ಸ್ವಾತಂತ್ರ್ಯ ಯೋಧರ ಸ್ಮರಿಸುತ್ತಾ….
ಓದುವ ತಾಳ್ಮೆ ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ…..
ಮಾನವೀಯತೆ ಮತ್ತು ಭಾರತೀಯತೆ………….
” ಒಳ್ಳೆಯವರಾಗೋಣ “….
ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ, ದೇಶ ಭಕ್ತಿಯ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ……..
ಆತ್ಮೀಯರೆ,
ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ, ಭಾಷೆಯವರೇ ಆಗಿರಿ, ಯಾವ ಸಂದರ್ಭ, ಸನ್ನಿವೇಶ, ಪ್ರದೇಶದಲ್ಲೇ ವಾಸವಾಗಿರಿ, ಯಾವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥರದಲ್ಲೇ ಇರಿ, ಇನ್ನು ಮುಂದೆ ನಿಮ್ಮ ಈಗಿನ ಕೆಟ್ಟತನದಲ್ಲಿ ಕನಿಷ್ಠ ಶೇಕಡಾ 10% ರಷ್ಟು ಕಡಿಮೆ ಮಾಡಿಕೊಳ್ಳಿ. ಅದು ನಿಮ್ಮ ವೈಯಕ್ತಿಕ ನಡವಳಿಕೆಯೇ ಇರಲಿ, ವ್ಯವಹಾರವೇ ಇರಲಿ, ಸಂಬಂಧಗಳಲ್ಲೇ ಇರಲಿ, ಮಾನವೀಯ ಮೌಲ್ಯಗಳಲ್ಲೇ ಇರಲಿ ಕನಿಷ್ಠ ಕನಿಷ್ಠ 10% ಪರ್ಸೆಂಟ್ ಈಗಿನ ಸ್ಥಿತಿಗಿಂತ ಉತ್ತಮ ಪಡಿಸಿಕೊಳ್ಳಿ….
ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ಯಾವುದೇ ಸಂಶೋಧನೆ ಮಾಡಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಈ ಸಮಾಜದ ನಡವಳಿಕೆಯ ಬಗ್ಗೆ ತಿಳಿದೇ ಇರುತ್ತದೆ…..
ಇದೇ ಆಗಸ್ಟ್ 15 ರ ಸ್ವಾತಂತ್ರ್ಯ ದಿನದಿಂದ ಮುಂದಿನ ವರ್ಷದ ಸ್ವಾತಂತ್ರ್ಯ ದಿನದೊಳಗಾಗಿ ಈ ಶೇಕಡಾ10% ಬದಲಾವಣೆ ನಮ್ಮಲ್ಲಿ ಬರಲೇಬೇಕು. ಅದನ್ನು ನಮ್ಮ ಆತ್ಮಸಾಕ್ಷಿಗೆ ಒಪ್ಪಿಸಬೇಕು. ನಮ್ಮ ಚಿಂತನಾ ಕ್ರಮವನ್ನು ವಿಶಾಲ ಮತ್ತು ಹೆಚ್ಚು ನಾಗರಿಕ ಗೊಳಿಸಿಕೊಳ್ಳಬೇಕು. ಸಮಗ್ರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅದು ಈ ದೇಶಕ್ಕೆ, ನಮ್ಮ ಪ್ರೀತಿ ಪಾತ್ರರಿಗೆ, ನಮ್ಮ ಸಂಸ್ಕೃತಿಗೆ, ಈ ಸೃಷ್ಟಿಗೆ ನಾವು ಕೊಡಬಹುದಾದ ಒಂದು ಕಾಣಿಕೆ……
ಉದಾಹರಣೆಗೆ,
ನೀವು ಸರ್ಕಾರಿ ಅಧಿಕಾರಿಯಾಗಿದ್ದು ಇಲ್ಲಿಯವರೆಗೂ ಲಂಚ ಪಡೆಯುವವರಾಗಿದ್ದರೆ ಕನಿಷ್ಠ ಅದರಲ್ಲಿ 10% ಕಡಿಮೆ ಮಾಡಿಕೊಳ್ಳಿ. ತುಂಬಾ ಲಾಭದ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಅತಿ ಎನಿಸಿದರೆ 10% ಬಿಡಿ. ವೈದ್ಯ, ಶಿಕ್ಷಕ, ಪೋಲೀಸ್, ವಕೀಲ, ರಾಜಕಾರಣಿ, ಕಂಟ್ರಾಕ್ಟರ್ ಸೇರಿ ಯಾವುದೇ ವೃತ್ತಿಯಲ್ಲಿ ಇರಿ ಅಲ್ಲಿನ ನಿಮ್ಮ ಮೋಸದ ಪ್ರಮಾಣದಲ್ಲಿ ಕನಿಷ್ಠ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಿ. ಮೋಸ ವಂಚನೆ ಸುಳ್ಳು ಅಸೂಯೆ, ಬೇರೆಯವರ ಬಗ್ಗೆ ಚಾಡಿ, ಕಳ್ಳತನ, ಅತ್ಯಂತ ಕೆಟ್ಟ ಬೈಗುಳ, ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವುದು ಮುಂತಾದ ವಿಷಯಗಳಲ್ಲಿ ಕನಿಷ್ಠ 10% ಕಡಿಮೆ ಮಾಡಿಕೊಳ್ಳಿ…..
