ಬ್ರಹ್ಮಾವರ: ದಿನಾಂಕ:07-06-2026(ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರ ಗೂಡಂಗಡಿ ತೆಗೆಯುವಂತೆ ಕೆಲವು ವ್ಯಕ್ತಿಗಳು ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೋರ್ವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾರಾಳಿ ಗ್ರಾಮ ಹೆಗ್ಗುಂಜೆ ನಿವಾಸಿ ಗೌರಿ (37) ಎಂಬವರು ಹೆಗ್ಗುಂಜೆ ಮಂದಾರ್ತಿ ಹೋಗುವ ರಸ್ತೆಯ ಕ್ರಾಸ್ ಬಳಿ ಸುಮಾರು ಏಳು ವರ್ಷದಿಂದ ಚಿಕ್ಕ ಗೂಡು ಅಂಗಡಿ ಇಟ್ಟುಕೊಂಡು ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದು, ಆರೋಪಿ ಸುಭಾಸ್ ಎಂಬವನು ಗೌರಿ ರವರು ಅಂಗಡಿ ಇಟ್ಟುಕೊಂಡಿರುವ ದಿನದಿಂದಲೂ ಏನಾದರೂ ಕಾರಣ ಹೇಳಿ ಜಗಳಕ್ಕೆ ನಿಂತು “ನಿಮ್ಮ ಜಾತಿಯವರಿಗೆ ಗೂಡು ಅಂಗಡಿ ಬೇರೆ ಕೇಡು” ಎಂದು ಅಂಗಡಿ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಡು ಅಂಗಡಿ ತೆಗೆಯುವಂತೆ ಇಲ್ಲವಾದರೇ ನಿನ್ನ ಜೊತೆ ಗೂಡು ಅಂಗಡಿಯನ್ನು ಕೂಡ ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ ಎಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ದಿನಾಂಕ: 02/06/2026 ರಂದು ಬೆಳಿಗ್ಗೆ ಆರೋಪಿ ಸುಭಾಷ್ ನು ಅಂಗಡಿಯ ಬಳಿ ಬಂದು “ನೀನು ಇನ್ನೂ ಗೂಡು ತೆಗುದಿಲ್ಯ”ಎಂದು ಸಿಟ್ಟಿನಿಂದ ತನ್ನ ಬೈಕ್ ನಲ್ಲಿದ್ದ ಹುಲ್ಲು ಕತ್ತಿಯನ್ನು ತೆಗೆದು ಕಡಿಯಲು ಯತ್ನಿಸಿರುತ್ತಾನೆ. ಇದಾದ ನಂತರದಲ್ಲಿ ಸುಭಾಸನ ಸಹಚರರು ಕಾರಿನಲ್ಲಿ ಗೂಡಂಗಡಿ ಬಳಿ ಬಂದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಎರಡನೇ ಆರೋಪಿ ಅಣ್ಣಪ್ಪ ದಿನಾಂಕ 05/06/2026 ರಂದು ಬೆಳಿಗ್ಗೆ ಅಂಗಡಿ ಹತ್ತಿರ ಬಂದು ನೀನು ಇಲ್ಲಿಂದ ಜಾಗ ಖಾಲಿ ಮಾಡಬೇಕು ಇಲ್ಲದೇ ಹೋದ್ರೆ ನಿನ್ನನ್ನು ಕಡಿದು ಹಾಕುತ್ತೇನೆಎಂದು ಕತ್ತಿ ಹಿಡಿದು ಹೆದರಿಸಿ ಹೋಗಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗೌರಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ U/S 35̧2 351(2) R/W 3(5) BNS & 3(1)(R), 3(1)(S),3(2),(V-A) SC/ST POA Act 1989 ರಂತೆ ಪ್ರಕರಣ ದಾಖಲಾಗಿದೆ.
