ಸುಮಾರು ಎರಡು ವರ್ಷಗಳ ಹಿಂದೆ ಶ್ರೀ ಬಿ.ಎಸ್. ಶಿವಣ್ಣ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ. ಕಾರಣ ಅವರು ನಿನ್ನೆಯಷ್ಟೇ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕೆ ಹಿಂದಿನ ದಿನ ನಾವೆಲ್ಲಾ ಒಂದಷ್ಟು ಸಮಾನ ಮನಸ್ಕರು ಹೋಗಿ ಅವರನ್ನು ಭೇಟಿಯಾಗಿದ್ದೆವು. ಮೊದಲಿಗೆ ಹಿಂದಿನ ಲೇಖನದ ಸಾರಾಂಶ….
( ” ತನಗೂ ಒಂದು ದಿನ ಸಾವಿದೆ ಎಂಬುದನ್ನು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ “
ಗೌತಮ ಬುದ್ಧ………
ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಡಾ. ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯ ಶ್ರೀ ಬಿ ಎಸ್ ಶಿವಣ್ಣ ಅವರನ್ನು ಸೇವಾ ಮನೋಭಾವವನ್ನು ನೆನೆಯುತ್ತಾ…….
ಆಧುನಿಕ ಸಮಾಜದ ಮೋಸ, ವಂಚನೆ, ಹಿಂಸಾಕೃತ್ಯಗಳು, ಅಧಿಕಾರದಾಹ, ಅತ್ಯಾಚಾರ, ಆತ್ಮಹತ್ಯೆ, ಅಪಘಾತಗಳು ಈ ಎಲ್ಲವನ್ನು ನೋಡಿದಾಗ ನಿಜಕ್ಕೂ ಬುದ್ಧನ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತದೆ, ಕಾಡುತ್ತದೆ. ಮನುಷ್ಯ ಪ್ರಾಣಿಗೆ ಇಷ್ಟು ಸರಳ ವಿಷಯಗಳು ಅರ್ಥವಾಗುವುದಿಲ್ಲವೇ ಎಂದು ಆಶ್ಚರ್ಯವಾಗುತ್ತದೆ…….
ಬುದ್ಧನ ಈ ಚಿಂತನೆ ಕೇವಲ ಒಣ ಅಕ್ಷರಗಳಾಗಲಿ, ಮಾತುಗಳ ಜೋಡಣೆಯಾಗಲಿ ಅಲ್ಲ. ದೇಹ ಮತ್ತು ಮನಸ್ಸನ್ನು ಧೀರ್ಘವಾಗಿ ಮತ್ತು ಆಳವಾಗಿ ದಂಡಿಸಿದ ನಂತರ ಚಿಂತನೆ, ಮಂಥನ, ಅಧ್ಯಯನಗಳಿಂದ ಆಗಿನ ಕಾಲದಲ್ಲೇ ಒಡಮೂಡಿದ ಜ್ಞಾನೋದಯದ ಸಾಲುಗಳು, ಸಾರ್ವಕಾಲಿಕ ಸತ್ಯಗಳು……
ಇದನ್ನು ಎಳವೆಯಲ್ಲಿ, ಪ್ರೌಢಾವಸ್ಥೆಯಲ್ಲಿ, ಯೌವ್ವನದಲ್ಲಿ ನಮ್ಮ ಪೀಳಿಗೆಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೇಯಾದರೆ ಕನಿಷ್ಠ ಮುಂದಿನ ದಿನಗಳಾದರು ಉತ್ತಮವಾಗಿ ರೂಪಗೊಳ್ಳಬಹುದು. ಆದರೆ ದುರಂತವೆಂದರೆ, ಪ್ರತಿನಿತ್ಯದ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಗಳಾಗಲಿ, ಶಿಕ್ಷಣದ ಮೌಲ್ಯಗಳಾಗಲಿ, ಸಮಾಜದ ಚಟುವಟಿಕೆಗಳಾಗಲಿ ಈ ನಿಟ್ಟಿನಲ್ಲಿ ಸಾಗುತ್ತಲೇ ಇಲ್ಲ. ಬದಲಾಗಿ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ…..