ಗೆಳೆಯರೆ ಇದಕ್ಕಾಗಿ ನೀವು ಯಾವುದೇ ವಿಶೇಷ ಶ್ರಮ, ಹಣ, ಸಮಯ ಯಾವುದೂ ಮೀಸಲಿಡಬೇಕಾಗಿಲ್ಲ. ಇದನ್ನು ಓದಿದ ತಕ್ಷಣ ಕೇವಲ 5 ನಿಮಿಷ ಮೌನಕ್ಕೆ ಜಾರಿ ನಿಮಗೆ ಒಪ್ಪಿತ ಎನಿಸಿದರೆ ನಿಮ್ಮ ಅತಿ ಹೆಚ್ಚು ಕೆಟ್ಟತನ ಅನಿಸುವುದರಲ್ಲಿ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ….
ಈ ಸಮಾಜ ಬದಲಾಗಬೇಕು, ನಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಸಮಾಜ ಬಳುವಳಿಯಾಗಿ ನೀಡಬೇಕು ಎಂಬ ಮನೋಭಾವ ನಿಮ್ಮದಾಗಿದ್ದರೆ ದಯವಿಟ್ಟು ದೇಶದ ಮತ್ತು ನಮ್ಮ ಸ್ವಂತ ಹಿತಾಸಕ್ತಿಯಿಂದ ಸ್ವಯಂ ಸ್ಪೂರ್ತಿ ಪಡೆದು ಇದನ್ನು ಪಾಲಿಸೋಣ. ಮುಂದಿನ ಆಗಸ್ಟ್ 15 ರ ನಂತರ ಮತ್ತೆ ಇನ್ನೂ ಹೆಚ್ಚಿನ ಬದಲಾವಣೆಗೆ ಪ್ರಯತ್ನಿಸೋಣ…..
ಇಲ್ಲಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಪಡೆದುಕೊಳ್ಳುವುದೇ ಹೆಚ್ಚು. ಒಂದು ಒಳ್ಳೆಯ ಅನುಭವ ನಮ್ಮದಾಗುತ್ತದೆ.
ಒಂದು ವೇಳೆ ನಿಮ್ಮಲ್ಲಿ ಯಾವುದೇ ಕೆಟ್ಟ ಗುಣ ಇಲ್ಲ ಎಂದು ಭಾವಿಸುವುದಾದರೆ ನಿಮಗೆ ಅಭಿನಂದನೆಗಳು ಮತ್ತು ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಆದರೆ ಇಂದಿನ ಸಮಾಜ ನೋಡಿದರೆ ಬಹುತೇಕ ಕೆಟ್ಟ ನಡವಳಿಕೆಯ ಜನರೇ ಹೆಚ್ಚಾಗಿ ಕಾಣುತ್ತಾರೆ. ಆದ್ದರಿಂದ ನಮ್ಮ ನಮ್ಮ ವಿಲ್ ಪವರ್ ಉಪಯೋಗಿಸಿ ಈ ಮಾನಸಿಕ ನಿಯಂತ್ರಣ ಸಾಧಿಸೋಣ…..
ಕರ್ನಾಟಕದ ಮಟ್ಟಿಗೆ ಇದೊಂದು ಚಳವಳಿಯ ರೂಪ ಪಡೆಯಲು ಪ್ರಯತ್ನಿಸೋಣ. ಒಮ್ಮೆ ವ್ಯಕ್ತಿ ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸಲು ಪ್ರಾರಂಭಿಸಿದರೆ ನಮ್ಮ ಇಂದಿನ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಕಡಿಮೆಯಾಗಿ ಜನರ ನೆಮ್ಮದಿಯ ಮಟ್ಟ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆಗಳು ಸೇರಿ ಅನೇಕ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ….
