images-10.jpeg
Spread the love

ಅನ್ನದ ಋಣ ಮರೆತ ರಾಜಕಾರಣಿಗಳು,…..

ಅನ್ನದಾತರ ಅಂತರಂಗ……

ಮುಂಗಾರು ಮಳೆಯ ಹೊಸ್ತಿಲಲ್ಲಿ….

ರೈತರ ದಾರುಣ ಆತ್ಮಹತ್ಯೆಗಳು……

ಜನ ಪ್ರತಿನಿಧಿಗಳೆಂಬ ಸಮಾಜ ಸೇವಕರೋ – ಸಂವಿಧಾನ ರಕ್ಷಕರೋ – ರೇಸು ಕುದುರೆಗಳೋ – ಗೋಮುಖ ವ್ಯಾಘ್ರಗಳೋ…..

ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳ ಚುನಾವಣೆಗಳ ರೀತಿನೀತಿಗಳು, ರಾಜಕೀಯ ಪಕ್ಷಗಳ ವರ್ತನೆ, ಜನಪ್ರತಿನಿಧಿಗಳ ನಡತೆ, ಚುನಾವಣೆ ಗೆಲ್ಲಲು ಅನುಸರಿಸುವ ತಂತ್ರಗಳು, ಗೆಲುವು ಅಥವಾ ಸೋತ ನಂತರ ಅವರು ನಡೆದುಕೊಳ್ಳುವ ರೀತಿ, ಪಕ್ಷಗಳ ವಿಭಜನೆ, ಮಾತೃದ್ರೋಹ, ಮಾಧ್ಯಮಗಳ ವಿಶ್ಲೇಷಣೆ ಎಲ್ಲವನ್ನೂ ನೋಡುತ್ತಿದ್ದರೆ ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡಿಸುತ್ತಿದೆ.

ಮೇಲ್ನೋಟಕ್ಕೆ ಈ ಪ್ರಜಾಪ್ರಭುತ್ವ ಅಂಕಿಸಂಖ್ಯೆಗಳ ಆಟ, ಒಳಗಡೆ ತಂತ್ರ ಕುತಂತ್ರ ಕಚ್ಚಾಟ, ದ್ವೇಷ ಅಸೂಯೆಗಳ ರಂಪಾಟ. ಇದಕ್ಕಾಗಿ ಇವರುಗಳು ವಹಿಸುವ ಶ್ರಮ, ಮಾಡುವ ಕೆಟ್ಟ ರಾಜಕೀಯ, ಆಡುವ ಮಾತುಗಳು ಖಂಡಿತ ಅತ್ಯಂತ ಬೇಜವಾಬ್ದಾರಿ ಮತ್ತು ಸ್ವಾರ್ಥದ ಪರಮಾವಧಿ.

ಈ ಸಂದರ್ಭದಲ್ಲಿ ನಮಗೆ ನೆನಪಾಗಬೇಕಿರುವುದು……

ಮುಂಗಾರು ಮಳೆ ಆರಂಭವಾಗಿದೆ. ಸಾಧಾರಣ ಅಥವಾ ಸಾಮಾನ್ಯಕಿಂತ ಕಡಿಮೆ ಮಳೆಯ ನಿರೀಕ್ಷೆ ಹವಾಮಾನ ಇಲಾಖೆಗಳಿಂದ ತಿಳಿದುಬಂದಿದೆ.
ಈ ಸಮಯದಲ್ಲಿ ಒಬ್ಬ ಸಾಮಾನ್ಯ ನಾಗರೀಕನಾಗಿ ನನ್ನ ಅನಿಸಿಕೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ನಾವೆಲ್ಲಾ ನಂಬಿಕೊಂಡಿರುವುದು, ನಾವೇ ನಮಗಾಗಿ ಚುನಾಯಿಸಿ ಕಳುಹಿಸಿದ ಈ ಸರ್ಕಾರಗಳನ್ನು. ಈ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರ ಎಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಯೋಚಿಸಿ.

ಮಳೆನೀರಿನ ಸಂಪೂರ್ಣ ಉಪಯೋಗ ಮಾಡಿಕೊಳ್ಳಲು ಸಮರೋಪಾದಿಯ ಯೋಜನೆಗಳು, ಕೃಷಿ ಚಟುವಟಿಕೆಗೆ ಅತ್ಯಂತ ವಾಸ್ತವಿಕ ಮತ್ತು ವೈಜ್ಞಾನಿಕ ಯೋಜನೆಗಳು, ಕೃಷಿ ಮತ್ತು ನೀರಾವರಿ ತಜ್ಞರು, ಅಧಿಕಾರಿಗಳ ಸಂಪೂರ್ಣ ಸದ್ಬಳಕೆ, ಗ್ರಾಮ ಮಟ್ಟದಿಂದ ನಗರದ ಗ್ರಾಹಕರವರೆಗೆ ಅತ್ಯಂತ ವ್ಯವಸ್ಥಿತ ಮತ್ತು ಸುಲಭ ಮಾರುಕಟ್ಟೆ, ಬೆಲೆ ನಿಗದಿ, ಮನುಷ್ಯನ ದಿನನಿತ್ಯದ ಅತ್ಯಂತ ಅವಶ್ಯಕವಾದ ಆಹಾರದ ಸದುಪಯೋಗ, ಅದರ ಗರಿಷ್ಠ ಲಾಭ ಬೆಳೆದವರಿಗೆ ಸಿಗುವಂತೆ ಮಾಡುವುದು ಆಡಳಿತದ ಬಹುದೊಡ್ಡ ಜವಾಬ್ದಾರಿ ಅಲ್ಲವೇ ?

