AP26201373648333-1784544222.jpg
Spread the love

ಇದು ಒಳ್ಳೆಯ ಬೆಳವಣಿಗೆಯಲ್ಲ….

ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಲಾಟಿಚಾರ್ಜ್ ಹಂತಕ್ಕೆ ತಲುಪುವ ಮೊದಲೇ ಸರ್ಕಾರ ಒಂದಷ್ಟು ಮಾತುಕತೆ ನಡೆಸಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು. ಏಕೆಂದರೆ ವಿದ್ಯಾರ್ಥಿಗಳನ್ನು, ಈ ದೇಶದ ಯುವಸಮೂಹವನ್ನು ಲಾಠಿಗಳಲ್ಲಿ ಹೊಡೆಯುವುದು ಕೇವಲ ಅವರ ಮೇಲಿನ ದೈಹಿಕ ಹಲ್ಲೆ ಮಾತ್ರವಲ್ಲ ಭವಿಷ್ಯದ ಹಿಂಸಾತ್ಮಕ ಮನೋಭಾವಕ್ಕೆ ಪೀಠಿಕೆ ಬರೆದಂತಾಗುತ್ತದೆ.

ಏಕೆಂದರೆ ಈ ಹಿಂದಿನ ಕಾಲದಂತೆ ಪೋಷಕರಿಂದ ಹೊಡೆತ ತಿಂದು ಬೆಳೆದವರಲ್ಲ ಈ ಮಕ್ಕಳು. ಹೆಚ್ಚು ಕಡಿಮೆ, ಹೊಡೆತ ರಹಿತವಾಗಿ, ಬೈಗುಳ ರಹಿತವಾಗಿ, ಒಂದಷ್ಟು ಸುಖವಾಗಿ, ಮತ್ತಷ್ಟು ಸ್ವತಂತ್ರವಾಗಿ, ಇನ್ನೊಂದಿಷ್ಟು ಸ್ವೇಚ್ಛೆಯಾಗಿ ಬೆಳೆದಂತಹವರು. ಇವರ ಬೆವರ ಹನಿಗಳು ಜಿಮ್ ನಲ್ಲಿ, ಬೇಸಿಗೆಯಲ್ಲಿ, ಅಪರೂಪಕ್ಕೆ ನಡೆದಾಟ, ಟ್ರೆಕ್ಕಿಂಗ್ ನಲ್ಲಿ ಉದುರಿದಂತಹುದು. ಮೊಬೈಲ್ ನಲ್ಲಿ ಅರ್ಧ ಜೀವನ ಕಳೆದಂತಹವರು. ಪೊಲೀಸರ ಲಾಠಿ ಏಟಿನ ರುಚಿ ಎಂದೂ ಕಂಡವರಲ್ಲ. ಪೊಲೀಸರು ಈ ಪರಿ ಅಟ್ಟಾಡಿಸಿ ಹೊಡೆಯುತ್ತಾರೆ ಎಂದು ಭಾವಿಸಿದವರಲ್ಲ. ಇಷ್ಟೊಂದು ನಮ್ಮ ಮೇಲೆ ದೌರ್ಜನ್ಯ ನಡೆಯುತ್ತದೆ ಎಂದು ನಿರೀಕ್ಷಿಸಿದವರೂ ಅಲ್ಲ, ಅವರ ಮೂಳೆ ಮಾಂಸಗಳು ಇನ್ನೂ ಬಲಿತಿಲ್ಲ. ಆ ದೃಷ್ಟಿಯಿಂದ ಈ ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಖಂಡನಾರ್ಹ.

ಯುವಶಕ್ತಿಯನ್ನು ಅಪಾರವಾಗಿ ಪ್ರೀತಿಸುವ ನಮ್ಮಂತಹವರಿಗೆ, ಈ ದೇಶದ ರಾಜಧಾನಿಯಲ್ಲಿ ನಡೆದ ಈ ಘಟನೆಗಳು ಮನಸ್ಸಿಗೆ ಘಾಸಿಯನ್ನು ಉಂಟು ಮಾಡಿದೆ. ಕಾರಣಗಳೇನೆ ಇರಲಿ, ಪರಿಸ್ಥಿತಿ ಏನೇ ಇರಲಿ, ಸರಿ ತಪ್ಪುಗಳು ಯಾರದೇ ಇರಲಿ ಆದರೆ ವಿದ್ಯಾರ್ಥಿಗಳನ್ನು ಇಷ್ಟೊಂದು ಅಮಾನವೀಯವಾಗಿ ನೆಡೆಸಿಕೊಂಡಿದ್ದು ತಪ್ಪು. ಇದನ್ನು ಮೊದಲೇ ಗ್ರಹಿಸಿ ತಡೆಯುವ ಸಾಧ್ಯತೆ ಖಂಡಿತ ಇತ್ತು.

