ದಿನಾಂಕ:03-06-2026(ಹಾಯ್ ಉಡುಪಿ ನ್ಯೂಸ್)
ಉಡುಪಿ : ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ಇಂದು ಬೆಳಗ್ಗೆ ಅಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ನಡೆದಿದೆ.
ಕೆಮ್ಮಣ್ಣು ನಿವಾಸಿಗಳಾದ ಗೋಪಾಲಕೃಷ್ಣ (65) ಮತ್ತು ಶ್ಯಾಮಲಾ (60) ರಕ್ಷಿಸಲ್ಪಟ್ಟ ದಂಪತಿ. ಶ್ಯಾಮಲಾ ಅವರು ಮನೆ ಸಮೀಪದ ಬಾವಿಯಿಂದ ನೀರು ಸೇದಲು ಹೋಗಿದ್ದ ವೇಳೆ ಅಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಪತಿ ಗೋಪಾಲಕೃಷ್ಣ ಅವರು ಪತ್ನಿಯನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಗ್ಗದ ಮೂಲಕ ಇಬ್ಬರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ದಂಪತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
