ಯಾಕೋ ಹಿಂದೂ ಮುಸ್ಲಿಂ ಸಂಘರ್ಷ ಭಾರತದಲ್ಲಿ ತುಂಬಾ ಅತಿರೇಕಕ್ಕೆ ಹೋಗುತ್ತಿದೆ. ಕಾರಣಗಳೇನೇ ಇರಲಿ ಒಂದು ಜ್ವಾಲಾಮುಖಿ ಈ ನೆಲದಲ್ಲಿ ಅಡಗಿದೆ. ಅದು ಅಗ್ನಿಪರ್ವತವಾಗಿ ಸಿಡಿಯುವ ಮುನ್ನ ನಾವು ನೀವು ಮತ್ತು ನಮ್ಮ ಕುಟುಂಬಗಳನ್ನು ಪ್ರೀತಿಸುವವರು, ದೇಶವನ್ನು ಪ್ರೀತಿಸುವವರು ಎಚ್ಚೆತ್ತುಕೊಳ್ಳಬೇಕಿದೆ.
ಒಂದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಯಾವುದೇ ಘರ್ಷಣೆ ಗಲಭೆಗಳಲ್ಲಿ ಸೋಲು ಗೆಲುವುಗಳು ಇರುವುದಿಲ್ಲ. ಕೇವಲ ಸಾವು ನೋವುಗಳು ಮಾತ್ರ ಉಳಿಯುತ್ತದೆ. ಅದರಲ್ಲೂ ಧರ್ಮ ಆಧಾರಿತ ಕೋಮು ದ್ವೇಷ ಅತ್ಯಂತ ಭೀಕರ.
ಅನೇಕ ದೇವಸ್ಥಾನಗಳು ಮಸೀದಿಗಳಾಗಿವೆ. ಈಗ ಆ ಮಸೀದಿಗಳನ್ನು ಮತ್ತೆ ದೇವಸ್ಥಾನ ಮಾಡುವುದು ಒಂದು ಪುಣ್ಯ ಕಾರ್ಯ ಎಂದು ಕೆಲವು ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿವೆ.
ನಿಜಕ್ಕೂ ಈ ಭಾರತ ನೆಲದ ಅನ್ನ ತಿನ್ನುವವರು ನೀವಾದರೆ, ನಿಮ್ಮ ನಿಮ್ಮ ಧರ್ಮ ಮತ್ತು ದೇವರುಗಳ ಮೇಲೆ ನೀವು ಸಂಪೂರ್ಣ ನಂಬಿಕೆ ಉಳ್ಳವರೇ ಆಗಿದ್ದರೆ, ದೇವರು ಇರುವುದು ಖಚಿತ ಎಂಬ ನಂಬಿಕೆ ನಿಮಗಿದ್ದರೆ ಒಂದು ಸವಾಲು ಸ್ವೀಕರಿಸಿ.
ಅದು ಏನೆಂದರೆ……
ಮನುಷ್ಯರೆಂಬ ಹುಲು ಮಾನವರಾದ ನಾವು ನಮ್ಮ ಶಕ್ತಿಯನ್ನು ಉಪಯೋಗಿಸಿಕೊಂಡು ಸರ್ವ ಶಕ್ತ ಸರ್ವಾಂತರ್ಯಾಮಿ ದೇವರಿಗೆ ಮಂದಿರ ಮಸೀದಿ ನಿರ್ಮಿಸುವುದು, ಅವಕಾಶ ಸಿಕ್ಕರೆ ಅದನ್ನು ಮತ್ತೆ ಕೆಡವುವುದು, ಅದಕ್ಕಾಗಿ ಒಬ್ಬರಿಗೊಬ್ಬರು ರಕ್ತಪಾತ ಮಾಡುವುದು ಏಕೆ. ನೇರವಾಗಿ ಮುಸ್ಲಿಮರು ನಂಬಿರುವ ಅಲ್ಲಾ ಮತ್ತು ಹಿಂದೂಗಳು ನಂಬಿರುವ ರಾಮ ಈ ಇಬ್ಬರನ್ನೇ ಯುದ್ದಕ್ಕೆ ಬಿಡೋಣ. ಯಾರು ಗೆಲ್ಲುತ್ತಾರೋ ಅವರೇ ಈ ಭೂಮಿಯ ಒಡೆಯರಾಗಲಿ. ಹೇಗಿದ್ದರೂ ನಿಮ್ಮ ದೇವರಗಳ ಮೇಲೆ ನಿಮಗೆ ಅಪಾರ ನಂಬಿಕೆ ಇದೆಯಲ್ಲವೇ. ಒಮ್ಮೆ ಪ್ರಯತ್ನಿಸಿ ನೋಡಿ.
