ದಿನಾಂಕ:23-07-2026 (ಹಾಯ್ ಉಡುಪಿ ನ್ಯೂಸ್)
ಉಡುಪಿ: ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ಇಂದು ಉಡುಪಿ ಹಳೆ ಜಟ್ಕಾ ಸ್ಟ್ಯಾಂಡ್ ಎದುರು ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ ಉಡುಪಿ, ಎಸ್.ಐ.ಓ ಉಡುಪಿ ಹಾಗೂ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಸಹಯೋಗದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಫಣಿರಾಜ್, ”ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಿದ ಈ ತೀವ್ರ ಅವ್ಯವಸ್ಥೆಗೆ ಹೊಣೆಗಾರರನ್ನು ಹೊಣೆಗಾರರನ್ನಾಗಿ ಮಾಡುವುದು ಪ್ರಜಾಪ್ರಭುತ್ವದ ಮೂಲಭೂತ ಬೇಡಿಕೆಯಾಗಿದೆ. ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದ ಇಂತಹ ಜವಾಬ್ದಾರಿರಹಿತ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಆಕ್ರೋಶ ಹೊರಹಾಕಿದರು.
ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಲಡಾಖ್‌ನ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಜಂತರ್ ಮಂತರ್‌ನಲ್ಲಿ ಸತತ 21 ದಿನಗಳ ಕಾಲ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆರೋಗ್ಯದ ನೆಪವೊಡ್ಡಿ ಅವರ ಸಮ್ಮತಿಯಿಲ್ಲದೆ ಬಲವಂತವಾಗಿ ಸತ್ಯಾಗ್ರಹ ಸ್ಥಳದಿಂದ ತೆರವುಗೊಳಿಸಿದ ಸರ್ಕಾರದ ಕ್ರಮವನ್ನು ಖಂಡಿಸಿದರು.
ಜುಲೈ 20 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ, 18 ರಿಂದ 75 ವರ್ಷದವರೆಗಿನ ಸುಮಾರು 50 ರಿಂದ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವಜನರು ಮತ್ತು ನಾಗರಿಕರು ಜಂತರ್ ಮಂತರ್‌ನಲ್ಲಿ ಜಮಾಯಿಸಿ ಸಂಸತ್ತಿನತ್ತ ಶಾಂತಿಯುತ ಮೆರವಣಿಗೆಗೆ ಮುಂದಾಗಿದ್ದರು. ಮೆರವಣಿಗೆಯನ್ನು ತಡೆಯಲು ಜಂತರ್ ಮಂತರ್ ಸುತ್ತಲೂ ಬ್ಯಾರಿಕೇಡ್‌ಗಳನ್ನು ವೆಲ್ಡ್ ಮಾಡಿ, ಗೇಟ್‌ಗಳನ್ನು ಅಳವಡಿಸಿ ಇಡೀ ಪ್ರತಿಭಟನಾ ಸ್ಥಳವನ್ನು ಜೈಲಿನಂತೆ ಪರಿವರ್ತಿಸಲಾಗಿತ್ತು.
ವಿದ್ಯಾರ್ಥಿಗಳು ಶಾಂತಿಯುತವಾಗಿ ಮೆರವಣಿಗೆ ಪ್ರಾರಂಭಿಸುತ್ತಿದ್ದಂತೆ ದೆಹಲಿ ಪೊಲೀಸ್, RAF ಮತ್ತು CRPF ಪಡೆಗಳು ರೊಚ್ಚಿಗೆದ್ದು ಕ್ರೂರ ಲಾಠಿಚಾರ್ಜ್ ನಡೆಸಿದ್ದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಎಲೆಕ್ಟ್ರಿಕ್ ಶೋಕ್ ನೀಡುವ ಲಾಠಿಗಳು, ಪೆಲ್ಲೆಟ್ ಗನ್ ಮತ್ತು ಅಶ್ರುವಾಯು ಬಳಸಿದ್ದರಿಂದ 100 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನಾಲ್ವರ ಸ್ಥಿತಿ ತೀರ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ ಇದು ಅತ್ಯಂತ ಅಮಾನವೀಯ ವರ್ತನೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಡಾರಿಟಿಯ ಅಫ್ವಾನ್ ಬಿ, ಸಂವರ್ತ್ ಸಾಹೀಲ್, ಹುಸೇನ್ ಕೋಡಿಬೆಂಗ್ರೆ, ಸುಂದರ್ ಮಾಸ್ತರ್, ಆಯಾನ್ ಮಲ್ಪೆ, ಮುಹಮ್ಮದ್ ಮೌಲ, ಇಸ್ಮಾಯಿಲ್ ಕಟಪಾಡಿ, ಶ್ಯಾಮ್ ರಾಜ್ ಬಿರ್ತಿ, ಮಂಜುನಾಥ್ ಗಿಳಿಯಾರು, ಹೈಫಾ, ಅಝೀಜ್ ಉದ್ಯಾವರ, ನಿಸಾರ್ ಉಡುಪಿ, ಮಂಜುನಾಥ್ ಬಾಳ್ಕುದ್ರು, ಹುಮೇರಾ ಕಾರ್ಕಳ, ಸುನೀಲ್ ಡಿ ಬಂಗೇರ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