ಹೌದು, ಸಂಸತ್ ಮುತ್ತಿಗೆ ಕಾರ್ಯಕ್ರಮ, ಪ್ರತಿಭಟನೆ, ಮೆರವಣಿಗೆ ಯಾರೇ ಮಾಡಿದರು ಅದನ್ನು ತಡೆಯಲೇಬೇಕು. ಅದು ದೇಶದ ಭದ್ರತೆ ಮತ್ತು ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದು. ಯಾವುದೇ ವಿಧಾನಸೌಧ ಛಲೋ ಎಂಬುದೂ ಸಹ ಸಾಂಕೇತಿಕವೇ ಹೊರತು ವಿಧಾನಸಭೆಯನ್ನು ಆಕ್ರಮಿಸಲು ಬಿಡುವುದು ಸಾಧ್ಯವಿಲ್ಲ. ಹಾಗೆಯೇ ಸಂಸತ್ತು ಚಲೋ ಪ್ರತಿಭಟನೆ. ಆದರೆ ಸುಮಾರು 40 ದಿನಗಳ ಪ್ರತಿಭಟನಾ ನಿರತರು, 20 ದಿನಗಳ ಉಪವಾಸ ಸತ್ಯಾಗ್ರಹ ಮತ್ತು ನಿನ್ನೆಯ ಸಂಸತ್ ಚಲೋ ಮೆರವಣಿಗೆ ನಿರೀಕ್ಷಿತವೇ. ಆದ್ದರಿಂದ ಅದನ್ನು ಪ್ರಾರಂಭಿಕ ಹಂತದಲ್ಲಿಯೇ ನಿಲ್ಲಿಸುವ ಪ್ರಯತ್ನಗಳನ್ನು ಮಾಡಬೇಕಿತ್ತು. ಸರ್ಕಾರ ಇಷ್ಟೊಂದು ಅಸೂಕ್ಷ್ಮವಾಗಿ ನಿರ್ಲಕ್ಷ್ಯ ಮಾಡಬಾರದಿತ್ತು.

ದೇಶದ ಇಡೀ ಆಡಳಿತ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ, ಕೌಟುಂಬಿಕ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ರೈತರ ಶ್ರಮ ಸೇರಿ ಎಲ್ಲವೂ, ಎಲ್ಲರೂ ಶ್ರಮಪಡುವುದು, ಕಾರ್ಯನಿರ್ವಹಿಸುವುದು ಬಹುತೇಕ ಯುವ ಸಮೂಹದ ಹಿತಾಸಕ್ತಿಗಾಗಿ. ಏಕೆಂದರೆ ಯುವಕರೇ ಈ ದೇಶದ ಭವಿಷ್ಯ. ಅವರಿಗಾಗಿಯೇ ಹೆಚ್ಚು ಆಸಕ್ತಿಯಿಂದ, ಶ್ರಮದಿಂದ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸುವುದು. ಅಂತಹ ಯುವಶಕ್ತಿಯನ್ನು, ವಿದ್ಯಾರ್ಥಿ ಶಕ್ತಿಯನ್ನು ಸಾಧ್ಯವಾದಷ್ಟು ಪ್ರೀತಿಯಿಂದ, ಗೌರವದಿಂದ, ಅಭಿಮಾನದಿಂದ, ಜವಾಬ್ದಾರಿಯಿಂದ ನಿರ್ವಹಿಸಿ ಮಾರ್ಗದರ್ಶನ ಮಾಡಬೇಕಾದದ್ದು ವ್ಯವಸ್ಥೆಯ ಕರ್ತವ್ಯ.

ವಿದ್ಯಾರ್ಥಿಗಳು ಬಿಸಿ ರಕ್ತದ ಭರದಲ್ಲಿ ಒಂದಷ್ಟು ಆಕ್ರೋಶ ವ್ಯಕ್ತಪಡಿಸುವುದು, ತಪ್ಪು ದಾರಿ ಹಿಡಿಯುವುದು ಸಹಜವೇ ಆಗಿರುತ್ತದೆ. ಏಕೆಂದರೆ ನಾವು ಕೂಡ ಒಂದು ಹಂತದಲ್ಲಿ ವಿದ್ಯಾರ್ಥಿ ಜೀವನವನ್ನು ಅನುಭವಿಸಿ ಬಂದವರೇ. ಆದ್ದರಿಂದ ಜವಾಬ್ದಾರಿಯುತ ನಾಗರಿಕ ಸರ್ಕಾರ ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು ಮತ್ತು ಕೆಲವೊಮ್ಮೆ ಅವರಿಗಾಗಿ ಒಂದಷ್ಟು ತ್ಯಾಗ ಮಾಡಬೇಕಾದ ಅವಶ್ಯಕತೆಯು, ಅನಿವಾರ್ಯತೆಯೂ ಇರುತ್ತದೆ. ಏಕೆಂದರೆ ಅವರು ನಮ್ಮ ಮಕ್ಕಳು.

