ದಿನಾಂಕ:27-07-2026(ಹಾಯ್ ಉಡುಪಿ ನ್ಯೂಸ್)
ಕಾಪು: ಬಸ್ ಸಮಯ (ಟೈಮಿಂಗ್ಸ್) ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಜಗಳವಾಡಿ, ಸಾರ್ವಜನಿಕರ ಶಾಂತಿಗೆ ಭಂಗ ತಂದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬಸ್ ಚಾಲಕರು ಹಾಗೂ ಇಬ್ಬರು ಕಂಡಕ್ಟರ್‌ಗಳನ್ನು ಕಾಪು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಎರಡು ಬಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಿನಾಂಕ : 27-07-2026 ರಂದು ಬೆಳಿಗ್ಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ಪಡು ಗ್ರಾಮದ ಕಾಪು ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿಯಿರುವ ಬಸ್ ನಿಲ್ದಾಣದ ಎದುರು ಈ ಘಟನೆ ನಡೆದಿದೆ.
ಬಸ್ ಟೈಮಿಂಗ್ಸ್ ವಿಚಾರವಾಗಿ ‘ಸಂದೇಶ್’ (SANDESH – KA 20 AB 5493) ಬಸ್ ಹಾಗೂ **‘ಆನಂದ್’ (ANAND – KA 19 AE 1095) ಬಸ್ಸುಗಳ ಚಾಲಕರು ಮತ್ತು ಕಂಡಕ್ಟರ್‌ಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಸಿಬ್ಬಂದಿ ಪರಸ್ಪರ ಬಸ್ಸುಗಳನ್ನು ತಾಗಿಸಿಕೊಂಡು, ಕೈ-ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗಿತ್ತು.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳಾದ 1. ರಮೇಶ್ (ಬಸ್ ಚಾಲಕ)2. ಅಭಿಷೇಕ್ (ಬಸ್ ಚಾಲಕ)3.ವಿಜಯಕುಮಾರ್(ಬಸ್ ಕಂಡಕ್ಟರ್)
4. ಹರೀಶ್ ಬಿ. ಹೆಗ್ಡೆ (ಬಸ್ ಕಂಡಕ್ಟರ್)
ಪೋಲಿಸರು ನಾಲ್ವರೂ ಆಪಾದಿತರನ್ನು ಹಾಗೂ ಕೃತ್ಯದಲ್ಲಿದ್ದ KA 20 AB 5493 ಮತ್ತು KA 19 AE 1095 ನೋಂದಣಿಯ ಎರಡೂ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ತನಿಖೆಯನ್ನು ಮುಂದುವರಿಸಿದ್ದಾರೆ.