ವ್ಯಕ್ತಿ ಒಳ್ಳೆಯವನಾಗದೆ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಯಾವುದೇ ಕಾನೂನು, ಯಾವುದೇ ಶಿಕ್ಷೆಯ ಭಯ ಜನರನ್ನು ಬದಲಾಯಿಸಲಾರದು. ರೈತರ, ಕಾರ್ಮಿಕರ, ಮಹಿಳೆಯರ, ಜಾತಿ ವ್ಯವಸ್ಥೆಯ, ಭ್ರಷ್ಟಾಚಾರದ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಬಲ್ಲ ಈ
” ಒಳ್ಳೆಯವರಾಗಿ ” ಬದಲಾಗುವ ಚಳವಳಿಗೆ ನಿಮ್ಮನ್ನು ಸ್ವಾಗತಿಸುತ್ತಾ,
ನಿಮ್ಮ ಸಹಕಾರ ನಿರೀಕ್ಷಿಸುತ್ತಾ….
ಇದಕ್ಕೆ ಆ…. ಓ…. ಎಂಬ ಪ್ರಚಾರದ ಅವಶ್ಯಕತೆ ಇಲ್ಲ. ನಿಂತ ನೆಲೆಯಲ್ಲೇ ಒಂದು ಪ್ರತಿಜ್ಞಾ ನಿರ್ಧಾರ ಕೈಗೊಂಡು ಸಾಮೂಹಿಕವಾಗಿ ಇದನ್ನು ಪಾಲಿಸೋಣ.
2026 ರ ಆಗಸ್ಟ್ 15 ರಿಂದ
” ಒಳ್ಳೆಯವರಾಗೋಣ “…
ಭಾರತೀಯತೆ…….
ವಿಶ್ವ ಮಾನವತೆ ಅತಿ ಎತ್ತರದ ಆದರ್ಶ, ಸದ್ಯಕ್ಕೆ ಆ ಎತ್ತರಕ್ಕೆ ನಾವು ಏರಲಾಗುವುದಿಲ್ಲ,
ಕನಿಷ್ಠ ಮೇಲೆ ನೋಡುತ್ತಾ ಹತ್ತುವ ಪ್ರಯತ್ನ ಮಾಡಬಹುದು…..
ಆದರೆ,
ಕೈಗೆಟುಕುವ ವಾಸ್ತವೆವೆಂದರೆ
” ಭಾರತೀಯತೆ “
ವ್ಯಕ್ತಿ ಕೇಂದ್ರಿತ ಭಾರತೀಯತೆ ನಮ್ಮ ಬಹುತೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.
ಇದು ತೀರಾ ಅಸಾಧ್ಯವೇನಲ್ಲ.
ಸರಳವಾಗಿ ಹೇಳಬೇಕೆಂದರೆ,
ನನ್ನ ಧರ್ಮ ಭಾರತೀಯತೆ ,
ನನ್ನ ಜಾತಿ ಭಾರತೀಯತೆ,
ನನ್ನ ಮಾತು ಭಾರತೀಯ ಭಾಷೆ,
ನನ್ನ ಸಿದ್ಧಾಂತ ಭಾರತೀಯತೆ,
ನನ್ನ ಸಂಪ್ರದಾಯ ಭಾರತೀಯತೆ ,
ನನ್ನ ನಡವಳಿಕೆ ಭಾರತೀಯತೆ,
ನನ್ನ ಯೋಚನಾ ಕ್ರಮ ಭಾರತೀಯತೆ,
ಕೊನೆಗೆ ನನ್ನ ನಿಷ್ಠೆ ಭಾರತೀಯ ಸಂವಿಧಾನಕ್ಕೆ….
ಹೀಗೆ ವೈವಿಧ್ಯತೆಯನ್ನು ಉಳಿಸಿಕೊಂಡು ಸಮಾನತೆಯ ಆಧಾರದಲ್ಲಿ ಮಾನವೀಯ ನೆಲೆಯ ಭಾರತೀಯತೆ ಎಂಬ ಸಧ್ಯದ ಸಾರ್ವತ್ರಿಕ ಸತ್ಯ ಅಳವಡಿಸಿಕೊಂಡರೆ ಏಕತೆ ತಾನೇ ತಾನಾಗಿ ಬರುತ್ತದೆ.
ವ್ಯಕ್ತಿ ಮತ್ತು ದೇಶದ ಹಿತಚಿಂತನೆಯೇ ಭಾರತೀಯತೆ.
ಇದರಲ್ಲಿ ಭ್ರಷ್ಟಾಚಾರಕ್ಕೂ ಪರಿಹಾರವಿದೆ, ಸ್ತ್ರೀ ಸ್ವಾತಂತ್ರ್ಯಕ್ಕೂ ಉತ್ತರವಿದೆ.
ಮೀಸಲಾತಿ ಎಂಬುದು ಇಲ್ಲಿ ಸಮಸ್ಯೆಯೇ ಅಲ್ಲ.
