n7212382651785232938005183b9b26531c8b6721f9b9bea3efa3a1db4aa1422e83720693a78f7764faba1b.jpg
Spread the love

ದಿನಾಂಕ: 28-07-2026(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ನಗರದ ರಸ್ತೆ ಬದಿಯಲ್ಲಿ ಒಂಟಿಯಾಗಿ ನಿಂತಿದ್ದ ಯುವತಿಗೆ ಅಸಭ್ಯವಾಗಿ ಮಾತನಾಡಿಸಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯೊಬ್ಬನನ್ನು ರಾಮಮೂರ್ತಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಾಮಮೂರ್ತಿನಗರದ ಎನ್‌ಆರ್‌ಐ ಲೇಔಟ್‌ನ ನಿವಾಸಿಯಾಗಿರುವ, ಹಣ್ಣಿನ ವ್ಯಾಪಾರ ಮಾಡುವ ವಿಜಯರಾಘವ್ (42) ಬಂಧಿತ ಆರೋಪಿ.

ಕಳೆದ ದಿನ 26 ವರ್ಷದ ಯುವತಿಯೊಬ್ಬರು ರಸ್ತೆಯಲ್ಲಿ ಕ್ಯಾಬ್ ಬರುವಿಕೆಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ವಿಜಯರಾಘವ್, ಯುವತಿಯ ಬಳಿ ವಾಹನ ತಡೆದು ಅತ್ಯಂತ ಕೆಟ್ಟ ರೀತಿಯಲ್ಲಿ ಬೆಲೆ ಕೇಳಿ (ರೇಟ್ ಎಷ್ಟು?) ಲೈಂಗಿಕವಾಗಿ ನಿಂದಿಸಿದ್ದಾನೆ. ಧೈರ್ಯಗೆಡದ ಯುವತಿ ತಕ್ಷಣವೇ ತಮ್ಮ ಮೊಬೈಲ್ ಫೋನ್ ತೆಗೆದು ಆತನ ಚರ್ಯೆಯನ್ನು ವೀಡಿಯೋ ಮಾಡಲು ಮುಂದಾಗಿದ್ದಾರೆ.

ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರೂ ಲೆಕ್ಕಿಸದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಮುಂದುವರಿಸಿದ್ದಾನೆ. ಆದರೆ, ತನ್ನ ಮುಖ ಹಾಗೂ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ವೀಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗುತ್ತಿರುವುದನ್ನು ಗಮನಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ತಮಗಾದ ಲೈಂಗಿಕ ಕಿರುಕುಳದ ದೃಶ್ಯಾವಳಿಗಳನ್ನು ಯುವತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. “ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಒಂಟಿಯಾಗಿ ರಸ್ತೆಗೆ ಬರಲು ಸಾಧ್ಯವಿಲ್ಲವೇ?” ಎಂದು ಆತಂಕ ವ್ಯಕ್ತಪಡಿಸಿದ್ದ ಅವರು, ಬೆಂಗಳೂರು ನಗರ ಪೊಲೀಸರ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿದ್ದರು.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಮಮೂರ್ತಿನಗರ ಠಾಣೆ ಪೊಲೀಸರು, ವೀಡಿಯೋದಲ್ಲಿದ್ದ ವಾಹನದ ಸಂಖ್ಯೆ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

error: No Copying!