ಶ್ರೀಯುತ ಬಿ. ಎಸ್. ಶಿವಣ್ಣನವರು…….
ಈ ಸಮಾಜ ಇರುವುದರಲ್ಲಿ ಒಂದಷ್ಟು ಸಮಾಧಾನಕರ, ನೆಮ್ಮದಿ ಕಾಣುತ್ತಿರುವುದು ಈಗಲೂ ಸಮಾಜ ಮುಖಿಯಾಗಿ ಚಿಂತಿಸುತ್ತಾ, ತಮ್ಮ ಕೈಲಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆಲವು ಸಂಘ, ಸಂಸ್ಥೆಗಳು ಮತ್ತು ಜನರಿಂದಾಗಿ. ಅಂತಹವರಲ್ಲಿ ಒಬ್ಬರು ಶಿವಣ್ಣನವರು. …..
ಡಾ. ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯನ್ನು ಸ್ಥಾಪಿಸಿಕೊಂಡು, ಸಮಾಜದ ಬಡವರು, ದುರ್ಬಲ ವರ್ಗದವರಿಗೆ ಆರ್ಥಿಕ ಸಹಾಯ ಮಾಡುತ್ತಾ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ…..
ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಇವರು ಅನೇಕ ವರ್ಷಗಳಿಂದ ಮತ್ತು ಈ ಕ್ಷಣಕ್ಕೂ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುವುದು, ಅನೇಕ ಪೌರಕಾರ್ಮಿಕರಿಗೆ ಜೀವವಿಮೆ ಮಾಡಿಸುವುದು, ಪರಿಸರ ಉಳಿಸುವುದು, ಊರಿನ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುವುದು ಹಾಗೂ ಸಾಧ್ಯವಿರುವ ಕಡೆ ಸಮಾಜದಲ್ಲಿ ಬದಲಾವಣೆಗಾಗಿ ನಿರಂತರ ಪ್ರಯತ್ನ ಪಡುತ್ತಿದ್ದಾರೆ….
ಇದು ಒಂದು ರೀತಿಯ ಸಾಮಾಜಿಕ ಯೋಗವೇ. ಬುದ್ಧನ ಮಾತಿನಂತೆ ನಮ್ಮ ಸಾವು ಖಚಿತ ಎಂಬುದು ತಿಳಿದ ನಂತರ ವ್ಯಕ್ತಿಯೊಬ್ಬ ನಿಜಕ್ಕೂ ಇನ್ನೊಬ್ಬರಿಗೆ ತೊಂದರೆ ಕೊಡಲಾರ. ಹಾಗೆಯೇ ಸಾವಿನ ಖಚಿತತೆ, ಅನಿವಾರ್ಯತೆ, ಅನಂತತೆಯ ಅರಿವಿರುವವರು ಶಿವಣ್ಣನವರಂತೆ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳುತ್ತಾರೆ. ಏಕೆಂದರೆ ಸತ್ತ ನಂತರ ಮಾಡುವುದಕ್ಕೆ ಏನೂ ಇರುವುದಿಲ್ಲ…….)
ನನ್ನೊಂದಿಗೆ ಕೆಲವು ವರ್ಷಗಳಿಂದ ನಿರಂತರವಾಗಿ ವಾಟ್ಸಾಪ್ ಮತ್ತು ದೂರವಾಣಿ ಮೂಲಕ ಸಮಕಾಲೀನ ಜಲ್ವಂತ ಸಮಸ್ಯೆಗಳ ಬಗ್ಗೆ ಸದಾ ಚರ್ಚಿಸುವ ಶ್ರೀ ಶಿವಣ್ಣನವರ ಬಗ್ಗೆ ನನಗೆ ಸಾಕಷ್ಟು ಕುತೂಹಲವಿತ್ತು . ಅವರು ಎಂಎಲ್ಸಿಯಾಗಿ ಆಯ್ಕೆಯಾದ ನಂತರ ಒಮ್ಮೆ ಅವರನ್ನು ಭೇಟಿಯಾಗಿ ಕೆಲವು ವಿಷಯಗಳನ್ನು ಚರ್ಚಿಸಬೇಕೆಂದು ಮೊನ್ನೆ ಸಂಜೆ ಅವರ ಮನೆಯಲ್ಲಿಯೇ ಭೇಟಿಯಾದವು.
