ಉಡುಪಿ: ದಿನಾಂಕ:17-08-2026(ಹಾಯ್ ಉಡುಪಿ ನ್ಯೂಸ್) ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಉಡುಪಿಯ ಬನ್ನಂಜೆ ಅಂಬೇಡ್ಕರ್ ಆಟೋ ರಿಕ್ಷಾ ನಿಲ್ದಾಣದ ಮಾಲಕರ ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ನಿಲ್ದಾಣದ ಪ್ರಮುಖ ಮುಖಂಡರಾದ ಶಿವಾನಂದ ಮೂಡುಬೆಟ್ಟು ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಮುಖ ಸಾಮಾಜಿಕ ಹೋರಾಟಗಾರರು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ದಲಿತಪರ ಸಾಮಾಜಿಕ ಹೋರಾಟಗಳು ಹಾಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ (ಮ್ಯಾರಥಾನ್) ಸಾಧನೆ ತೋರಿದ ಶ್ರೀ. ಸಂಜೀವ ಬಲ್ಕೂರ್ ಇವರ ಜನಪರ ಕಾಳಜಿಯನ್ನು ಗುರುತಿಸಿ, ಮಾನ್ಯ ಮಾಜಿ ಶಾಸಕರಾದ ಕೆ. ರಘುಪತಿ ಭಟ್ ಅವರು ಶಾಲು ಹೊದಿಸಿ, ಫಲಕ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, “ಮುಂದಿನ ದಿನಗಳಲ್ಲಿ ನಿಮ್ಮಿಂದ ಸಮಾಜದ ಶೋಷಿತರ ಧ್ವನಿಯಾಗಿ ಜನಪರ ಹೋರಾಟಗಳು ನಿರಂತರವಾಗಿ ಸಾಗಲಿ. ನಿಮ್ಮ ಮ್ಯಾರಥಾನ್ ಓಟವು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶಕ್ಕೆ ಕೀರ್ತಿ ತರಲಿ” ಎಂದು ಹಾರೈಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಚಾಲಕ-ಮಾಲಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
