿಯೇ ಇರಲಿ. ಬಾಹ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಕೆಟ್ಟ ಮೌಲ್ಯಗಳನ್ನು ವಿಜೃಂಬಿಸುವುದು ಬೇಡ ಎಂಬ ಮನವಿ ಮಾಡಿಕೊಳ್ಳುತ್ತಾ…..
ಇದು ಒಂದು ರೀತಿಯಲ್ಲಿ ನನ್ನನ್ನು ನಾನು ಸಂತೈಸಿಕೊಳ್ಳುವ, ಆತ್ಮವಲೋಕನ ಅಥವಾ ಸಮಾಧಾನ ಮಾಡಿಕೊಳ್ಳುವ ವಿಮರ್ಶೆ ಅಥವಾ ಸ್ವ ಮರುಕವೂ ಇರಬಹುದು, ಅಸಹಾಯಕತೆಯೂ ಇರಬಹುದು, ವ್ಯವಸ್ಥೆಯ ವಿರುದ್ಧದ ಕೋಪವೂ ಇರಬಹುದು, ಅಸೂಯೆಯೂ ಇರಬಹುದು, ಸತ್ಯವೂ ಇರಬಹುದು, ವಾಸ್ತವವೂ ಇರಬಹುದು, ಸೋಲಿನ ನೆಪವೂ ಇರಬಹುದು, ಇವೆಲ್ಲವುಗಳ ಸಮ್ಮಿಶ್ರಣವೂ ಇರಬಹುದು. ಯೋಚಿಸಿದಂತೆಲ್ಲಾ ಹೊಸ ಹೊಸ ವಿಷಯಗಳು ಹೊಳೆಯುತ್ತಲೇ ಇರುತ್ತದೆ. ಆದರೆ ಸಂಪೂರ್ಣ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