ಸಾಮಾನ್ಯವಾಗಿ ನಾವು ಈ ವ್ಯವಸ್ಥೆಯನ್ನು ಸದಾ ಟೀಕಿಸುತ್ತಲೇ, ಗೊಣಗುತ್ತಲೇ ಇರುತ್ತೇವೆ. ಈ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸದಾ ಮಾಡುತ್ತಿರುತ್ತೇವೆ. ಅದರಲ್ಲಿ ಶ್ರೀ ಬಿ. ಎಸ್. ಶಿವಣ್ಣ ಅವರು ಸಹ ಪಾಲುದಾರರು. ಇದೀಗ ಅವರಿಗೆ ಅತ್ಯಂತ ಮಹತ್ವದ ವಿಧಾನ ಪರಿಷತ್ ಸದಸ್ಯತ್ವ ದೊರೆತಿದೆ.
ತಾವು ನಿರಂತರವಾಗಿ 35/40 ವರ್ಷಗಳಿಂದ ತಮ್ಮ ಸಂಘಟನೆಯ ಮೂಲಕ ಅನೇಕ ರೀತಿಯ ಸೇವಾ ಕಾರ್ಯಗಳನ್ನು, ಯೋಜನೆಗಳನ್ನು ರೂಪಿಸಿಕೊಂಡು ಬಂದವರು. ಹಳ್ಳಿಯ ಶಾಲಾ ವಿದ್ಯಾರ್ಥಿಗಳಿಗೆ ಉಗುರು ಕತ್ತರಿಸುವ ಸಣ್ಣ ವಸ್ತುವಿನಿಂದ ಹಿಡಿದು ಬಾಚಣಿಗೆ, ಹಲ್ಲು ಪುಡಿ, ಬ್ರಷ್, ಪೌಡರ್ ಇತ್ಯಾದಿ ಅತ್ಯಂತ ಅವಶ್ಯಕ ವಸ್ತುಗಳ ಕಿಟ್ ಕೊಡುವ ಮುಖಾಂತರ ಮಹಿಳೆಯರಿಗೆ ನ್ಯಾಪ್ಕಿನ್ ಕೊಡುವ ಮುಖಾಂತರ, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಬಹಳ ಹಿಂದೆಯೇ ಪ್ರಚಾರ ಮಾಡುವುದರ ಮುಖಾಂತರ, ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ವಹಿಸುವ ಮುಖಾಂತರ, ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡುವ ಮುಖಾಂತರ ಲ್ಯಾಪ್ಟಾಪ್ ಶಿವಣ್ಣ ಎಂದೇ ಪ್ರಸಿದ್ಧರಾದವರು.
ಇದೀಗ ಅವರೇ ಜನಪ್ರತಿನಿಧಿಯಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ನಾವು ಗೊಣಗಿದರು ನೀವು ಗೊಣಗಬಾರದು. ಏಕೆಂದರೆ ನಿಮ್ಮ ಬಳಿ ಈಗ ಜನಪ್ರತಿನಿಧಿ ಎಂಬ ಅಧಿಕಾರವಿದೆ. ಒಂದಷ್ಟು ಸಂಪನ್ಮೂಲಗಳಿವೆ ಅದನ್ನು ಇಡೀ ರಾಜ್ಯದ ಜನರಿಗೆ ಉಪಯೋಗವಾಗುವಂತೆ ಕೆಲಸ ಮಾಡಬೇಕಾದ ಜವಾಬ್ದಾರಿ ಇದೆ, ಅರಿವಿದೆ ಎಂದು ಮನವರಿಕೆ ಮಾಡಿ ಕೊಡಲು ಪ್ರಯತ್ನಿಸಿದೆವು.
