images-1.jpeg
Spread the love

ಓಂ ಶ್ರೀ ಗಣೇಶಾಯ ನಮಃ

ದಿನಾಂಕ ೧೩- ೪- ೧೯೭೯.

ಶ್ರೀ ಶ್ರೀ ಶ್ರೀ
ತೀರ್ಥರೂಪ ತಂದೆಯವರಿಗೆ ನಿಮ್ಮ ಮಗನಾದ ವಿರೂಪಾಕ್ಷನ ಸಾಷ್ಟಾಂಗ ನಮಸ್ಕಾರಗಳು……

ಅಪ್ಪ, ನಿಮ್ಮ ಪತ್ರ ತಲುಪಿತು. ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿ ಕ್ಷೇಮ. ಅಲ್ಲಿ ನೀವು ಕ್ಷೇಮ ಎಂದು ಭಾವಿಸುವೆ. ಇನ್ನು ಒಂದು ತಿಂಗಳಿಗೆ ಸರಿಯಾಗಿ ನನ್ನ ಬಿ ಎ ಅಂತಿಮ ಪರೀಕ್ಷೆ ಇದೆ. ನಾನು ಚೆನ್ನಾಗಿ ತಯಾರಾಗಿದ್ದೇನೆ. ಕಾಲೇಜಿನಲ್ಲಿ ಎಲ್ಲಾ ಉಪನ್ಯಾಸಕರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ನಾನು ಯಾವುದೇ ತರಗತಿಯನ್ನು ತಪ್ಪಿಸಿಲ್ಲ.

ಹಾಸ್ಟೆಲ್ ನಲ್ಲಿ ಮೊದಲಿಗೆ ಊಟ ಚೆನ್ನಾಗಿರಲಿಲ್ಲ. ನಾವು ವಾರ್ಡನ್ ಗೆ ದೂರು ನೀಡಿದೆವು. ಅದಕ್ಕೆ ಅವರು ಮೈಸೂರಿನ ಕಡೆಯ ಅಡುಗೆ ಭಟ್ಟರನ್ನು ಹೊಸದಾಗಿ ನೇಮಕ ಮಾಡಿದ್ದಾರೆ. ಈಗ ಊಟ ಪರವಾಗಿಲ್ಲ. ಮೊನ್ನೆ ಹಬ್ಬಕ್ಕೆ ಬೇಳೆ ಹೋಳಿಗೆ ಮಾಡಿದ್ದರು. ತುಂಬಾ ರುಚಿಯಾಗಿತ್ತು. ಪ್ರತಿ ವಿದ್ಯಾರ್ಥಿಗೆ ಮೂರು ಮೂರು ಹೋಳಿಗೆ ನೀಡಿದರು.

ನಾನು ಬೆಳಗಿನ ನಾಲ್ಕು ಗಂಟೆಗೆ ಎದ್ದು ಓದುತ್ತಿದ್ದೇನೆ. ನನ್ನ ರೂಂಮೇಟ್ ಶಶಾಂಕನಿಗೆ ಮಲೇರಿಯಾ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದ. ಅವರ ಅಪ್ಪ ಅಮ್ಮ ಬಂದು ಅವನನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ನಾನು ಈಗ ರೂಮಿನಲ್ಲಿ ಒಬ್ಬನೇ ಇದ್ದೇನೆ. ಈಗ ವಾತಾವರಣದಲ್ಲಿ ತುಂಬಾ ಸೆಖೆ ಇದೆ. ನಮ್ಮ ರೂಮಿನ ಫ್ಯಾನ್ ಕೆಟ್ಟು ಹೋಗಿದೆ. ಅದನ್ನು ಸರಿಪಡಿಸಲು ವಾರ್ಡನ್ ಗೆ ಮನವಿ ಮಾಡಿದ್ದೇನೆ. ಇನ್ನೂ ಮಾಡಿಲ್ಲ.

