ದಿನಾಂಕ: 18-06-2026 (ಹಾಯ್ ಉಡುಪಿ ನ್ಯೂಸ್)
ಕಾಪು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಸಾಯಿ ಸರ್ವಿಸ್ ಸ್ಟೇಷನ್ ಬಳಿ ಗುರುವಾರ ಬೆಳಿಗ್ಗೆ ಎಕ್ಸ್‌ಪ್ರೆಸ್ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರನನ್ನು ಮಂಗಳೂರಿನ ಸಸಿಹಿತ್ಲು ಮೂಲದ, ಪ್ರಸ್ತುತ ಕಾಪು ನಿವಾಸಿಯಾಗಿರುವ ಗಣೇಶ್ ಪಾತ್ರಿ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಕಾಪು ಸರ್ವಿಸ್ ರಸ್ತೆಯ ಮೂಲಕ ಹೆದ್ದಾರಿ ಜಂಕ್ಷನ್ ಪ್ರವೇಶಿಸುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ (ರಾಂಗ್ ಸೈಡ್) ಚಲಿಸುತ್ತಿದ್ದ ಸ್ಕೂಟರ್‌ಗೆ ಬಸ್ ರಭಸವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟು, ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಸ್ಕೂಟರ್‌ಗೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿದ ಎಕ್ಸ್‌ಪ್ರೆಸ್ ಬಸ್, ಹೆದ್ದಾರಿಯ ಮಧ್ಯದ ಡಿವೈಡರ್ (ರಸ್ತೆ ವಿಭಜಕ) ಹತ್ತಿ ನಿಂತಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ ಪಲ್ಟಿಯಾಗುವುದು ತಪ್ಪಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ದೊಡ್ಡ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು, ತಕ್ಷಣವೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಪಾತ್ರಿ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಕಾಪು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
