IMG-20251107-WA0003.jpg
Spread the love

ಸ್ವತಂತ್ರ ಮತ್ತು ವಿಶಾಲ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಿ…….

ನೀವು,
ಪ್ರತಿದಿನ ಯೋಗ ಮಾಡಬೇಕೆ ? ಮಾಡಿ ಒಳ್ಳೆಯದು,
ಆದರೆ ಯಾರ ಮೇಲೂ ಒತ್ತಾಯ ಹೇರಬೇಡಿ, ಅದನ್ನು ವ್ಯಾಪಾರ ಮಾಡಬೇಡಿ,
ಯೋಗವೋ, ಧ್ಯಾನವೋ, ವ್ಯಾಯಾಮವೋ, ವಾಕಿಂಗೋ, ಜಿಮ್ಮೋ, ಓಟವೋ, ಇನ್ಯಾವುದೋ ಕಸರತ್ತೋ ಅದು ನಿಮ್ಮಿಷ್ಟ,

ನೀವು,
ಕುರಿ, ಕೋಳಿ, ದನ, ಹಂದಿ, ಮೀನು ತಿನ್ನಬೇಕೆ ? ತಿನ್ನಿ ನಿಮ್ಮಿಷ್ಟ,
ನೀವು, ಕೇವಲ ತುಪ್ಪ, ಬೇಳೆ, ಹಣ್ಣು, ತರಕಾರಿಗಳನ್ನು ಮಾತ್ರ ತಿನ್ನಬೇಕೆ ? ಅದೂ ನಿಮ್ಮಿಷ್ಟ,
ಆದರೆ ಇದು ತಿನ್ನಿ, ಅದು ಬೇಡ, ಇದು ತಪ್ಪು, ಅದು ಸರಿ ಎಂಬ ಒತ್ತಾಯ ಸರಿಯಲ್ಲ,

ನೀವು,
ಜೀನ್ಸೋ, ಚಡ್ಡೀಯೋ, ಪಂಚೆಯೋ, ಪೈಜಾಮೋ, ಪ್ಯಾಂಟೋ ಹಾಕಿಕೊಳ್ಳಬೇಕೆ ?
ನೀವು ನೈಟಿ, ಮಿಡಿ, ಸ್ಕರ್ಟ್, ಚೂಡಿದಾರ್, ಪ್ಯಾಂಟ್, ಶಾರ್ಟ್ಸ್ ಹಾಕಬೇಕೆ ? ನಿಮ್ಮಿಷ್ಟ,
ಆದರೆ, ಅನಿವಾರ್ಯದ, ಅವಶ್ಯಕತೆಯ, ಅಗತ್ಯತೆಯ ಸ್ಥಳಗಳನ್ನು ಹೊರತುಪಡಿಸಿ ಸಾಮಾನ್ಯ ಸಹಜ ವಾತಾವರಣದಲ್ಲಿ ಅನಾವಶ್ಯಕವಾಗಿ ವಸ್ತ್ರ ಸಂಹಿತೆ ಜಾರಿ ಮಾಡಿ ಹಿಂಸೆ ಕೊಡಬೇಡಿ.

ನೀವು,
ದೇವರು, ಧರ್ಮಗಳನ್ನು ನಂಬಿ ಬದುಕಬೇಕೆ ? ಬದುಕಿ ನಿಮ್ಮಿಷ್ಟ.
ನೀವು ಯಾವುದನ್ನೂ ನಂಬದೆ ಸಹಜವಾಗಿ, ವೈಜ್ಞಾನಿಕವಾಗಿ ಜೀವಿಸಬೇಕೆ ? ಅದೂ ನಿಮ್ಮಿಷ್ಟ,
ಅದನ್ನು ಮೂಢನಂಬಿಕೆಯ, ಮತಾಂಧತೆಯ ನೆಪದಲ್ಲಿ ಯಾರ ಮೇಲೂ ಒತ್ತಾಯ ಹೇರಬೇಡಿ.

ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಈ ನೆಲದ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವಿರಲಿ,
ನಿಮ್ಮ ಸುತ್ತಮುತ್ತಲಿನ ಸಾಮಾಜಿಕ ಪರಿಸರದ ಬಗ್ಗೆ ತಿಳಿವಳಿಕೆ ಇರಲಿ,
ಸ್ವಾತಂತ್ರ್ಯ ಸ್ವೇಚ್ಛೆಯಲ್ಲ ಎಂಬ ಪರಿಜ್ಞಾನವಿರಲಿ, ಅದಕ್ಕೆ ಮಿತಿಯಿರಲಿ,

ಹಾಗೆಯೇ ಮುಖ್ಯವಾಗಿ,
ಸಾಮಾನ್ಯ ಜ್ಞಾನವಿರಲಿ,
ಪ್ರಬುದ್ಧತೆ ಇರಲಿ,
ವಿಶಾಲ ಮತ್ತು ಸಮಗ್ರ ಚಿಂತನೆ ಇರಲಿ .

ನಮಗೆ ಇಷ್ಟವಿಲ್ಲದ, ನಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಅನೇಕ ಸಂಗತಿಗಳು, ಘಟನೆಗಳು
ನಮ್ಮ ಸುತ್ತಲ ಪರಿಸರದಲ್ಲಿ ನಡೆಯುತ್ತಿರುತ್ತದೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ
ನಿರ್ಲಿಪ್ತವಾಗಿರಲಿ. ಪ್ರತಿಕ್ರಿಯಿಸಲೇ ಬೇಕಾದಾಗ ಕಾನೂನಿನ ಅಡಿಯಲ್ಲಿ, ಸಭ್ಯತೆಯ ನೆರಳಲ್ಲಿ, ಪ್ರೀತಿಯಿಂದ ಹೇಳಿ.

ದೇಶವನ್ನು, ಸಂಸ್ಕೃತಿಯನ್ನು, ಇಲ್ಲಿನ ಜನರ ಮೇಲಿನ ನಿಯಂತ್ರಣವನ್ನು ಗುತ್ತಿಗೆ ಪಡೆದಂತೆ ಹಾರಾಡಬೇಡಿ. ಅದರಿಂದ ಘರ್ಷಣೆ ಹೆಚ್ಚಾಗಿ ಸಮಾಜ ಒಡೆಯುತ್ತದೆಯೇ ಹೊರತು ಶಾಂತಿ ನೆಲೆಸುವುದಿಲ್ಲ.
ಏನೇ ಮಾಡಿದರೂ, ಏನೇ ಹೇಳಿದರೂ, ಏನೇ ಯೋಚಿಸಿದರೂ,
ವ್ಯಕ್ತಿಗಳ, ಸಮಾಜದ, ರಾಷ್ಟ್ರದ ಹಿತಾಸಕ್ತಿ ಮುಖ್ಯವಾಗಿರಲಿ.

ಇಲ್ಲಿ ಒಳ್ಳೆಯತನಕ್ಕೆ ಪ್ರೋತ್ಸಾಹ ಸಿಗುವಂತಿರಲಿ,
ದುಷ್ಟತನಕ್ಕೆ ಶಿಕ್ಷೆಯೂ ಆಗುವಂತಿರಲಿ. ಆ ಬಗ್ಗೆ ಸದಾ ಎಚ್ಚರವಿರಲಿ.

ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಏಕೆಂದರೆ ಇಂದಿನ ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ವಿಷಯಗಳನ್ನು ತಿರುಚಲಾಗುತ್ತಿದೆ, ಅದಕ್ಕಾಗಿ ವೈಚಾರಿಕ ಚರ್ಚೆಗಳಿರಲಿ, ಸತ್ಯದ ಹುಡುಕಾಟವಿರಲಿ, ವಾಸ್ತವ ಪ್ರಜ್ಞೆ ಇರಲಿ ಆದರೆ ಒತ್ತಾಯ ಬೇಡ.

ನಮಗೆ ಶಾಲೆಗಳಲ್ಲಿ ಹೇಳಿಕೊಟ್ಟಿದ್ದು ಮತ್ತು ಪುಸ್ತಕಗಳಲ್ಲಿ ಓದಿದ್ದು…………..