ಏಕೆ, ನಿಮ್ಮ ದೇವರುಗಳನ್ನು ಪ್ರಶ್ನಿಸಿದರೆ ಕೋಪ ಬರುತ್ತದೆಯೇ ? ತನ್ನ ವಾಸಸ್ಥಾನವನ್ನು ವಿರೋಧಿಗಳಿಂದ ರಕ್ಷಿಸಿಕೊಳ್ಳಲಾಗದ, ಕೋರ್ಟ್ ಪೋಲೀಸ್ ಮೊರೆ ಹೋಗುವ ದೇವರುಗಳು ನಮ್ಮನ್ನು ಕಾಪಾಡಲು ಸಾಧ್ಯವೇ ?
ಕಾನೂನು ಮೊರೆ ಹೋಗುವುದು ಮನುಷ್ಯರೇ ಹೊರತು ದೇವರಲ್ಲ ಎನ್ನುದಾದರೆ ದೇವರಿಗೆ ಮನುಷ್ಯರ ರಕ್ಷಣೆಯ ಅವಶ್ಯಕತೆ ಇದೆ ಎಂದಾಗುವುದಿಲ್ಲವೇ ?
ಈ ಸೃಷ್ಟಿಯೇ ದೇವರ ಕೃಪೆ ಎನ್ನುವುದಾದರೆ ಆತನಿಗೆ ಮಂದಿರ ಮಸೀದಿಯ ಅವಶ್ಯಕತೆ ಇದೆಯೇ ? ಅದಕ್ಕಾಗಿ ಮನುಷ್ಯರ ನಡುವೆ ಹೊಡೆದಾಟ ಬೇಕೆ ?
ಮನುಷ್ಯನಿಗೆ ಒಂದು ಸ್ವತಂತ್ರ ಚಿಂತನೆ ಇಲ್ಲವೇ ? ಇಷ್ಟೊಂದು ಶತಮಾನಗಳ ದೀರ್ಘ ಅನುಭವದ ಆಧಾರದ ಮೇಲೆ ದೇವರ ಅಸ್ತಿತ್ವದ ಬಗ್ಗೆ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲವೇ ? ಈಗಲೂ ಭಯ ಆತಂಕ ಸೋಲು ಸಾವಿನ ಭಯದಿಂದ ಭಕ್ತಿಯ ನೆಪದಲ್ಲಿ ಸ್ವಂತ ಯೋಚಿಸುವ ಶಕ್ತಿಯನ್ನು ಒತ್ತೆ ಇಟ್ಟು ದೇವರು ದೇವಸ್ಥಾನಗಳು ಮಸೀದಿಗಳಿಗಾಗಿ ಒಂದು ಇಡೀ ಸಮುದಾಯಗಳು ಒಬ್ಬರಿಗೊಬ್ಬರು ಹೊಡೆದಾಡುವುದು ಎಷ್ಟೊಂದು ಅನಾಗರಿಕ ವ್ಯಕ್ತಿತ್ವವಲ್ಲವೇ ?
ಮುಖ್ಯ ಪ್ರಶ್ನೆ ಇರುವುದು ಮಂದಿರ ಮಸೀದಿಗಳ ಬಗ್ಗೆಯಲ್ಲ, ರಾಮ ಅಲ್ಲಾ ಎಂಬ ದೇವರುಗಳ ಬಗ್ಗೆಯಲ್ಲ, ಮನುಷ್ಯ ಪ್ರಾಣಿಯ ಕ್ರೌರ್ಯದ ಬಗ್ಗೆ. ಎಷ್ಟೊಂದು ಧಾರ್ಮಿಕ ಮುಖಂಡರು, ಎಷ್ಟೊಂದು ವಿದ್ಯಾವಂತ ನಾಯಕರು, ಎಷ್ಟೊಂದು ಸಾಹಿತಿ ಹೋರಾಟಗಾರ ಪ್ರಗತಿಪರ ಚಿಂತಕರು, ಎಷ್ಟೊಂದು ರಾಜಕಾರಣಿಗಳು ಪತ್ರಕರ್ತರು ಇದ್ದಾರೆ. ಆದರೆ ಯಾರೊಬ್ಬರೂ ಈ ಧಾರ್ಮಿಕ ಕ್ರೌರ್ಯದ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಮಂದಿರ ಅಥವಾ ಮಸೀದಿಯ ಪರವಾಗಿ ಮಾತ್ರ ಮಾತನಾಡುತ್ತಾರೆ. ಇದು ಎಂದೆಂದಿಗೂ ಬಗೆಹರಿಯದ ಸಮಸ್ಯೆ.
ಇಷ್ಟೆಲ್ಲಾ ಧರ್ಮ ದೇವರುಗಳ ಬಗ್ಗೆ ಭಾವ ಭಕ್ತಿಗಳಿಂದ ಮಾತನಾಡುವವರು ನೋಡೋಣ ನಿಮ್ಮ ದೇವರುಗಳನ್ನು ನಂಬಿ ಮಂದಿರ ಅಥವಾ ಮಸೀದಿಗಳ ಜಾಗವನ್ನು ತ್ಯಾಗ ಮಾಡಿ. ಆಗ ಆ ದೇವರೇ ನಿಮ್ಮನ್ನು ಕಾಪಾಡುತ್ತಾನೆ ಎಂಬ ಭರವಸೆ ಇಡಿ ನೋಡೋಣ.