ಅನೇಕ ಜಲ್ವಂತ ಸಮಸ್ಯೆಗಳಿವೆ. ಶಿಕ್ಷಣ, ಉದ್ಯೋಗ, ಪರಿಸರದ ವಿನಾಶದ ಬಹುದೊಡ್ಡ ಸವಾಲುಗಳು ನಮ್ಮ ಮುಂದಿವೆ. ಈಗ ಅದಕ್ಕೆಲ್ಲ ಧ್ವನಿ ನೀಡಿ ಅವುಗಳ ಬಗ್ಗೆ ಸರ್ಕಾರ ಮತ್ತು ರಾಜ್ಯದ ಗಮನಸೆಳೆದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀವು ಪ್ರಯತ್ನಿಸಬೇಕಿದೆ. ಇತರ ಅನೇಕ ಮತ್ತು ಕೆಲವು ಶಾಸಕರ ಕಾರ್ಯವೈಖರಿಯಂತೆ ವರ್ಗಾವಣೆ ದಂಧೆ, ಕಮಿಷನ್ ವ್ಯವಹಾರ,, ಅನಾವಶ್ಯಕ ಯೋಜನೆಗಳ ಅನುಮತಿ ಇತ್ಯಾದಿ ಇತ್ಯಾದಿ ದಂಧೆಗಳಲ್ಲಿ ಹಣ ಮಾಡುವ ಅಥವಾ ಇಡೀ ಆರು ವರ್ಷವನ್ನು ಮತ್ತೇನೋ ತಮ್ಮ ವೈಯಕ್ತಿಕ ಹಿತಾಸಕ್ತಿಯಲ್ಲಿ ಸಮಯ ಕಳೆಯುವ, ಹತ್ತರಲ್ಲಿ 11ರಂತೆ ಕಳೆದುಹೋಗುವ ಶಾಸಕರು ನೀವಾಗಬಾರದು. ನೀವು ಇನ್ನು ಮುಂದಿನ ಬದುಕಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ, ನಿಷ್ಠೆಯಿಂದ, ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇ ಆದರೆ, ಕ್ರಿಯಾತ್ಮಕವಾಗಿ ನಿಮ್ಮನ್ನು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇ ಆದರೆ ನಮ್ಮ ಸಂಪೂರ್ಣ ಬೆಂಬಲ ನಿಮಗಿರುತ್ತದೆ. ನಾವು ಧರ್ಮತೀತರು, ಜಾತ್ಯತೀತರು, ನಿಸ್ವಾರ್ಥರು, ವೈಚಾರಿಕ ಮನೋಭಾವದವರು. ಈ ಸಮಾಜದಿಂದ ಏನನ್ನಾದರೂ ಪಡೆಯುವುದಕ್ಕಿಂತ ಕೊಡುವುದೇ ನಮ್ಮ ಮೊದಲ ಆದ್ಯತೆ. ನಿಮ್ಮನ್ನು ಸಹ ತುಂಬಾ ಹತ್ತಿರದಿಂದ ಗಮನಿಸುತ್ತೇವೆ. ನಿಮ್ಮ ಇತಿಹಾಸ ಏನೇ ಇರಲಿ ವರ್ತಮಾನ ಮಾತ್ರ ಅತ್ಯಂತ ಪ್ರಾಮಾಣಿಕವಾಗಿರಲಿ ಎಂದು ಹೇಳಿ ಅವರಿಗೆ ಅಭಿನಂದನೆ ಸಲ್ಲಿಸಿದೆವು.
