ಉಡುಪಿ: ದಿನಾಂಕ:20-06-2026(ಹಾಯ್ ಉಡುಪಿ ನ್ಯೂಸ್) ಚುನಾಯಿತ ಜನಪ್ರತಿನಿಧಿಗಳು ಇಲ್ಲದೆ ಉಡುಪಿ ನಗರ ಸಭೆಯ ಆಡಳಿತ ಜಡ್ಡುಗಟ್ಟಿದೆ. ನಗರಸಭೆಯಲ್ಲಿ ಯಾವುದೇ ಕೆಲಸ ಕಾರ್ಯಗಳ ಕಡತಗಳು ನಿಗದಿತ ಅವಧಿಗೆ ಸಾರ್ವಜನಿಕರ ಕೈಸೇರುತ್ತಿಲ್ಲ. ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿ ಕೊಳ್ಳಲು ದಿನನಿತ್ಯ ಎಂಬಂತೆ ತಿಂಗಳು ಗಟ್ಟಲೆ ನಗರಸಭೆಯ ಕಚೇರಿಗೆ ಬಂದು ಹಾಜರಿ ಹಾಕುವಂತಾಗಿದೆ.
ಇದು ನಗರಸಭೆಯ ಕಚೇರಿಯ ಒಳಗಿನ ಕಥೆಯಾದರೆ ಹೊರಗಿನ ನಗರದಲ್ಲಿ ಕಸ ಗುಡಿಸುವವರು ಕೆಲವರು ಇಲ್ಲ, ರಸ್ತೆ ಬದಿಗಳಲ್ಲಿ ಬೆಳೆದಿರುವ ಕಳೆ ಗಿಡಗಳನ್ನು, ಪೊದೆಗಳನ್ನು ಸವರುವವರಿಲ್ಲ, ಗುಡಿಸಿ ಇಟ್ಟಲ್ಲಿ ಅಲ್ಲಿಂದ ವಿಲೇವಾರಿ ಮಾಡುವವರಿಲ್ಲ. ಚರಂಡಿಯಿಂದ ತೆಗೆದ ಹೂಳು ಮರಳಿ ಚರಂಡಿ ಸೇರಿದರೂ ಅಧಿಕಾರಿಗಳಿಗೆ ಕಣ್ಣೇ ಕಾಣುತ್ತಿಲ್ಲ. ನಗರದಲ್ಲಿ ರಸ್ತೆ ರಸ್ತೆಗಳಲ್ಲಿ ಕಸ ರಾಶಿ ಬಿದ್ದರೂ ತೆರವು ಮಾಡುವವರಿಲ್ಲ. ಒಟ್ಟಾರೆಯಾಗಿ ನಗರಾಡಳಿತ ಎಕ್ಕುಟ್ಟಿ ಹೋಗಿದ್ದು ಜಿಲ್ಲಾಧಿಕಾರಿಗಳು ಇನ್ನಾದರೂ ನಗರದ ರಸ್ತೆಗಳ ,ಚರಂಡಿಗಳ ಬದಿಗೊಮ್ಮೆ ಕಣ್ಣು ಹಾಯಿಸಿದರೆ ನಗರದ ದುರವಸ್ಥೆ ಗೆ ಮುಕ್ತಿ ಸಿಗಬಹುದೇನೋ?