ಅದು ನಿಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ನೀವು ಹೋರಾಡುತ್ತಿರುವುದು ದೇವರು ಧರ್ಮದ ರಕ್ಷಣೆಗಾಗಿಯಲ್ಲ. ತುಂಡು ಜಮೀನಿಗಾಗಿ, ನಿಮ್ಮ ಹೊಟ್ಟೆ ಪಾಡಿಗಾಗಿ, ನಿಮ್ಮ ರಾಜಕೀಯ ಗೆಲುವಿಗಾಗಿ.
ಆ ದೇವರು ಇದ್ದದ್ದೇ ಆದರೆ ಮೊದಲು ನೇರವಾಗಿ ಪ್ರತ್ಯಕ್ಷವಾಗಿ ” ಇಡೀ ಜಗತ್ತೇ ನನ್ನದು. ನನಗಾಗಿ ಯಾವುದೇ ಮಂದಿರ ಮಸೀದಿ ಬೇಡ. ಎಲ್ಲಾ ಜೀವರಾಶಿಗಳು ನಿಮ್ಮ ಪಾಡಿಗೆ ನೀವು ಒಳ್ಳೆಯವರಾಗಿ ಇನ್ನೊಬ್ಬರಿಗೆ ತೊಂದರೆ ಕೊಡದೆ ನೆಮ್ಮದಿಯಿಂದ ಬದುಕಿ. ಅದೇ ನಿಜವಾದ ಭಕ್ತಿ. ಅದೇ ನಿಜವಾದ ಪ್ರಾರ್ಥನೆ, ಅದೇ ನಿಜವಾದ ನಮಾಜು, ಅದೇ ನಿಜವಾದ ಸುಪ್ರಭಾತ. ಅದು ಬಿಟ್ಟು ನೀವು ಒಬ್ಬರಿಗೊಬ್ಬರು ನನಗಾಗಿ ಹೊಡೆದಾಡಿಕೊಂಡರೆ ನಾನೇ ನಿಮ್ಮನ್ನು ಶಿಕ್ಷಿಸುತ್ತೇನೆ ” ಎಂದು ಹೇಳಬಾರದೇ ?
ವೈರಸ್ ಗಳ ಕಾಟ, ಯುದ್ಧದ ಪರಿಣಾಮ, ಆರ್ಥಿಕ ಕುಸಿತ, ಮೌಲ್ಯಗಳ ನಾಶ ಮುಂತಾದ ಕಾರಣಗಳಿಂದಾಗಿ ಸಾಮಾನ್ಯರ ಬದುಕು ನರಕವಾಗುತ್ತಿರುವ ಸಂದರ್ಭದಲ್ಲಿ ಬೇಡದ ವಿನಾಶಕಾರಿ ಗಲಭೆಗಳನ್ನು ನೋಡಿ ಮನನೊಂದು ಇದನ್ನು ಇಷ್ಟೊಂದು ಕಠಿಣವಾಗಿ ಬರೆಯಬೇಕಾಯಿತು.
ದಯವಿಟ್ಟು ಇನ್ನು ಮುಂದಾದರು ಅನವಶ್ಯಕವಾಗಿ ಯಾವುದೋ ವಿವಾದಗಳನ್ನು ಕೆಣಕುವುದಕ್ಕಿಂತ, ದೇವರು ಧರ್ಮದ ಬಗ್ಗೆ ತಲೆಕಡಿಸಿಕೊಳ್ಳುವುದಕ್ಕಿಂತ ನಾಗರಿಕ ಮನುಷ್ಯರಾಗಿ ಬದುಕುವುದಕ್ಕೆ ಹೆಚ್ಚಿನ ಆದ್ಯತೆ ಕೊಡೋಣ. ಇಲ್ಲದಿದ್ದರೆ ಸರ್ವನಾಶಕ್ಕೆ ಸಿದ್ದರಾಗೋಣ.
( ಇದು ಹಿಂದೂ ಮುಸ್ಲಿಂ ಎಂಬ ಎರಡೂ ದೇವರು ಮತ್ತು ಧರ್ಮಗಳಿಗೆ ಸಮನಾಗಿ ಅನ್ವಯ. ಬೇಸರವಾದರೆ ದಯವಿಟ್ಟು ಕ್ಷಮಿಸಿ. ಇದು ಮಾನವೀಯ ಮೌಲ್ಯಗಳ ಪುನರುತ್ಥಾನದ ದಾರಿಯಲ್ಲಿ ನಮ್ಮ ಕರ್ತವ್ಯ )
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……