ಸರಿ ತಪ್ಪುಗಳನ್ನು ವಿಮರ್ಶಿಸುವುದಕ್ಕಿಂತ, ರಾಜಕೀಯ ಚಟುವಟಿಕೆಗಳನ್ನು ಮೀರಿ ಯುವಶಕ್ತಿಯನ್ನು ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸಬೇಕಾಗುತ್ತದೆ. ಅವರ ಮನಸ್ಥಿತಿಯನ್ನು ಅರಿತು ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಯಾರದೋ ಮೇಲಿನ ಕೋಪದಿಂದ ಇನ್ಯಾರನ್ನೋ ದಂಡಿಸಲು, ಬೆದರಿಸಲು ಇನ್ನೂ ಹಾಲುಗಲ್ಲದ ಯುವಕರ ಮೇಲೆ ಲಾಠಿ ಚಾರ್ಜ್ ಮಾಡುವುದು ಅಷ್ಟೇನೂ ಉತ್ತಮ ನಡೆಯಲ್ಲ, ಅನಿವಾರ್ಯವೂ ಅಲ್ಲ.

ಮೊದಲೇ ಹೇಳಿದಂತೆ ಪಾರ್ಲಿಮೆಂಟ್ ರಕ್ಷಣೆ ಮಾಡಬೇಕಾದ್ದು ಪೊಲೀಸರ ಕರ್ತವ್ಯವೇನೊ ನಿಜ, ಆದರೆ ಅದಕ್ಕಿಂತ ಮೊದಲೇ ಆಡಳಿತ ವ್ಯವಸ್ಥೆ ಇದನ್ನು ನಿಯಂತ್ರಿಸಲು ಪ್ರಯತ್ನ ಪಡಬೇಕಾಗಿತ್ತು. ಈಗ ಒಂದು ಹಂತದ ಹಿಂಸೆ ನಡೆದು ಹೋಗಿದೆ. ಚೀನಾದ ತಿಯಾನ್ಮನ್ ಚೌಕದ ಹತ್ಯಾಕಾಂಡ ಜಗತ್ತಿನ ಕೆಲವೇ ಹಿಂಸಾತ್ಮಕ ಘಟನೆಗಳಲ್ಲಿ ಒಂದಾಗಿ ಇತಿಹಾಸದಲ್ಲಿ ದಾಖಲಾಗಿದೆ. ಅಂದು ಪ್ರಜಾಪ್ರಭುತ್ವಕ್ಕಾಗಿ ನಡೆದ ಆ ವಿದ್ಯಾರ್ಥಿಗಳ ಚಳುವಳಿಯ ಮೇಲೆ ಚೀನಾ ಸರ್ಕಾರ ಯುದ್ಧ ಟ್ಯಾಂಕುಗಳನ್ನು ನುಗ್ಗಿಸಿ ಅನೇಕರ ಸಾವು ನೋವಿಗೆ ಕಾರಣವಾದ ಘಟನೆ ನಡೆದೇ ಹೋಯಿತು. ಅದು ಕಮ್ಯುನಿಸ್ಟ್ ಸರ್ಕಾರ. ಆದರೆ ನಿನ್ನೆಯ ದೆಹಲಿಯ ಈ ವಿದ್ಯಾರ್ಥಿಗಳ ಮೇಲಿನ ಘಟನೆ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಡೆಯಬಾರದಿತ್ತು.

ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಯುವಜನರ ಆಕ್ರೋಶವನ್ನು ಗಮನಿಸಿ ಶೀಘ್ರವೇ ಅತ್ಯಂತ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಈ ಸರ್ಕಾರದ ಮೇಲಿರುವ ಸರ್ವಾಧಿಕಾರಿ, ಬಂಡವಾಳಶಾಹಿ, ರೈತ, ಕಾರ್ಮಿಕ, ವಿದ್ಯಾರ್ಥಿಗಳ, ಬಡವರ ವಿರೋಧಿ ಎಂಬ ಆರೋಪಗಳು ಮತ್ತಷ್ಟು ದೃಢವಾಗುತ್ತಾ ಹೋಗುತ್ತದೆ. ಈ ಆಕ್ರೋಶ ಕೇವಲ ಒಂದು ಪರೀಕ್ಷೆ ಅಥವಾ ಒಬ್ಬ ವ್ಯಕ್ತಿಯ ರಾಜೀನಾಮೆಯ ಕಾರಣವೇನು ಅಲ್ಲ. ಇದರ ಹಿನ್ನೆಲೆ ದೀರ್ಘಕಾಲದಿಂದ ಮಡುಗಟ್ಟುತ್ತಾ ಬಂದ ಆಕ್ರೋಶದ ಪ್ರತಿಫಲನ.