ಅದಕುತ್ತರಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ ಎಸ್ ಶಿವಣ್ಣನವರು ” ಖಂಡಿತವಾಗಲೂ ನಾನು ನನ್ನ ಈ ಆರು ವರ್ಷಗಳ ಅವಧಿಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನನ್ನ ಅಧಿಕಾರ ಮತ್ತು ಸರ್ಕಾರದಿಂದ ದೊರೆಯುವ ಎಲ್ಲ ಸಂಪನ್ಮೂಲಗಳನ್ನು ಬಡವರ, ಶೋಷಿತರ ಪರವಾಗಿ ಉಪಯೋಗಿಸುತ್ತೇನೆ. ಸಮಾಜದ ಮೂಲ ಆಧಾರ ಸ್ಥಂಭಗಳಾದ ರೈತರು, ಕಾರ್ಮಿಕರು, ಶಿಕ್ಷಕರು, ಮಹಿಳೆಯರು, ದೀನದಲಿತರ ಪರವಾಗಿ ಧ್ವನಿ ಎತ್ತುತ್ತೇನೆ. ನನ್ನ ಅಧಿಕಾರ ಕೇವಲ ನನ್ನದಲ್ಲ, ಅದು ಸಾರ್ವಜನಿಕರದು. ಯಾರು, ಯಾವುದೇ ಸಂದರ್ಭದಲ್ಲಿ ತಮ್ಮ ಕಷ್ಟ ಸುಖಗಳಿಗೆ, ಸಾರ್ವಜನಿಕ ಸೇವೆಗೆ ನನ್ನನ್ನು ಸಂಪರ್ಕಿಸಿದರೆ ಅದನ್ನು ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಿ ಪರಿಹಾರ ಕೊಡಲು ಪ್ರಯತ್ನಿಸುತ್ತೇನೆ. ವಿಧಾನಪರಿಷತ್ ಎಂಬುದು ಬ್ರೋಕರ್ಗಳ, ಏಜೆಂಟರ, ಹಣವಂತರ, ರಿಯಲ್ ಎಸ್ಟೇಟ್ ನವರ ಮನೆಯಾಗದೆ ಹಿರಿಯರ, ಬುದ್ಧಿವಂತರ, ಅನುಭವಸ್ತರ ಮನೆಯೆಂಬುದನ್ನು ಸಾಬೀತು ಮಾಡಿ, ಇಡೀ ದೇಶದಲ್ಲಿ ಒಬ್ಬ ಆದರ್ಶ ವಿಧಾನ ಪರಿಷತ್ ಸದಸ್ಯನಂತೆ ಕಾರ್ಯನಿರ್ವಹಿಸುತ್ತೇನೆ ” ಎಂಬ ಭರವಸೆ ನೀಡಿದರು.
ಕಾದು ನೋಡೋಣ, ಹೇಗಿದ್ದರು ಈ ಸಾಮಾಜಿಕ ಸಮೂಹ ಸಂಪರ್ಕ ಕ್ರಾಂತಿಯ ಕಾಲಘಟ್ಟದಲ್ಲಿ ಯಾವುದನ್ನು ಮುಚ್ಚಿಡಲು ಸಾಧ್ಯವಿಲ್ಲ. ನಾವೆಲ್ಲರೂ ಬೆತ್ತಲೆಯೇ. ಕಾಳು ಮತ್ತು ಜೊಳ್ಳು ಯಾವುದೆಂದು ಕಾಲವೇ ನಿರ್ಧರಿಸುತ್ತದೆ. ಎಲ್ಲವೂ ಮುಕ್ತ ಮುಕ್ತ….
ಶ್ರೀ ಶಿವಣ್ಣನವರಿಗೆ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತಾ……
ಒಳ್ಳೆಯವರನ್ನು ಮತ್ತು ಒಳ್ಳೆಯದನ್ನು ಸ್ವೀಕರಿಸೋಣ ಮತ್ತು ಪ್ರೋತ್ಸಾಹಿಸೋಣ.
ಅದೇ ಸಮಯದಲ್ಲಿ ಕೆಟ್ಟವರನ್ನು ಮತ್ತು ಕೆಟ್ಟದ್ದನ್ನು ನಿರ್ಲಕ್ಷಿಸೋಣ, ತಿರಸ್ಕರಿಸೋಣ, ಸಾಧ್ಯವಾದರೆ ವಿರೋಧಿಸೋಣ….
ಶಿವಣ್ಣನವರ ಸಂಪರ್ಕ ಸಂಖ್ಯೆ
9448417379…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