ಏಕರೂಪದ ನಾಗರೀಕ ಸಂಹಿತೆ ಎಂಬ ಗೊಂದಲಕ್ಕೂ ಇದು ಮದ್ದಾಗಬಹುದು. ದೇಶಭಕ್ತ – ದೇಶದ್ರೋಹಿ ಎಂಬುದಕ್ಕೂ ಇಲ್ಲಿ ಅರ್ಥ ಸಿಗಬಹುದು…..
ಅಂತಿಮವಾಗಿ ಭಾರತೀಯತೆ ಸಣ್ಣ ಮನಸ್ಸುಗಳ, ಕ್ಷುಲ್ಲುಕ ಚಿಂತನೆಯ ಅತಿ ರಂಜಿತ ಭಾವನಾತ್ಮಕತೆಯಲ್ಲ.
ವಾಸ್ತವ ದೃಷ್ಟಿಕೋನದ ಪ್ರಬುದ್ಧ ಮನಸ್ಸಿನ ವೈವಿಧ್ಯ ಜೀವನಶೈಲಿಯ,
ಸಮಾನತೆ, ಸೋದರತೆ, ಸೌಹಾರ್ದತೆ, ಮಾನವೀಯತೆ ಸಾರುವ ಬದುಕಿನ ವಿಧಾನ…..
ಎಷ್ಟೊಂದು ಬದುಕುಗಳು ನಮಗಾಗಿ ನೊಂದಿವೆ, ಬೆಂದಿವೆ, ಮಡಿದಿವೆ ನೆನಪಿರಲಿ……
ಸ್ವಾತಂತ್ರ್ಯದ ಕರೆಗಾಗಿ
ಮನೆ ಮಠಗಳ ಮರೆತು,
ಬಂಧು ಬಳಗದವರ ತೊರೆದು,
ಶಿಕ್ಷಣಕ್ಕೆ ಮಂಗಳ ಹಾಡಿ, ಹೋರಾಟದಲ್ಲಿ ಧುಮಕಿ, ಬದುಕಿಗೇ ವಿದಾಯ ಹೇಳಿದ ತ್ಯಾಗ ಜೀವಿಗಳ ಮರೆಯದಿರೋಣ….
ನಗುನಗುತ್ತಾ ಗಲ್ಲಿಗೇರಿದ,
ಧೈರ್ಯದಿಂದ ಬಂದೂಕಿನ ಗುಂಡಿಗೆ ಎದೆಯೊಡ್ಡಿದ,
ಜೈಲಿನ ಗೋಡೆಗಳ ನಡುವೆ ಪ್ರಾಣ ಬಿಟ್ಟ ನಮ್ಮ ಪೂರ್ವಿಕರ ನೆನಪಾಗಲಿ……
ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ನಮ್ಮ ಸ್ವಾತಂತ್ರ್ಯದ ಪ್ರತಿ ಉಸಿರಿನಲ್ಲಿ ನೆನಪಾಗದಿದ್ದರೆ ನಮ್ಮಷ್ಟು ನಮಕ್ ಹರಾಮ್ ಗಳು ಯಾರೂ ಇಲ್ಲ…..
ಭೀಮ್ ರಾವ್ ರಾವ್ ಜಿ ಅಂಬೇಡ್ಕರ್ ಎಂಬ ವ್ಯಕ್ತಿ ನಮ್ಮ ಬದುಕಿನ ಪ್ರತಿ ಕ್ಷಣದಲ್ಲಿ ನೆನಪಾಗದಿದ್ದರೆ ನಮ್ಮಷ್ಟು ನಂಬಿಕೆ ದ್ರೋಹಿಗಳು ಮತ್ಯಾರು ಇಲ್ಲ…….
ಸುಭಾಷ್ ಚಂದ್ರ ಬೋಸ್ ಎಂಬ ವ್ಯಕ್ತಿ ನಮ್ಮ ಬಾವುಟದ ಹಾರಾಟದಲ್ಲಿ ನಮ್ಮ ಮನಸ್ಸಿಗೆ ನೆನಪಾಗದಿದ್ದರೆ ನಮ್ಮ ಸ್ವಾತಂತ್ರ್ಯ ಅಮೃತ ಮಹೋತ್ಸವ ವ್ಯರ್ಥ……
ಚಂದ್ರ ಶೇಖರ್ ಆಜಾದ್ – ಭಗತ್ ಸಿಂಗ್ – ಮಂಗಲ್ ಪಾಂಡೆ – ಖುದಿರಾಂ ಭೋಸ್ – ಉದಂಮ್ ಸಿಂಗ್ ಈ ಸಮಯದಲ್ಲಿ ನೆನಪಾಗದಿದ್ದರೆ ನಮ್ಮಷ್ಟು ಕೃತಜ್ನರು ಯಾರೂ ಇರುವುದಿಲ್ಲ……
ಪಂಡಿತ್ ಜವಹರಲಾಲ್ ನೆಹರು – ಸರ್ದಾರ್ ವಲ್ಲಭಭಾಯ್ ಪಟೇಲ್ ನೀಡಿದ ಕೊಡುಗೆಗಳು ನೆನಪಾಗದಿದ್ದರೆ ನಮ್ಮ ಸ್ವಾತಂತ್ರ್ಯದ ಅರ್ಥ ಪರಿಪೂರ್ಣವಾಗುವುದಿಲ್ಲ.
