images-1.jpeg
Spread the love

ಮಣ್ಣಿನ ಗುಣ ಚಿಗುರಲಿ,
ಶಾಂತಿ, ಪ್ರೀತಿಯ ಮಳೆ ಸುರಿಯಲಿ…..

ಗಾಂಧಿ ಎಂಬ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿದ್ದಾಂತಗಳಿಗೆ ಸಾಕಷ್ಟು ವಿರೋಧಗಳು, ದ್ವೇಷವಾಗಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಹಾಗೂ ಒಟ್ಟಾರೆಯಾಗಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವಾಗುತ್ತಿದ್ದ ಸಂದರ್ಭದಲ್ಲಿ ಗಾಂಧಿಯ ತತ್ವ ಸಿದ್ಧಾಂತಗಳು ಮತ್ತೆ ಮುನ್ನಲೆಗೆ ಬರುತ್ತಿರುವುದು ಒಂದು ಸೋಜಿಗವೇ ಸರಿ.

ಇನ್ನೇನು ಮುಗಿದೇ ಹೋಯಿತು ಎನ್ನುವ ಸನ್ನಿವೇಶದಲ್ಲಿ ಫೀನಿಕ್ಸ್ ನಂತೆ ಯುವ ಜನಾಂಗದ ನಡುವೆ, ಜಂಜೀಗಳ ರೂಪದಲ್ಲಿ ಪುನರ್ ಸೃಷ್ಟಿ ಪಡೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ಸ್ವಾಗತಾರ್ಹ ವಿಷಯ.

ಗಾಂಧಿ ತತ್ವಗಳು ತುಂಬಾ ಹಳೆಯದು, ವಾಸ್ತವಿಕ ಅಲ್ಲದ್ದು, ಅಪ್ರಯೋಜನಕಾರಿ, ಹೇಡಿತನದ್ದು, ದುರ್ಬಲವಾದದ್ದು, ಪ್ರಾಯೋಗಿಕವಲ್ಲದ್ದು ಎಂಬ ಮನೋಭಾವ ಬಲವಾಗಿ ಬೇರೂರುತ್ತಿದ್ದ ಸಂದರ್ಭದಲ್ಲಿಯೇ ಗಾಂಧಿ ತತ್ವಗಳು ಮತ್ತೆ ಎದ್ದು ಬಂದಿದೆ….

ಶಸ್ತ್ರ ಮತ್ತು ಶಾಸ್ತ್ರದ ಬಲದಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆಯೇ ಹೊರತು ಗಾಂಧಿ ಚಳುವಳಿಯಿಂದ ಅಲ್ಲ. ಗಾಂಧಿ ಇಲ್ಲದಿದ್ದರೆ ಈ ದೇಶಕ್ಕೆ ಬಹಳ ಹಿಂದೆಯೇ ಸ್ವಾತಂತ್ರ ಬರುತ್ತಿತ್ತು ಎಂದು ದೊಡ್ಡ ದೊಡ್ಡ ರಾಜಕೀಯ ನಾಯಕರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ದಯವಿಟ್ಟು ಗಾಂಧಿಯ ಪರ ಅಥವಾ ವಿರೋಧ ಎರಡರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದೆ, ಯಾರಿಗೂ ಸೇರದ ಒಂದು ಪ್ರದೇಶದಲ್ಲಿ ನಿಂತು ಸಹಜ ನ್ಯಾಯ, ನಾಗರಿಕ ನ್ಯಾಯ ಕಾನೂನಾತ್ಮಕ ನ್ಯಾಯದ ದೃಷ್ಟಿಯಿಂದ ಒಮ್ಮೆ ನಿಸ್ಪಕ್ಷಪಾತವಾಗಿ ಇಂದಿನ ಪರಿಸ್ಥಿತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಇಲ್ಲಿ ಯಾವುದೇ ಪೂರ್ವ ನಿರ್ಧಾರಿತ, ಸಂಕುಚಿತ ಮನೋಭಾವ ಇರಬಾರದು. ಸಂಪೂರ್ಣ, ಸಮಗ್ರ, ಸಮಸ್ಠಿ ಪ್ರಜ್ಞೆಯ ಚಿಂತನೆ ಮತ್ತು ಭಾರತೀಯ ಮಣ್ಣಿನ ಗುಣ ನಮ್ಮ ಚಿಂತನೆಯ ಮೂಲ ವೇದಿಕೆಯಾಗಿರಬೇಕು