ಇದು ರಾಷ್ಟ್ರವ್ಯಾಪಿ ಹಬ್ಬುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿರುವುದು ಸದ್ಯದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ. ಇದು ಕೇವಲ ಕೇಂದ್ರ ಸರ್ಕಾರದ ವಿರುದ್ಧ ಮಾತ್ರವಲ್ಲ ಅನೇಕ ರಾಜ್ಯಗಳ ಕೆಟ್ಟ ಆಡಳಿತ ಮತ್ತು ಅದರ ದುಷ್ಪರಿಣಾಮಗಳ ಪರಿಣಾಮ ಯುವಶಕ್ತಿ ಜಾಗೃತಗೊಂಡು ಪ್ರತಿಭಟಿಸುವುದರ ಸಂಕೇತ. ದೇಶದ ಇತರ ಭಾಗಗಳಲ್ಲಿ, ವಿಶ್ವದ ಇತರ ಭಾಗಗಳಲ್ಲಿ ನಡೆದಂತ ದಂಗೆಯ ರೂಪದಲ್ಲಿ ಈ ದೇಶದ ವಿದ್ಯಾರ್ಥಿ ಚಳುವಳಿ ಮುಂದುವರಿಯಬಾರದು. ಅದು ಅತ್ಯಂತ ಅಪಾಯಕಾರಿ. ಆದ್ದರಿಂದ ಬೇಗ ಇದನ್ನೆಲ್ಲ ಗ್ರಹಿಸಿ ಏನಾದರೂ ಕ್ರಮವನ್ನು ಕೈಗೊಳ್ಳಬೇಕು.

ವಿದ್ಯಾರ್ಥಿಗಳ ಮೇಲಿನ ಹಿಂಸೆಯನ್ನು ನೋಡಿದಾಗ, ಆ ದೃಶ್ಯಗಳು ಇಡೀ ದೇಶದಾದ್ಯಂತ ವೈರಲ್ ಆಗಿ ಮತ್ತಷ್ಟು ಜನ ರೊಚ್ಚಿಗೆದ್ದು ಅದು ದಂಗೆಯ ರೂಪ ಪಡೆಯುವ ಮೊದಲು ಕೇಂದ್ರದ ಸರ್ಕಾರ ಅತ್ಯಂತ ಸಹಾನುಭೂತಿಯಿಂದ, ಪ್ರೀತಿಯಿಂದ ಈ ಪ್ರತಿಭಟನಾಕಾರರ ಅಹವಾಲು ಗಮನಿಸಿ ಕ್ರಮ ಕೈಗೊಳ್ಳಬೇಕು. ಇದು ಸಮೂಹ ಸಂಪರ್ಕ ಕ್ರಾಂತಿಯ, ಸಾಮಾಜಿಕ ಜಾಲತಾಣಗಳ ಸಮಯ. ಸದ್ಯದ ಒಬ್ಬ ಮಂತ್ರಿಯ ರಾಜೀನಾಮೆ ಪಡೆಯುವುದರಿಂದ ಅಂತಹ ದೊಡ್ಡ ನಷ್ಟವೇನು ಆಗುವುದಿಲ್ಲ. ಅವರಿಗೆ ಬೇರೆ ಖಾತೆಯನ್ನು, ಬೇರೆ ಅಧಿಕಾರವನ್ನು ನೀಡಬಹುದು. ಆದರೆ ಅದನ್ನು ನಿರ್ಲಕ್ಷಿಸಿ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮೇಲುಗೈ ಪಡೆದು ಈ ಘಟನೆಗಳನ್ನು ನಿರ್ಲಕ್ಷಿಸಿದರೆ ಸರ್ಕಾರಕ್ಕೆ ಏನು ಧಕ್ಕೆಯಾಗುತ್ತಿದೆಯೋ ಗೊತ್ತಿಲ್ಲ. ಆದರೆ ದೇಶದ ಅಭಿವೃದ್ಧಿಯ ಹಿತಾಸಕ್ತಿಗೆ ಖಂಡಿತ ಈ ಬೆಳವಣಿಗೆ ಮಾರಕವಾಗಬಹುದು, ಎಚ್ಚರ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!