ಉಡುಪಿ: ದಿನಾಂಕ:07-07-2026 (ಹಾಯ್ ಉಡುಪಿ ನ್ಯೂಸ್) ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಬಿಎಚ್ ರಸ್ತೆಯ ಹತ್ತಿರದ ತುಳಸಿ ಕಾಂಪ್ಲೆಕ್ಸ್ ಹಾಲಿನಲ್ಲಿ 05/07/2026ರಂದು ದಲಿತ ಹಕ್ಕುಗಳ ಸಮಿತಿ (DHS) ವತಿಯಿಂದ ಜನಜಾಗೃತಿಸಭೆ ನಡೆಯಿತು.
ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವ ಬಳ್ಕೂರು ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ನ ರಾಜ್ಯ ಕಾರ್ಯದರ್ಶಿ ಶ್ರೀ ಸುರೇಶ್ ಕಲ್ಲಾಗರವರು ದಲಿತರು ಹಾಗೂ ದಲಿತೇತರು ಸೇರಿ ಬಲಿಷ್ಠ ಸಮಾಜದ ರಚನೆಗೆ ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಹಾಗೂ ಕಾರ್ಮಿಕ ಕಾರ್ಡುಗಳ ಮಹತ್ವದ ಬಗ್ಗೆ ವಿವರಿಸುತ್ತಾ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲು ಕಾರ್ಮಿಕರು ತಪ್ಪದೆ ಕಾರ್ಮಿಕ ಕಾರ್ಡುಗಳನ್ನು ಕಾಲಕಾಲಕ್ಕೆ ರಿನಿವಲ್ ಮಾಡುತ್ತಾ ಇರಬೇಕು ಅಲ್ಲದೆ ರಾಜ್ಯದಲ್ಲಿ ಜಾರಿಗೆ ಬಂದ ಕಾರ್ಮಿಕರ ಕನಿಷ್ಠ ವೇತನ ರೂಪಾಯಿ 25,000 ಇದು ಕಡಿಮೆ ಮೊತ್ತವಾಗಿದ್ದು ಸಿಐಟಿಯು ಸಂಘಟನೆ ಕಾರ್ಮಿಕರ ಕನಿಷ್ಠ ಕೂಲಿ ತಿಂಗಳಿಗೆ 36,000 ಸಿಗಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ತಾವೆಲ್ಲರೂ ಸಂಘಟನೆಯ ಮಹತ್ವವನ್ನು ತಿಳಿದು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರವಿ ವಿ.ಎಂ. ಮಾತನಾಡುತ್ತಾ ಎಲ್ಲರೂ ಸಮಿತಿಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಸಂಘಟನೆ ಹೋರಾಟ, ಸರಕಾರಿ ಸೌಲಭ್ಯಗಳು, ದಲಿತ ಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಜೀವ ಬಳ್ಕೂರವರು ಈ ಜಿಲ್ಲೆಯಲ್ಲಿ ಸಂಘಟನೆ ನಡೆಸಿದ ಭೂಮಿಯ ಹಕ್ಕಿನ ಹೋರಾಟದ ಬಗ್ಗೆ ವಿವರಿಸುತ್ತಾ ಸರಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಅನ್ಯ ಯೋಜನೆಗಳಿಗೆ ಬಳಸಿ ದಲಿತರ ಕುಟುಂಬದ ವೈಯಕ್ತಿಕ ಅಭಿವೃದ್ಧಿಗೆ ವಂಚಿಸಿದೆ. ಹಾಗೂ ಸರಕಾರಿ ಸಂಸ್ಥೆಗಳೆಲ್ಲವೂ ಇಂದು ಕೇಂದ್ರ ಸರ್ಕಾರದ ಖಾಸಗೀಕರಣದ ನೀತಿಯಿಂದ ಸರಕಾರಿ ಆಸ್ತಿಗಳೆಲ್ಲವೂ ಅದಾನಿ, ಅಂಬಾನಿ ಯವರ ವಶಕ್ಕೆ ಒಪ್ಪಿಸಿ ಮೀಸಲಾತಿ ನೀತಿಯನ್ನು ದುರ್ಬಲಗೊಳಿಸಿದೆ. ಆದ್ದರಿಂದ ದಲಿತ ಹಕ್ಕುಗಳ ಸಮಿತಿ ಮುಂದಿನ ದಿನಗಳಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕೊಡಬೇಕೆಂಬ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂದರು.
ಆರಂಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಸುಶೀಲ ಬಳ್ಕೂರುರವರು ಸ್ವಾಗತಿಸಿ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಳ್ಕೂರು ವಂದಿಸಿದರು. ಘಟಕದ ಸಹ ಸಂಚಾಲಕರಾದ ವಿಜಯ್ ಕುಮಾರ್ ಬಳ್ಕೂರು ಸಭೆಯನ್ನು ಆಯೋಜಿಸಿದರು. ಸಭೆಯಲ್ಲಿ ಹಿರಿಯ ಮುಖಂಡರಾದ ಬಾಬು ಬಳ್ಕೂರು ಹಾಗೂ ಸಂಹಿತ್ ಸುಜಯ್ ಬಳ್ಕೂರ್ ಉಪಸ್ಥಿತರಿದ್ದರು