ಈ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿ, ಶಾಂತಿ, ಅಹಿಂಸೆ, ಸರಳತೆ ಮತ್ತು ಸತ್ಯಾಗ್ರಹಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.

ಆದರೆ , ಈಗ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಹಾಗೂ ಕೆಲವು ರಾಜಕಾರಣಿಗಳ ಮಾತುಗಳಲ್ಲಿ ಗಾಂಧಿ ಒಬ್ಬ ವಂಚಕ, ದ್ರೋಹಿ, ನಪುಂಸಕ, ಸ್ವಾತಂತ್ರ್ಯ ಬಂದದ್ದು ಶಾಸ್ತ್ರ, ಶಸ್ತ್ರ, ಹಿಂಸೆಯಿದಂಲೇ ಹೊರತು ಅವರ ಹೋರಾಟದಿಂದಲ್ಲ ಎನ್ನಲಾಗುತ್ತಿದೆ.

ಆಗ ಶಾಲೆಗಳಲ್ಲಿ ಟಿಪ್ಪು ಸುಲ್ತಾನ್ ಒಬ್ಬ ದೇಶ ಪ್ರೇಮಿ, ಬ್ರಿಟಿಷರ ವಿರುದ್ಧ ಹೋರಾಡಿದ ಒಬ್ಬ ಧೀಮಂತ. ಅದಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟಿದ್ದ ಎಂದು ಹೇಳುತ್ತಿದ್ದರು.

ಆದರೆ, ಈಗ ಅದೇ ಮೀಡಿಯಾಗಳಲ್ಲಿ ಅವನೊಬ್ಬ ದೇಶದ್ರೋಹಿ, ಮತಾಂಧ, ರಕ್ತ ಪಿಪಾಸು ಎಂದು ಪುಂಖಾನುಪುಂಖವಾಗಿ ಹೇಳಲಾಗುತ್ತಿದೆ.

ಆಗ ನಮ್ಮ ಮೇಷ್ಟ್ರುಗಳು ಹೇಳುತ್ತಿದ್ದರು. ನಮ್ಮ ದೇಶದ ಸಂವಿಧಾನವನ್ನು ರಚಿಸಿ ಸಮಾನತೆಯನ್ನು ಎತ್ತಿಹಿಡಿದ ಮಾಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು.

ಆದರೆ ಈಗ ಒಂದು ವರ್ಗ ಅವರು ನೀಡಿದ ಮೀಸಲಾತಿಯಿಂದಲೇ ದೇಶದಲ್ಲಿ ಅಸಮಾನತೆ ಉಂಟಾಗಿ ಪ್ರತಿಭಾಪಲಾಯನದಿಂದ ದೇಶದ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ಹೇಳಿಕೊಳ್ಳುತ್ತಾರೆ.

ಶಾಲೆಯಲ್ಲಿ 1 2 3 4 5…..ಸಂಖ್ಯೆಗಳು ಗಣಿತ ವಿಜ್ಞಾನದ ಮಹಾನ್ ಕ್ರಾಂತಿ ಕಾರಕ ಸಂಶೋಧನೆ, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ವಾಯುವ್ಯ, ನೈರುತ್ಯ, ಈಶಾನ್ಯ ಎಲ್ಲವೂ ಪ್ರಕೃತಿಯ ದಿಕ್ಕುಗಳ ಗುರುತಿಸುವಿಕೆ ಎಂದು ಹೇಳಿಕೊಟ್ಟಿದ್ದರು.

ಆದರೆ ಪ್ರತಿದಿನ ಟಿವಿಗಳಲ್ಲಿ ಜ್ಯೋತಿಷಿಗಳು 5 7 9……..
ಶ್ರೇಷ್ಠ ಎಂತಲೂ 2 3 6 8…..ದರಿದ್ರ ಎಂತಲೂ, ಪೂರ್ವ ಉತ್ತರ ಅದೃಷ್ಟವೆಂತಲೂ, ಪಶ್ಚಿಮ ದಕ್ಷಿಣ ಅಪಾಯಕಾರಿ ಎಂತಲೂ ಹೇಳುತ್ತಿದ್ದಾರೆ.