ವೀರ ಸಾರ್ವರ್ಕರ್ ಅಂಡಮಾನಿನ ಜೈಲಿನಲ್ಲಿ ಅನುಭವಿಸಿದ ನರಕಯಾತನೆ ನೆನಪಾಗದಿದ್ದರೆ ನಮ್ಮ ಸ್ವಾತಂತ್ರ್ಯದ ಇತಿಹಾಸಕ್ಕೆ ಅರ್ಥವೇ ಇರುವುದಿಲ್ಲ…..
ಝಾನ್ಸಿ ರಾಣಿ ಲಕ್ಷ್ಮೀಬಾಯಿ – ಕಿತ್ತೂರು ಚೆನ್ನಮ್ಮ ಈ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಮೂಡದಿದ್ದರೆ ನಮ್ಮಷ್ಟು ಮೂಢರು ಯಾರು ಇಲ್ಲ ಎಂದು ನಾವೇ ಭಾವಿಸಬಹುದು……
ಜಲಿಯನ್ ವಾಲಾಬಾಗ್ ಹತ್ಯಾಕಾಂಡ – ಭೀಮ ಕೊರೆಗಾಂವ್ ಹೋರಾಟ ನಮ್ಮ ಮನದಾಳದಲ್ಲಿ ನೆನಪಾಗದಿದ್ದರೆ ನಮ್ಮಷ್ಟು ಆತ್ಮವಂಚಕರು ಮತ್ಯಾರು ಇರುವುದು ಸಾಧ್ಯವಿಲ್ಲ…….
1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ ವೀರ ಯೋಧರು ಈ ಕ್ಷಣದಲ್ಲಿ ನಮಗೆ ನೆನಪಾಗದಿದ್ದರೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಬೆಲೆಯೇ ಇರುವುದಿಲ್ಲ……
ಗೋಪಾಲ ಕೃಷ್ಣ ಗೋಖಲೆ – ಬಾಲ ಗಂಗಾಧರ ತಿಲಕ್ – ದಾದಾಭಾಯ್ ನವರೋಜಿ – ಛತ್ರಪತಿ ಶಿವಾಜಿ – ಡಬ್ಲ್ಯೂ ಸಿ ಬ್ಯಾನರ್ಜಿ – ಬಿಪಿನ್ ಚಂದ್ರ ಪಾಲ್ – ಲಾಲ ಲಜಪತ್ ರಾಯ್ – ಮೌಲಾನ ಅಬ್ದುಲ್ ಕಲಾಂ ಆಜಾದ್ – ಸರೋಜಿನಿ ನಾಯ್ಡು – ಅರುಣ ಅಸ್ರಪ್ ಅಲಿ – ರಾಮ್ ಪ್ರಸಾದ್ ಬಿಸ್ಮಿಲ್ಲಾ – ಅಲ್ಲೂರಿ ಸೀತಾ ರಾಮ ರಾಜು – ಅರವಿಂದ್ ಘೋಷ್ – ಲಾಲ್ ಬಹಾದ್ದೂರ್ ಶಾಸ್ತ್ರಿ – ಲಕ್ಷ್ಮೀ ಸೆಹಗಲ್ – ಸಾವಿತ್ರಿ ಬಾಯಿ ಪುಲೆ ನೆನಪಾಗದಿದ್ದರೆ ನಮ್ಮ ಧ್ವಜಗಳ ಹಾರಾಟದ ಸಂಭ್ರಮಕ್ಕೆ ಸರಿಯಾದ ಅರ್ಥ ಇರುವುದಿಲ್ಲ…..
ಟಿಪ್ಪು ಸುಲ್ತಾನ್ – ಸಂಗೊಳ್ಳಿ ರಾಯಣ್ಣ – ಹರ್ಡಿಕರ್ ಮಂಜಪ್ಪ – ಕಾರ್ನಾಡ್ ಸದಾಶಿವರಾಯರು – ಒನಕೆ ಓಬವ್ವ – ಸೇವಾದಳ ಸ್ಥಾಪಿಸಿದ ಎನ್. ಎಸ್ .ಹರ್ಡೇಕರ್ ನೆನಪಾಗದಿದ್ದರೆ ಅದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಪೂರ್ಣ ಆಚರಣೆಯಾಗುತ್ತದೆ…..