ನಿಮ್ಮ ಮಾತಿನಂತೆ ನಾನು ಎಲ್ಲಿಯೂ ಹೊರಗೆ ಹೋಗುವುದಿಲ್ಲ. ಹೋಟೆಲ್ ತಿಂಡಿಯನ್ನು ತಿನ್ನುವುದಿಲ್ಲ. ಹಸಿವಾದಾಗ ಬಾಳೆಹಣ್ಣು ಮಾತ್ರ ತಿನ್ನುತ್ತೇನೆ. ದೇವರಾಣೆಗೂ ಯಾವುದೇ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿಲ್ಲ. ನಿಮಗೆ ಕೆಟ್ಟ ಹೆಸರು ಬರುವಂತೆ ಎಂದೂ ನಡೆದುಕೊಳ್ಳುವುದಿಲ್ಲ.

ಅಪ್ಪಾ,
ಅಮ್ಮ ಹೇಗಿದ್ದಾಳೆ‌. ಕಳೆದ ಪತ್ರದಲ್ಲಿ ಅವಳಿಗೆ ಜ್ವರ ಬಂದಿದೆ ಎಂದು ಬರೆದಿದ್ದೆ, ಈಗ ಹುಷಾರಾಗಿದ್ದಾಳ ?ಅಣ್ಣ ಅತ್ತಿಗೆ ಹೇಗಿದ್ದಾರೆ. ಚಿಕ್ಕಪ್ಪ, ದೊಡ್ಡಜ್ಜಿ, ನಿರ್ಮಲ, ಸುಮ, ಶ್ರೀನಿವಾಸ ಎಲ್ಲಾ ಹೇಗಿದ್ದಾರೆ ?ಎಲ್ಲರಿಗೂ ನನ್ನ ಕ್ಷೇಮ ಸಮಾಚಾರ ತಿಳಿಸುವುದು.

ಹಸು ಮರಿ ಹಾಕಿದೆಯಾ ? ನಾಯಿಗಳು ಚೆನ್ನಾಗಿವೆಯೇ ? ಮಳೆ ವಾತಾವರಣ ಹೇಗಿದೆ ? ಅಜ್ಜಿಯ ಕಾಲು ನೋವು ಹೇಗಿದೆ ? ಎಲ್ಲಾ ವಿಷಯ ಮುಂದಿನ ಪತ್ರದಲ್ಲಿ ತಿಳಿಸುವುದು.

ಪಕ್ಕದ ಮನೆ ಪದ್ಮಕ್ಕನಿಗೆ ಮಗು ಆಯಿತೆ. ಎದುರು ಬೀದಿಯ ನಳಿನಿಗೆ ಗಂಡು ಸೆಟ್ ಆಯಿತೆ. ಭಾವನಿಗೆ ಎಲ್ಲಾದರೂ ಕೆಲಸ ಸಿಕ್ಕಿತೆ ಎಲ್ಲವನ್ನೂ ಪತ್ರದಲ್ಲಿ ತಿಳಿಸುವುದು.

ಅಪ್ಪಾ , ನೀನು ನನಗಾಗಿ ಯಾವುದೇ ಚಿಂತೆ ಮಾಡಬೇಡ. ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ. ನನ್ನ ಪರೀಕ್ಷೆ ಮುಗಿದ ತಕ್ಷಣ ಊರಿಗೆ ಬರುತ್ತೇನೆ. ನಿನಗೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ.

ಅಪ್ಪಾ, ಬಿ ಎ ಮುಗಿದ ನಂತರ ಎಂ ಎ ಮಾಡುವ ಆಸೆ ಇದೆ. ಆದರೆ ನಿನ್ನ ಬಳಿ ದುಡ್ಡು ಇಲ್ಲ ಅಂತ ಗೊತ್ತು. ಅದಕ್ಕಾಗಿ ಯಾವುದೇ ಜಮೀನು ಮಾರುವ ಅಗತ್ಯವಿಲ್ಲ. ನಾನು ಸರ್ಕಾರದ ಸ್ಕಾಲರ್ಶಿಪ್ ಗೆ ಅರ್ಜಿ ಹಾಕುತ್ತೇನೆ. ಅದು ಸಿಕ್ಕಿದರೆ ಓದು ಮುಂದುವರಿಸುತ್ತೇನೆ. ಇಲ್ಲದಿದ್ದರೆ ಯಾವುದಾದರೂ ಉದ್ಯೋಗ ಹಿಡಿಯುತ್ತೇನೆ. ಈ ಬಗ್ಗೆ ಹೆಚ್ಚು ಚಿಂತಿಸದಿರಿ. ನಾನು ನಿನ್ನನ್ನು, ಅಮ್ಮನನ್ನು ಜೀವನಪೂರ್ತಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನೀವೇ ನಮ್ಮ ಪಾಲಿನ ದೇವರು.