ಮೊನ್ನೆಯಷ್ಟೇ 21 ವರ್ಷದ ಹುಡುಗ ಜಾರ್ಖಂಡ್ ನಲ್ಲಿ ಉಪವಾಸ ಸತ್ಯಾಗ್ರಹ ಮಾಡಿ ತನ್ನ ಸಹಚರರೊಂದಿಗೆ ತಾನು ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಅಲ್ಲಿನ ಸರ್ಕಾರ ಈಡೇರಿಸುವಂತೆ ಮಾಡಿ ಅದ್ಭುತ ಯಶಸ್ಸು ಪಡೆದದ್ದು ಆತನ ಸತ್ಯಾಗ್ರಹದಿಂದ.

ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಜಂತರ್ ಮಂಥರ್ ನ ಭಾರತೀಯ ಜಿರಳೆ ಪಾರ್ಟಿಯ ಯಶಸ್ಸು ಭಾರತದ ಸತ್ಯಾಗ್ರಹ ಶಕ್ತಿಯ ಬಹುದೊಡ್ಡ ಕೊಡುಗೆ. ಕಳೆದ 12 ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಅಮಿತ್ ಶಾ ಅವರ ಬಲಾಢ್ಯಶಕ್ತಿಯನ್ನು ಇಲ್ಲಿಯವರೆಗಿನ ಯಾವುದೇ ವಿರೋಧ ಪಕ್ಷ ಸೋಲಿಸಲು ಸಾಧ್ಯವಾಗಿರಲಿಲ್ಲ. ಅಂತಹ ಶಕ್ತಿಯನ್ನು ಸೋಲಿಸಿದ್ದು ಇದೆ ಉಪವಾಸ ಸತ್ಯಾಗ್ರಹ.

ಒಮ್ಮೆ ಯೋಚಿಸಿ ನೋಡಿ, ದೆಹಲಿಯ ಜಂತರ್ ಮಂಥರ್ ಆ ಯುವಶಕ್ತಿ ಸತ್ಯಾಗ್ರಹಕ್ಕೆ ಬದಲಾಗಿ ಶಸ್ತ್ರ ಮತ್ತು ಶಾಸ್ತ್ರವನ್ನು ಪ್ರಯೋಗಿಸಿದ್ದರೆ ಅಥವಾ ಜಾರ್ಖಂಡ್ ನ ವಿದ್ಯಾರ್ಥಿ ಸಮೂಹ ಶಸ್ತ್ರ ಮತ್ತು ಶಾಸ್ತ್ರವನ್ನು ಉಪಯೋಗಿಸಿದ್ದರೆ ಅಥವಾ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರುದ್ಧ ಹೋರಾಟ, ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಶಸ್ತ್ರ ಮತ್ತು ಶಾಸ್ತ್ರವನ್ನು ಉಪಯೋಗಿಸಿದ್ದರೆ ಪರಿಣಾಮ ಏನಾಗುತ್ತಿತ್ತು ಎಂದು. ಅದಕ್ಕೆ ಬದಲಾಗಿ ಅವರು ಉಪಯೋಗಿಸಿದ ಸತ್ಯಾಗ್ರಹ ಯಾವ ಫಲಿತಾಂಶ ನೀಡಿತು ಎಂದು…

ಒಂದು ವೇಳೆ ಈ ಎಲ್ಲಾ ಚಳುವಳಿಗಳು ಶಸ್ತ್ರ ಮತ್ತು ಶಾಸ್ತ್ರವನ್ನು ಉಪಯೋಗಿಸಿದ್ದರೆ ಖಂಡಿತವಾಗಲೂ ಅವರ ಯಾವ ಬೇಡಿಕೆಯು ಈಡೇರುತ್ತಿರಲಿಲ್ಲ, ಜನಬೆಂಬಲವು ಸಿಗುತ್ತಿರಲಿಲ್ಲ, ಸರ್ಕಾರವು ಮಣಿಯುತ್ತಿರಲಿಲ್ಲ. ಅಪಾರ ಹಿಂಸೆಯಾಗಿ ನೂರಾರು ಜನ ಸಾಯುತ್ತಿದ್ದರು. ಆದರೆ ಇಡೀ ಜಗತ್ತಿಗೆ ಗಾಂಧಿ ನೀಡಿದ ಸತ್ಯಾಗ್ರಹ ಎಷ್ಟೊಂದು ಶಕ್ತಿಶಾಲಿ ಎಂಬುದನ್ನು ಯೋಚಿಸಿ ನೋಡಿ ಅದಕ್ಕಾಗಿ ಹೆಮ್ಮೆಪಡಿ.