ಅವಶ್ಯವಿರುವ ಕಡೆ ಹೊಸ ಕೆರೆ ಕಟ್ಟೆಗಳ ನಿರ್ಮಾಣ, ಮಳೆನೀರು ಸಂಗ್ರಹ, ಬಿತ್ತನೆ ಮತ್ತು ಅದರ ಬೆಳವಣಿಗೆ ಬಗ್ಗೆ ನಿರಂತರ ಮಾಹಿತಿ ಸಂಗ್ರಹ ಮತ್ತು ದೇಶ ಹಾಗೂ ರಾಜ್ಯಾದ್ಯಂತ ಆ ಮಾಹಿತಿಯ ವಿನಿಮಯ, ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮನ್ವಯತೆ ಸಾಧಿಸಿದರೆ ನಿಶ್ಚಯವಾಗಿ ರೈತರ ಜೀವನಮಟ್ಟ ಸುಧಾರಿಸುತ್ತದೆ ಮತ್ತು ಆ ಮುಖಾಂತರ ಪರೋಕ್ಷವಾಗಿ ರಾಜ್ಯ ಮತ್ತು ದೇಶ ಸಹಜವಾಗಿಯೇ ಇತರ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುತ್ತದೆ. ರೈತರ ಆದಾಯ ದ್ವಿಗುಣವಾಗುತ್ತದೆ. ರೈತರ ಆತ್ಮಹತ್ಯೆಗಳು ನಿಲ್ಲುತ್ತವೆ. ಇದಕ್ಕೆ ಯಾವುದೇ ಮಾಟ ಮಂತ್ರ, ದೇಶಭಕ್ತಿ, ಹೋಮ, ಅತಿಮಾನುಷ ಶಕ್ತಿಯ ಅವಶ್ಯಕತೆ ಇಲ್ಲ.

ಆದರೆ ಸರ್ಕಾರಗಳು ಮಾಡುತ್ತಿರುವುದೇನು? ಅಷ್ಟೇನೂ ಪ್ರಾಮುಖ್ಯವಲ್ಲದ, ಒಂದೇ ಬಾರಿ ಮಾಡಿ ಮುಗಿಸಬಹುದಾದ ಚುನಾವಣೆಗಳನ್ನು ಮತ್ತೆ ಮತ್ತೆ ನಿರಂತರವಾಗಿ ನಡೆಸುತ್ತಾ ಸಮಯ ವ್ಯರ್ಥಮಾಡುವುದು, ಸಂಪುಟ ಪುನರ್ರಚನೆಯ ಸರ್ಕಸ್, ಅಸಹ್ಯ ಜಾಹೀರಾತುಗಳ ಒಣ ಪ್ರದರ್ಶನ ಮತ್ತು ದುಂದು ವೆಚ್ಚ, ರಾಜ್ಯ ನಂಬರ್‌ ಒನ್, ರಾಷ್ಟ್ರ ವಿಶ್ವಗುರು ಎಂಬ ಭ್ರಮೆಗೆ ಜನರನ್ನು ತಳ್ಳುವುದು, ಅದನ್ನು ಮಾಧ್ಯಮಗಳು ವಿವೇಚನೆ, ನಾಚಿಕೆಯಿಲ್ಲದೆ ಪ್ರಸಾರ ಮಾಡುವುದು, ಮುಂದೆ ಯಾವಾಗಲೋ ಬರುವ ಚುನಾವಣೆಗಾಗಿ ಈಗಿನಿಂದಲೇ ಸಿದ್ಧತೆ.

ಛೆ, ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಬರ ಬಂದಾಗ, ಪ್ರಾಕೃತಿಕ ವಿಕೋಪಗಳಾದಾಗ ಕೂಗುಮಾರಿಗಳಾಗುವ ಇವರು ಈಗ ಮುಂಗಾರು ಮಳೆ ಪ್ರಾರಂಭವಾಗಿರುವಾಗ ಅದರ ಪ್ರಯೋಜನ ಪಡೆಯಲು ಮುಂದಾಗುತ್ತಿಲ್ಲ. ಹಾಗಾದರೆ ಇವರಿಗೆ ಬೇಕಾಗಿರುವುದು ನೆಮ್ಮದಿಯಲ್ಲ. ಬದಲಾಗಿ ಕಷ್ಟಗಳ, ದುರಂತಗಳ ವಿಜೃಂಭಣೆ, ಮಾತಿಗೊಮ್ಮೆ ಟೀಕೆ, ಕೆಲಸಕ್ಕೆ ಬಾರದ ವಿಷಯಗಳ ಚರ್ಚೆ ಅಷ್ಟೆ.

