ಬೆಂಗಳೂರು: ದಿನಾಂಕ:29-06-2026 (ಹಾಯ್ ಉಡುಪಿ ನ್ಯೂಸ್) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನ ಹಾಗೂ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಪಾಲ್ಗೊಂಡು ಮಾತನಾಡುತ್ತಾ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಗುಟ್ಕಾ ನಿಷೇಧ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಪಾನ್ ಮಸಾಲಾ, ಗುಟ್ಕಾ ಹಾಗೂ ಅಡಿಕೆ ಪದಾರ್ಥಗಳಲ್ಲಿ ಸ್ವಲ್ಪ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ತಕ್ಷಣವೇ ನಿಲ್ಲದಿದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್ ಮಸಾಲಾ ಹಾಗೂ ಗುಟ್ಕಾಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ .
ವ್ಯಸನಮುಕ್ತ ನಾಳಿನ ಸುಂದರ ಕನಸನ್ನು ನನಸಾಗಿಸಲು ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ನಾಗರಿಕರು ಒಟ್ಟಾಗಿ ಮುನ್ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಎಸ್. ಅಬ್ದುಲ್ ನಜೀರ್ ಅವರು ಉಪಸ್ಥಿತರಿದ್ದರು.ಆರೋಗ್ಯಕರ, ಸುರಕ್ಷಿತ ಮತ್ತು ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಈ ವೇದಿಕೆಯಲ್ಲಿ ದೃಢ ಸಂಕಲ್ಪ ಮಾಡಲಾಯಿತು.



