ಬೆಂಗಳೂರು: ದಿನಾಂಕ:10-06-2026(ಹಾಯ್ ಉಡುಪಿ ನ್ಯೂಸ್) ಗ್ರಹ ಮಂತ್ರಿ ಪ್ರಿಯಾಂಕ ಖರ್ಗೆ ಯವರು ಇಂದು ಇ – ಆಡಳಿತ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಇಲಾಖೆಯ ಅಧಿಕಾರಿಗಳೊಂದಿಗೆ ಇ-ಆಡಳಿತ ಇಲಾಖೆ ವ್ಯಾಪ್ತಿಯ ಸಂಸ್ಥೆಗಳಾದ ಇ-ಆಡಳಿತ ಕೇಂದ್ರ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಹಾಗೂ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು
• ಸರ್ಕಾರದ ವಿವಿಧ ಇಲಾಖೆಗಳ ಬಳಿ ಈಗಾಗಲೇ ಸಾರ್ವಜನಿಕರ ಕುರಿತು ಅಪಾರ ಪ್ರಮಾಣದ ಡಿಜಿಟಲ್ ಮಾಹಿತಿ ಲಭ್ಯವಿದೆ. ಈ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವುದಕ್ಕಿಂತ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಬಳಸಿಕೊಳ್ಳುವ ವ್ಯವಸ್ಥೆ ರೂಪಿಸಬೇಕು.
• ರಾಜ್ಯದ ವಿವಿಧ ಇಲಾಖೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಇನ್ನಷ್ಟು ವೇಗವಾಗಿ, ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
• ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಸಂದರ್ಭದಲ್ಲಿ ಇಲಾಖೆಗಳಲ್ಲಿರುವ ಡಿಜಿಟಲ್ ದತ್ತಾಂಶವನ್ನು ಸಮರ್ಪಕವಾಗಿ ಬಳಸುವುದರಿಂದ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರು ಒಂದೇ ಮಾಹಿತಿಯನ್ನು ಹಲವು ಬಾರಿ ಸಲ್ಲಿಸುವ ಅನಿವಾರ್ಯತೆಯೂ ಕಡಿಮೆಯಾಗುತ್ತದೆ.
• ಸರ್ಕಾರದ ಯೋಜನೆಗಳಿಗೆ ಮೀಸಲಿಡುವ ಪ್ರತಿಯೊಂದು ರೂಪಾಯಿಯೂ ನಿಜವಾದ ಅರ್ಹ ಫಲಾನುಭವಿಗೆ ತಲುಪಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ಹಣ ಅನರ್ಹ ಅಥವಾ ತಪ್ಪು ಫಲಾನುಭವಿಗಳಿಗೆ ಹೋಗದಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ರೂಪಿಸಬೇಕು.
• ವಿವಿಧ ಇಲಾಖೆಗಳ ದತ್ತಾಂಶ ಏಕೀಕರಣ, ಕೃತಕ ಬುದ್ಧಿಮತ್ತೆ (AI), GIS ಹಾಗೂ ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೋರಿಕೆ ರಹಿತ ಮತ್ತು ಗುರಿ-ಆಧಾರಿತ ಸೇವಾ ವಿತರಣೆಗೆ ಆದ್ಯತೆ ನೀಡಬೇಕು.
• ರಾಜ್ಯದಲ್ಲಿ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು CeG, KSRSAC ಹಾಗೂ CSG ಸಂಸ್ಥೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಸಾರ್ವಜನಿಕ ಸೇವೆಗಳ ಗುಣಮಟ್ಟ ಮತ್ತು ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವೀನ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು.
ಸಾರ್ವಜನಿಕರ ಜೀವನಮಟ್ಟ ಸುಧಾರಣೆ, ಆಡಳಿತದ ಪಾರದರ್ಶಕತೆ ಹಾಗೂ ಸರ್ಕಾರಿ ಸೇವೆಗಳ ಪರಿಣಾಮಕಾರಿ ಅನುಷ್ಠಾನವೇ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು.