ನೀವು ಯಾವ ವಯಸ್ಸಿನಲ್ಲೇ ಇರಿ, ಯಾವ ಜಾತಿ, ಧರ್ಮ, ಪ್ರದೇಶಕ್ಕೆ ಸೀಮಿತವಾಗಿರಿ, ನೀವು ಭಾರತೀಯರಾಗಿದ್ದು, ನಿಮ್ಮ ಕುಟುಂಬದಿಂದ ಹಿಡಿದು ದೇಶದ ವರೆಗೆ ಯಾವುದೇ ಸಂದರ್ಭದಲ್ಲಿ, ಯಾವುದೇ ಸಂಬಂಧದಲ್ಲಿ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಯಾರೊಂದಿಗೆ ಬೇಕಾದರೂ ಸತ್ಯಾಗ್ರಹ ನಡೆಸುವುದು ಹೆಚ್ಚು ಪ್ರಯೋಜನಕಾರಿಯೋ ಅಥವಾ ಶಸ್ತ್ರ ಉಪಯೋಗಿಸಿ ಹೊಡೆದಾಡುವುದು ಹೆಚ್ಚು ಪ್ರಯೋಜನಕಾರಿಯೋ ಎಂಬುದನ್ನು ಪರೀಕ್ಷಿಸಿ ನೋಡಿ.

ಶಸ್ತ್ರ ಹಿಡಿದರೆ ವಿರೋಧಿಗಳನ್ನು ಹೊಡೆದು ಜೈಲು ಪಾಲಾಗಬಹುದು ಅಥವಾ ವಿರೋಧಿಗಳು ನಮ್ಮನ್ನು ಹೊಡೆದೋಡಿಸಬಹುದು. ಆದರೆ ಉಪವಾಸ ಸತ್ಯಾಗ್ರಹ, ಪ್ರೀತಿಯ ಸತ್ಯಾಗ್ರಹ ಖಂಡಿತವಾಗಲೂ ಸೋಲುವ ಸಾಧ್ಯತೆ ಕಡಿಮೆ. ಜನಬೆಂಬಲವೂ ಹೆಚ್ಚು ಆತ್ಮತೃಪ್ತಿಯು ಇರುತ್ತದೆ, ನೆಮ್ಮದಿಯು ಇರುತ್ತದೆ. ಸಂಬಂಧಗಳು ಉಳಿಯುತ್ತದೆ.

ಈಗಲಾದರೂ ಸತ್ಯ, ಸರಳತೆ, ಅಹಿಂಸೆ ಎಂಬ ಶಸ್ತ್ರಗಳು ನಮ್ಮ ಮೊದಲನೇ ಆಯ್ಕೆಗಳಾಗಲಿ. ಇದನ್ನು ವೈಯಕ್ತಿಕ ಮಟ್ಟದಲ್ಲಿ ಹೇಳುತ್ತಿದ್ದೇನೆ. ಸರ್ಕಾರದ ಮಟ್ಟದಲ್ಲಿ ಪೊಲೀಸ್, ನ್ಯಾಯಾಲಯ, ಸೈನ್ಯ, ಕಾನೂನು, ಸಂವಿಧಾನ, ಯಾವಾಗಲೂ ಮೊದಲ ಆಯ್ಕೆಯೇ ಆಗಿರುತ್ತದೆ. ಅಲ್ಲಿಯೂ ಒಂದು ಹಂತದವರೆಗೆ ಗಾಂಧಿಗಿರಿಗೆ ಅವಕಾಶ ಇರುತ್ತದೆ.