ಅಪ್ಪಾ, ಈಗ ಇಲ್ಲಿ ಸಂಜೆ ೬ ಗಂಟೆ. ಅಮ್ಮ ತುಂಬಾ ನೆನಪಾಗುತ್ತಿದ್ದಾಳೆ. ನಿನ್ನೆ ನಿನ್ನ ಪತ್ರ ಓದುತ್ತಿದ್ದಾಗ ಅಳು ತಡೆಯಲಾಗದೆ ಅತ್ತು ಬಿಟ್ಟೆ. ಈಗಲೂ ಅಳು ಬರುತ್ತಿದೆ. ನಿಮ್ಮಂತ ತಂದೆ ತಾಯಿಯನ್ನು ಪಡೆದ ನಾನೇ ಪುಣ್ಯವಂತ. ಏಳು ಜನ್ಮವೆತ್ತಿದರು ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಹೆಚ್ಚಿನ ವಿಷಯ ಊರಿಗೆ ಬಂದಾಗ ಮಾತನಾಡೋಣ.
ಏನಾದರೂ ತಪ್ಪುಗಳಿದ್ದಲ್ಲಿ ಕ್ಷಮಿಸುವುದು.

ಅಪ್ಪಾ, ಈ ಪತ್ರ ತಲುಪಿದ ತಕ್ಷಣ ಇದಕ್ಕೆ ಉತ್ತರಿಸುವುದು ಮರೆಯಬೇಡ.
ನಮಸ್ಕಾರಗಳು.
ಇಂತಿ,
ನಿಮ್ಮ ಆಶೀರ್ವಾದಗಳೊಂದಿಗೆ,
ನಿಮ್ಮ ವಿಧೇಯ,
ನಿಮ್ಮ ಪ್ರೀತಿಯ ಮಗ.
ವಿರೂಪಿ……

( ಹಳೆಯ ದಶಕಗಳ ‌ಹಾಸ್ಟಲ್ ವಿದ್ಯಾರ್ಥಿಗಳ ಪತ್ರ ವ್ಯವಹಾರದ ಒಂದು ಸಣ್ಣ ತುಣುಕು ನೆನಪಿನಂಚಿನಿಂದ…… )

( ಈಗಿನ ಮಕ್ಕಳ ಒಂದು ವಾಟ್ಸಪ್ ಮೆಸೇಜ್ ಹೇಗಿರುತ್ತೆ ಎಂದರೆ,
” ಡ್ಯಾಡ್ ಪ್ಲೀಸ್ ಸೆಂಡ್ ಮಿ 2000 ರುಪೀಸ್ ಫಾರ್ ಮೈ ಡೈಲಿ ಎಕ್ಸ್ಪೆಂಡಿಚರ್ ಇಮ್ಮಿಡಿಯಟ್ಲಿ ಬೈ ಫೋನ್ ಪೇ. ಇಫ್ ನಾಟ್ ಐ ವಿಲ್ ಅಟೆಂಪ್ಟ್ ಸೂಸೈಡ್ ಆರ್ ಐ ವಿಲ್ ಕಮ್ ಬ್ಯಾಕ್ ರೈಟ್ ನೌ. ಪ್ಲೀಸ್ ರೆಸ್ಪಾಂಡ್. ವೈಟಿಂಗ್ ಫಾರ್ ಯುವರ್ ರಿಪ್ಲೇ. ಥ್ಯಾಂಕ್ಯು……. )
ಅಅಹಹಹ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ

error: No Copying!