ಇದು ಕೆಲವು ಸಾಂಕೇತಿಕ ಹೆಸರುಗಳು. ಇದನ್ನು ಮೀರಿ ಲಕ್ಷ – ಕೋಟಿ ಜನರ ತ್ಯಾಗ ಬಲಿದಾನಗಳ ಫಲ ನಾವು ಉಣ್ಣುತ್ತಿದ್ದೇವೆ. ಬಾವುಟಗಳ ಹಾರಾಟದ ನೆಪದಲ್ಲಿ ಈ ವ್ಯಕ್ತಿಗಳು ನಮಗೆ ಸ್ಪೂರ್ತಿಯಾಗಿ ನಮ್ಮ ಸಾಕ್ಷಿ ಪ್ರಜ್ಞೆ ಜಾಗೃತವಾಗಿ ಒಂದಷ್ಟು ಪ್ರಾಮಾಣಿಕತೆ – ಒಂದಷ್ಟು ಬದ್ದತೆ – ಒಂದಷ್ಟು ಶುದ್ಧತೆ – ಒಂದಷ್ಟು ಜೀವಪರತೆ – ಒಂದಷ್ಟು ದೇಶಭಕ್ತಿ ನಮ್ಮಲ್ಲಿ ಮೊಳಕೆಯೊಡೆಯಲಿ……
ಭಾರತೀಯತೆ ಎಂಬ ಆತ್ಮ ನಮ್ಮೆಲ್ಲರೊಳಗೂ ಬೆಳುಗುತ್ತಿದೆಯೇ …………
ಅಲೆಗ್ಸಾಂಡರ್ ದಾಳಿ ಮಾಡಿದಾಗಲೂ ಭಾರತ ಒಗ್ಗಟ್ಟಾಗಿರಲಿಲ್ಲ. ಆಗಲೂ ಒಡೆದು ಚೂರು ಚೂರಾಗಿತ್ತು. ಒಟ್ಟಾಗಿದ್ದಿದ್ದರೆ ಅಲೆಗ್ಸಾಂಡರ್ ಹಿಮ್ಮೆಟ್ಟಬೇಕಾಗುತ್ತಿತ್ತು.
ಘೋರಿ ಘಜ್ನಿ ಛಂಗೇಸ್ ಖಾನ್ ಗಳು ದಾಳಿ ಮಾಡಿದಾಗಲೂ ಭಾರತ ಒಂದಾಗಿರಲಿಲ್ಲ. ಇದ್ದಿದ್ದರೆ ಅವರು ನಮಗೆ ಯಾವ ಲೆಕ್ಕವೂ ಅಲ್ಲ ಎಂಬಂತಾಗುತ್ತಿತ್ತು.
ಪ್ರೆಂಚರು, ಡಚ್ಚರು, ಇಂಗ್ಲೀಷರು ನಮ್ಮನ್ನು ವ್ಯಾಪಾರ ನೆಪದಲ್ಲಿ ಆಕ್ರಮಿಸಿಕೊಳ್ಳುವಾಗಲೂ ನಾವು ಐಕ್ಯತೆಯಿಂದ ಇರಲಿಲ್ಲ. ಅದೇ ಕಾರಣದಿಂದ ಅವರು ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರು.
ಸ್ವಾತಂತ್ರ್ಯ ಬಂದು ಒಕ್ಕೂಟ ವ್ಯವಸ್ಥೆ ಸ್ಥಾಪನೆಯಾಗಿ 79 ವರ್ಷಗಳಾದರೂ ಈಗಲೂ ನಾವು ಒಗ್ಗಟ್ಟಾಗಿಯೇ ಇಲ್ಲ.
ಒಂದು ವೇಳೆ ಚೀನಾ ದೇಶವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ….
ಎಲ್ಲಾ ಭಾವನೆಗಳನ್ನು ಬದಿಗಿಟ್ಟು ವಾಸ್ತವ ನೆಲೆಯಲ್ಲಿ ಯೋಚಿಸಿದರೆ ಅದನ್ನು ಸಂಪೂರ್ಣ ತಡೆಯುವುದು ಕಷ್ಟ. ಈಗಾಗಲೇ ಒಮ್ಮೆ ಸೋತಿದ್ದೇವೆ. ಈಗ ಗೆಲ್ಲುತ್ತೇವೆ ಎನ್ನುವುದು ಹುಸಿ ದೇಶಭಕ್ತಿ ಅಷ್ಟೆ.
ಇದಕ್ಕೆ ಕಾರಣ ನಮ್ಮ ಅಸಾಮರ್ಥ್ಯವಲ್ಲ ನಮ್ಮಲ್ಲಿರುವ ಅಪನಂಬಿಕೆ ಮತ್ತು ಛಿದ್ರ ಛಿದ್ರ ಸಮುದಾಯಗಳು ಕಾರಣ.