ನಮ್ಮ ನೆಲದ ಗುಣವೇ ಗಾಂಧಿಗಿರಿ.
ಗಾಂಧಿ ಅಮರ, ಅಜರಾಮರ. ನಾನು ಸಾಮಾಜಿಕ ಜಾಲತಾಣಕ್ಕೆ ಬಂದ ಪ್ರತಿ ಕ್ಷಣದಿಂದಲೂ ಹೇಳುತ್ತಲೇ ಇದ್ದೇನೆ. ಗಾಂಧಿ ಬಹುತೇಕ ಎಲ್ಲಾ ಮಾನವೀಯ ಮೌಲ್ಯಗಳ ಪ್ರತಿನಿಧಿ, ಒಳ್ಳೆಯತನದ ಪ್ರತಿನಿಧಿ. ಆದರೆ ಪ್ರಾರಂಭದ ದಿನಗಳಲ್ಲಿ ಮಹಿಳೆ ಮತ್ತು ದಲಿತರ ಬಗೆಗಿನ ಅವರ ಅಭಿಪ್ರಾಯ, ಅಂಬೇಡ್ಕರ್ ಅವರ ಮೀಸಲಾತಿ ನೀತಿ, ಮುಖ್ಯವಾಗಿ ಪೂನಾ ಒಪ್ಪಂದದ ವಿಷಯದಲ್ಲಿ ಗಾಂಧಿಯವರು ಸ್ವಲ್ಪಮಟ್ಟಿಗೆ ಪರಿಪೂರ್ಣತೆ ಹೊಂದಲು, ವಾಸ್ತವಕ್ಕೆ ಮರಳಲು ವಿಫಲರಾದರು ಎನ್ನುವ ಸಣ್ಣ ಮಾನವ ಸಹಜ ತಪ್ಪನ್ನು ಹೊರತುಪಡಿಸಿದರೆ ಗಾಂಧಿ ಮತ್ತು ಬಾಬಾ ಸಾಹೇಬರ ಚಿಂತನೆಗಳು ಸಾರ್ವಕಾಲಿಕ ಸತ್ಯಗಳು. ಅದಕ್ಕೆಂದೇ ಹೇಳುವುದು ಆಧುನಿಕ ಭಾರತದ ಎರಡು ಕಣ್ಣುಗಳು ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್. ಎಲ್ಲಾ ಪೂರ್ವಾಗ್ರಹಗಳನ್ನು ಹೊರತುಪಡಿಸಿ ಇದರ ಬಗ್ಗೆ ಯೋಚಿಸಿ.

ಹೌದು, ಕೆಲವೊಮ್ಮೆ ನಮಗಾಗುವ ನೋವು ಅವಮಾನಗಳನ್ನು ನೆನಪಿಸಿಕೊಂಡು ಗಾಂಧಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ಕೋಪ ಬರಬಹುದು. ಏಕೆಂದರೆ ನಮಗೆ ಅನ್ಯಾಯವಾಗಿರುತ್ತದೆ. ಆದರೆ ಅದಕ್ಕೆ ಅವರ ತತ್ವ ಸಿದ್ಧಾಂತಗಳು ಕಾರಣವಲ್ಲ. ಅದನ್ನು ಅನುಷ್ಠಾನಗೊಳಿಸುತ್ತಿರುವ ಇಂದಿನ ನಮ್ಮ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗಗಳದ ತಪ್ಪುಗಳೇ ಹೊರತು ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಗಳಲ್ಲ.

ಇಲ್ಲಿನ ಮಣ್ಣಿನ ಗುಣಗಳು ತಮ್ಮ ಮೂಲ ಆಶಯದೊಂದಿಗೆ ಮತ್ತೆ ಮತ್ತೆ ಚಿಗುರುತ್ತಲೇ ಇರಲಿ. ಅದಕ್ಕಾಗಿ ಮಾನವೀಯ ಮೌಲ್ಯಗಳ ಮಳೆ ನಿರಂತರವಾಗಿ ಸುರಿಯುತ್ತಲೇ ಇರಲಿ.
ಭಾರತ ವಿಶ್ವಕ್ಕೆ ಎಲ್ಲಾ ಒಳ್ಳೆಯತನಗಳ ತವರೂರಾಗಲಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!