ಬೆಂಗಳೂರು: ದಿನಾಂಕ:14-07-2026(ಹಾಯ್ ಉಡುಪಿ ನ್ಯೂಸ್) ಗ್ರಹ ಮಂತ್ರಿ ಶ್ರೀ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಯಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು –
ಜಾಗತಿಕ ಮಟ್ಟದಲ್ಲಿ ಟೆಕ್ನಾಲಜಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರು ಸರ್ವ ರೀತಿಯಲ್ಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ, ಜಾಗತಿಕ ಕಂಪೆನಿಗಳು ಬೆಂಗಳೂರನ್ನು ತಮ್ಮ ಆದ್ಯತೆಯ ಆಯ್ಕೆಯಾಗಿ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತು ಬೆಂಗಳೂರಿನ ಬಹು ಆಯಾಮದ ಬೆಳವಣಿಗೆಯಲ್ಲಿ ವಾಹನ ದಟ್ಟಣೆಯ ಬೆಳವಣಿಯೂ ಒಂದು.
ಬೇರೆಲ್ಲ ವಲಯದ ಬೆಳವಣಿಗೆಯು ಹೆಮ್ಮೆಪಡುವಂತಿದ್ದರೆ, ವಾಹನ ದಟ್ಟಣೆಯ ಬೆಳವಣಿಗೆ ಆತಂಕಪಡುವಂತಹದ್ದು.
ಟ್ರಾಫಿಕ್ ಸಮಸ್ಯೆಯ ಮೂಲಭೂತ ಕಾರಣಗಳನ್ನು ಗುರುತಿಸುವುದರೊಂದಿಗೆ ಕಾಲಕಾಲಕ್ಕೆ ಸುಧಾರಣಾ ಕ್ರಮಗಳ ಉನ್ನತಿಕರಣವೂ ಅತ್ಯಗತ್ಯ ಎಂದರು ಈ ಬಗ್ಗೆ ಸುಧಾರಣೆಗೆ ಕೆಲವು ಸೂಚನೆಗಳನ್ನು ನೀಡಿದರು.
- ದೇಶದ ಇತರ ನಗರಗಳಲ್ಲಿನ ಟ್ರಾಫಿಕ್ ನಿರ್ವಹಣೆಯ ಮಾದರಿಗಳನ್ನು ಅಧ್ಯಯನ ಮಾಡುವುದರೊಂದಿಗೆ, ಇತರ ದೇಶಗಳಲ್ಲಿನ ಟ್ರಾಫಿಕ್ ನಿರ್ವಹಣೆಯ ಮಾದರಿಗಳನ್ನೂ ಸಹ ಅಧ್ಯಯನ ನಡೆಸಿ ಅಳವಡಿಸಿಕೊಳ್ಳುವ ಕುರಿತು ಸಭೆಯಲ್ಲಿ ಚಿಂತನೆ ನಡೆಸಲಾಯಿತು.
- “ಅರ್ಬನ್ ಮೊಬಿಲಿಟಿ ಮಿಷನ್” ಅನುಷ್ಠಾನದ ಕುರಿತು ಕ್ರಮ ವಹಿಸಬೇಕು, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.
- ಹೆಚ್ಚಿನ ಆರ್ಥಿಕ ಚಟುವಟಿಕೆ ನಡೆಯುವ ಪ್ರದೇಶಗಳಲ್ಲಿ ಮತ್ತು ಹೆಚ್ಚಿನ ಉದ್ಯೋಗ ಸೃಜನೆಯಾಗುವ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ, ಈ ಪ್ರದೇಶಗಳ ಸಂಚಾರ ಸುಧಾರಣೆಗೆ ಕ್ರಮ ವಹಿಸಬೇಕು.
- ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ರಸ್ತೆ ಮದ್ಯದಲ್ಲಿನ ವಿದ್ಯುತ್ ಕಂಬಗಳು ಹಾಗೂ ಇನ್ನಿತರ ಅಡಚಣೆಗಳ ನಿವಾರಣೆಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಬೇಕು.
- ಸಾರಿಗೆ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಟ್ರಾಫಿಕ್ ಸಮಸ್ಯೆಯ ಸುಧಾರಣೆಗೆ ಅಗತ್ಯವಿರುವ ಯಾವುದೇ ಇಲಾಖೆಗಳೊಂದಿಗೆ ಸಮನ್ವಯತೆ ಮತ್ತು ಸಹಕಾರದೊಂದಿಗೆ ಕೆಲಸ ಮಾಡಬೇಕು.
ಈ ಮೇಲಿನ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮಕೈಗೊಳ್ಳುವಂತೆ ಗ್ರಹ ಸಚಿವರು ಸೂಚಿಸಿದರು.