ಕೋಟ್ಯಾಂತರ ದೇವರುಗಳು,
ಲಕ್ಷಾಂತರ ಜಾತಿಗಳು,
ಸಾವಿರಾರು ಧರ್ಮಗಳು,
ನೂರಾರು ಭಾಷೆಗಳು,
ಬಹುದೊಡ್ಡ ಸಂವಿಧಾನ….
ಇವು ಭಾರತಕ್ಕೆ ಹೆಮ್ಮೆ ಎಂದು ಪರಿಗಣಿಸಬಹುದಾದರೂ,
” ಭಿನ್ನತೆಯಲ್ಲೂ ಐಕ್ಯತೆ ನಮ್ಮ ಶ್ರೇಷ್ಠತೆ ” ಎಂದು ಹೇಳಿಕೊಳ್ಳಬಹುದಾದರೂ,
ನಿಜವಾಗಲೂ ಕಾಣೆಯಾಗಿರುವುದು….
ಭಾರತೀಯತೆ ಎಂಬ ಆತ್ಮ,
ಮಾನವೀಯತೆ ಎಂಬ ಮನಸ್ಸು,
ಸಮಾನತೆ ಎಂಬ ಹೃದಯ,
ನಾಗರಿಕ ಪ್ರಜ್ಞೆ ಎಂಬ ಜ್ಞಾನ,
ಬಹುತ್ವ ಭಾರತದ ಸ್ವೀಕಾರ,
ಇವು ಜಾಗೃತವಾದಲ್ಲಿ ಎಲ್ಲಾ ಭಿನ್ನತೆಗಳೂ ಇದರಲ್ಲಿ ಐಕ್ಯವಾಗುತ್ತದೆ. ಆಗ ನಾವೇ ಬಲಿಷ್ಠ
ಇದು ನಮ್ಮೆಲ್ಲರಲ್ಲೂ ಮೂಡಿದಲ್ಲಿ ನಮ್ಮನ್ನು ಯಾವ ದಾಳಿ ಕೋರರೂ ಮುಟ್ಟಲು ಸಾಧ್ಯವಿಲ್ಲ.
ಅಲ್ಲಿಯವರೆಗೂ ಆತಂಕ ತಪ್ಪಿದ್ದಲ್ಲ…………….
ಯಾವ ಹಬ್ಬಗಳಲ್ಲಿ ಅಥವಾ ಯಾವ ಹೊಸ ವರ್ಷದ ದಿನಗಳಲ್ಲಿ ನೀವು ಏನೇನು ಸಂಕಲ್ಪಗಳನ್ನು ಮಾಡಿಕೊಳ್ಳುತ್ತಿರೋ ಗೊತ್ತಿಲ್ಲ.,
ಆದರೆ ಈ 80ನೇ ಸ್ವಾತಂತ್ರ್ಯ ದಿನದಂದು ಸಾಮಾಜಿಕ ಜವಾಬ್ದಾರಿಯಿಂದ ಭಾರತದ ಮಣ್ಣಿನ ಋಣ ತೀರಿಸುವಂತ ಸರಳ, ಸಹಜ ಮತ್ತು ಅನುಸರಿಸಲು ಸಾಧ್ಯವಾಗುವಂತ ಕನಿಷ್ಠ,
ಕೆಲವು ಮತ್ತಷ್ಟು ಸಂಕಲ್ಪಗಳನ್ನು ಮಾಡಿಕೊಳ್ಳೋಣ..
1). ಎಷ್ಟೇ ಅಸಮಾಧಾನ – ಅತೃಪ್ತಿ – ಅಸಹನೆ ಇದ್ದರೂ ಈ ದೇಶದ ಹಿತಾಸಕ್ತಿಯ ವಿಷಯ ಬಂದಾಗ ನಾನು ಯಾವುದೇ ಜಾತಿ ಮತ ಪಂಥ ವಾದಗಳಿಗಿಂತ ಈ ನೆಲವನ್ನೇ ಪ್ರೀತಿಸುತ್ತೇನೆ….
2) ಇಲ್ಲಿನ ಜನರ ಅಭಿಪ್ರಾಯಗಳು ಎಷ್ಟೇ ಭಿನ್ನವಾಗಿದ್ದರೂ ಅವರೊಂದಿಗೆ ವೈಮನಸ್ಯ ಹೊಂದಿದ್ದರೂ ಅವರು ಭಾರತೀಯತೆಯನ್ನು ಒಪ್ಪಿದಲ್ಲಿ ಅವರನ್ನು ಸಹೋದರರಂತೆ ಕಾಣುತ್ತೇನೆ ಅಥವಾ ಕನಿಷ್ಠ ಅವರನ್ನೆಂದೂ ದ್ವೇಷಿಸುವುದಿಲ್ಲ…….
