ದಿನಾಂಕ: 09-07-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸಮೀಪದ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ಕೊಠಡಿಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ಬಂಧಿಸಿದ್ದಾರೆ.
ಜುಲೈ 7ರಂದು ರಾತ್ರಿ ರೆಸಾರ್ಟ್‌ನ ಕೊಠಡಿಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ಕಾಪು, ಮೂಡಬಿದ್ರೆ, ಬೆಳಪು, ಕಣಜಾರು, ಉಚ್ಚಿಲ, ಶಿರ್ವ, ಉಡುಪಿ ಸೇರಿದಂತೆ ವಿವಿಧ ಭಾಗಗಳ ನಿವಾಸಿಗಳಾದ ಸತೀಶ್ (49), ಅಕ್ಷಯ್, ದಿನೇಶ್, ಮಾಧವ ಪೂಜಾರಿ, ಪ್ರಶಾಂತ್, ಭರತ್, ಸಂತೋಷ್, ಅರುಣ್, ರೋಶನ್, ಚರಣ್, ಲೋಹಿತ್, ಶಿವ, ಮನೀಷ್, ರಂಜಿತ್, ಯಾದವ್, ಪೃಥ್ವಿನ್, ದೀಪಕ್, ವಿತೇಶ್, ಅಬ್ದುಲ್ ಹಮೀದ್, ಹರೋನ್, ಕೃಷ್ಣ, ಅಶೋಕ್ ಸೇರಿದಂತೆ ಒಟ್ಟು 26 ಮಂದಿ ಸೇರಿದ್ದಾರೆ.
ದಾಳಿಯ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ ನಗದು, ಚೀಟುಗಳು ಹಾಗೂ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಸಂಬಂಧಿತ ಕಲಂ ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ರಮ ಜೂಜಾಟದ ವಿರುದ್ಧ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