ಆ ಮುಖಾಂತರ ಇವರು ಲಾಭ ಮಾಡಿಕೊಳ್ಳುವುದು. ಸಮಸ್ಯೆಗಳೇ ಇವರ ಹೊಟ್ಟೆಪಾಡು. ಪರಿಹಾರಕ್ಕೆ ದಾರಿ ಇದ್ದಾಗ ನಿರ್ಲಕ್ಷಿಸುವುದು ಮತ್ತು ಕಣ್ಣುಮುಚ್ಚಿಕೊಳ್ಳುವುದು. ನಿಜಕ್ಕೂ ಇದೊಂದು ದುರಂತ.

ಆದರೆ ರೈತರ ಅಂತರಂಗವನ್ನೊಮ್ಮೆ ನೋಡಿ…

ಮತ್ತೆ ಮತ್ತೆ ತಲೆ ಎತ್ತಿ ನೋಡುತ್ತೇನೆ ಆಕಾಶದ ಕಡೆಗೆ,

ಈ ಬಾರಿಯಾದರೂ ಹದವಾದ ಮಳೆಯಾಗುವುದೆ,

ಧೋ ಎಂದು ಸುರಿಯದೆ, ತುಂತುರು ಹನಿಯಾಗದೆ ಸಹಜ ಮಳೆಯಾಗುವುದೆ,

ಹಸನಾದ ಭೂಮಿಗೆ ಒಳ್ಳೆಯ ಬಿತ್ತನೆ ಮಾಡಬಹುದೆ,

ಎಲ್ಲರ ಶ್ರಮಕ್ಕೆ ಒಳ್ಳೆಯ ಫಸಲಾಗಬಹುದೆ,

ನಮ್ಮ ಬೆವರಿಗೆ ಉತ್ತಮ ಬೆಲೆ ಸಿಗಬಹುದೆ,

ಆಸೆಯ ಹಗಲುಗನಸಿನಿಂದ ಮನಸ್ಸು ಫಳಫಳ ಹೊಳೆಯುತ್ತದೆ,

ಈ ಸಲವಾದರೂ ನಾನು ಸಾಲಗಳಿಂದ ಮುಕ್ತನಾಗುವೆನೆ,

ಬೆಳೆದ ಮಗಳಿಗೆ ಲಗ್ನ ಮಾಡಲು ಸಾಧ್ಯವಾಗಬಹುದೆ,

ಅಪ್ಪನ ಹೃದಯ ಖಾಯಿಲೆಗೆ ಚಿಕಿತ್ಸೆ ಕೊಡಿಸಬಹುದೆ,

ಅಮ್ಮನ ರೇಷ್ಮೆ ಸೀರೆಯ ಆಸೆ ಪೂರೈಸಬಹುದೆ,

ನನ್ನವಳ ಕನಸಾದ ಕಿವಿಯೋಲೆಯನ್ನು ಅವಳಿಗೆ ಕಾಣಿಕೆಯಾಗಿ ನೀಡಬಹುದೆ,

ಆಮೇಲೆ ಚೂರು ಪಾರು ಉಳಿದರೆ,
ನನ್ನ ಬಾಲ್ಯದ ಚಡ್ಡೀ ದೋಸ್ತುಗಳಿಬ್ಬರ ಜೊತೆ ನಗರಕ್ಕೆ ಹೋಗಿ,
ಸಿನಿಮಾ ನೋಡಿ, ಮಾದಯ್ಯನ ಹೋಟೆಲ್ ನಲ್ಲಿ,
ನಾಟಿ ಕೋಳಿ ಬಿರ್ಯಾನಿ ತಿನ್ನಬಹುದೆ,

ಕಣ್ಣುಗಳು ಆಸೆಯಿಂದ ಅರಳುತ್ತವೆ,
ಮನಸ್ಸು ವೇದನೆಯಿಂದ ಮುದುಡುತ್ತದೆ,
ನಾಳೆಯ ಬಲ್ಲವರಾರೋ…………

ಸಮಸ್ಯೆ ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಸಿಗುವ ಎಲ್ಲಾ ಸಾಧ್ಯತೆಗಳಿದ್ದರೂ ಮಾಡದೆ ಸತ್ತಾಗ ಅವರ ಮನೆಗೆ ಹೋಗಿ ಬಾಯಿಬಡಿದುಕೊಂಡರೆ ಜೀವ ವಾಪಸ್ಸು ಬರುತ್ತದೆಯೇ. ಯಾವ ರಾಜಕೀಯಕ್ಕೂ ಸೇರದ ಕೇವಲ ಜನರ ಹಿತಬಯಸುವ ಸಾಮಾನ್ಯರೆಲ್ಲರೂ ಈ ನಾಟಕಕ್ಕೆ ತೆರೆ ಎಳೆಯಬೇಕಿದೆ. ಇಲ್ಲದಿದ್ದರೆ ಭೀಕರ ದಿನಗಳು ಮುಂದಿವೆ.
ಬನ್ನಿ ಒಗ್ಗಟ್ಟಾಗೋಣ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!