3) ಧರ್ಮ – ಭಾಷೆ – ಜಾತಿ ಮತ್ತು ಪ್ರಾಂತ್ಯದ ಆಧಾರದಲ್ಲಿ ಈ ದೇಶವನ್ನು ವಿಭಜಿಸುವ ಶಕ್ತಿಗಳು ಅದೆಷ್ಟೇ ಜನಪ್ರಿಯರು – ಪ್ರಖ್ಯಾತರು ಆಗಿದ್ದರೂ ಅದನ್ನು ನನ್ನ ಮಟ್ಟದಲ್ಲಿ ಬಲವಾಗಿ ವಿರೋಧಿಸುತ್ತೇನೆ...
4) ಹಾಲು, ಅನ್ನ ಮುಂತಾದ ಆಹಾರದ ವಿಷಯಗಳಲ್ಲಿ ಯಾವುದೇ ರೀತಿಯ ಕಲಬೆರಕೆ ನನ್ನ ಗಮನಕ್ಕೆ ಬಂದರೆ ಅದನ್ನು ಮಾನವ ದ್ರೋಹ – ದೇಶ ದ್ರೋಹ ಎಂದು ಪರಿಗಣಿಸಿ ಎಷ್ಟೇ ಕಷ್ಟವಾದರೂ ಅದರ ವಿರುದ್ಧ ಪೋಲಿಸ್ ಅಥವಾ ಆಹಾರ ಇಲಾಖೆಯ ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ………
5) ನನ್ನ ದೇಶದ ಎಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಇರುವ ಸಂದರ್ಭದಲ್ಲಿ ನಾನು ಮನೆ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಊಟ ಮಾಡುವಾಗ ನನ್ನ ತಟ್ಟೆಯಲ್ಲಿ/ಎಲೆಯಲ್ಲಿ ಆಹಾರ ವ್ಯರ್ಥವಾಗದಿರುವಂತೆ ಎಚ್ವರಿಕೆ ವಹಿಸುತ್ತೇನೆ.
6) ಈ ವ್ಯವಸ್ಥೆಯ ಒಳ್ಳೆಯ ಅಂಶಗಳನ್ನು ಜವಾಬ್ದಾರಿಯಿಂದ ಒಪ್ಪಿಕೊಳ್ಳುತ್ತಾ ಸಾಧ್ಯವಾದಷ್ಟು ಅನುಸರಿಸಲು ಪ್ರಯತ್ನಿಸುತ್ತೇನೆ ಮತ್ತು ಕೆಟ್ಟ ಅಂಶಗಳನ್ನು ಬದಲಾಯಿಸಲು ಮುಂದಿನ ದಿನಗಳಲ್ಲಿ ಮಾನಸಿಕವಾಗಿ ಜಾಗೃತಾವಸ್ಥೆಯ ಸ್ಥಿತಿಯಲ್ಲಿರುತ್ತೇನೆ……
ನಿಧಾನವಾಗಿ ಬದಲಾವಣೆಯತ್ತ ಸಾಗೋಣ.
ನಿಜ ನಾಗರಿಕ ಸಮಾಜದ ಹತ್ತಿರಕ್ಕೆ ತಲುಪೋಣ.
ನಮ್ಮ ಹಿರಿಯರು – ನಮ್ಮ ಮಕ್ಕಳು ಆಶ್ಚರ್ಯಪಡುವಂತೆ ನಮ್ಮ ನಡವಳಿಕೆಗಳಲ್ಲಿ ಆದರ್ಶ ಕಾಪಾಡೋಣ……..
ಇದೇನು ಕಷ್ಟವಲ್ಲ,
ಎಂದಿನ ನಮ್ಮ ದಿನಚರಿಯಲ್ಲಿಯೇ – ಈಗಿನ ಜೀವನಶೈಲಿಯಲ್ಲಿಯೇ ಇದನ್ನು ಸರಳವಾಗಿ ಅಳವಡಿಸಿಕೊಳ್ಳಬಹುದು.
ನಮಗಾಗಿ – ನಾಡಿಗಾಗಿ ಈ ಸ್ವಾತಂತ್ರ್ಯ ದಿನದಂದು ಕನಿಷ್ಠ ಇಷ್ಟಾದರೂ ಮಾಡೋಣ………..
ಹಾಡಿ ಕುಣಿದು ಕುಪ್ಪಳಿಸಿ ಭಾಷಣಗಳನ್ನು ಮಾಡುವುದಕ್ಕಿಂತ ಇದು ಉತ್ತಮ ಎಂದೇ ಭಾವಿಸುತ್ತೇನೆ..
ನಾನೂ ಕೂಡ ಈ ಕ್ಷಣದಿಂದಲೇ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