ಈಗ ಒಬ್ಬ ಸಾಧಾರಣ ಬುದ್ದಿಯ ಸಾಮಾನ್ಯ ವ್ಯಕ್ತಿಯಾದ ನಾನು ಯಾವುದನ್ನು ನಂಬುವುದು, ಯಾವುದು ಸತ್ಯ ಎಂಬ ಗೊಂದಲಕ್ಕೊಳಗಾಗಿದ್ದೇನೆ.

ನಿಜ ತಿಳಿಯಲು ಇಡೀ ಇತಿಹಾಸವನ್ನು ಓದಬೇಕೆ. ದಿನನಿತ್ಯದ ಅವಶ್ಯಕತೆ ಪೂರೈಸಿಕೊಳ್ಳಲೇ ಸಮಯ ಸಾಲದೇ ಒದ್ದಾಡುತ್ತಿರುವ ನನ್ನಿಂದ ಇದು ಸಾಧ್ಯವೆ.

ಹೋಗಲಿ ತಿಳಿದವರು ಹೇಳಿ ಎಂದರೆ, ಅವರು ಮತ್ತದೇ ತಮ್ಮ ಮೂಗಿನ ನೇರಕ್ಕೆ, ಬಾಯಿ ಚಪಲಕ್ಕೆ, ಬುದ್ದಿಯ ಪ್ರದರ್ಶನಕ್ಕೆ, ತಮ್ಮ ಧರ್ಮ, ಜಾತಿ ಹಾಗೂ ತಿಳುವಳಿಕೆಯ ಮಿತಿಗೆ ಇದೇ ರೀತಿಯ ಗೊಂದಲದ ಹೇಳಿಕೆ ನೀಡುತ್ತಾರೆ.

ಹಾಗಾದರೆ ವಾಸ್ತವ ಏನು ? ಅದನ್ನು ಗ್ರಹಿಸುವುದು ಹೇಗೆ …….. ?

ಇತಿಹಾಸದ ಸತ್ಯ ಅಡಗಿರುವುದು ಗ್ರಂಥಗಳಲ್ಲಿ, ತರ್ಕಗಳಲ್ಲಿ, ಪುರಾಣಗಳಲ್ಲಿ ಅಲ್ಲ. ಅದರಲ್ಲಿರಬಹುದಾದ ಆಳವನ್ನು ನಿಮ್ಮ ಮನದಾಳದ ಗ್ರಹಿಕೆ ಹೇಗೆ ಪ್ರತಿಕ್ರಿಯಿಸುತ್ತದೆ, ನಿಮ್ಮ ಅನುಭವ ಮತ್ತು ಜ್ಞಾನ, ಬದುಕಿನೆಡೆಗಿನ ನಿಮ್ಮ ಒಡನಾಟ, ನಿಮ್ಮ ಆಸಕ್ತಿ, ಇಡೀ ಸೃಷ್ಟಿಯನ್ನು ಮತ್ತು ಮಾನವ ಜೀವಿಯನ್ನು ಗ್ರಹಿಸುವ ನಿಮ್ಮ ಅರಿವಿನ ಮಟ್ಟದಿಂದ ಮಾತ್ರ ಸಾಧ್ಯ.

ಕೇವಲ ಓದು, ಉಢಾಪೆ ವ್ಯಕ್ತಿತ್ವ, ಪುಸ್ತಕ ರಚನೆ, ಸಿದ್ಧಾಂತದ ಅಡಿಯಾಳಾಗುವುದು,
ಳಧಾರ್ಮಿಕ ಅಂಧ: ಶ್ರದ್ಧೆ, ಅಹಂಕಾರ, ಜನಪ್ರಿಯತೆ ಇತ್ಯಾದಿಗಳಿಂದ ದಾರಿ ತಪ್ಪುವ, ಇತಿಹಾಸವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆಯೇ ಹೆಚ್ಚು.

ಈ ಬಗ್ಗೆ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಚಿಂತಿಸೋಣ.
ಜ್ಞಾನ ನಿಂತ ನೀರಲ್ಲ. ಹರಿಯುವ ಪ್ರವಾಹ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!