ಉಡುಪಿ: ದಿನಾಂಕ:02-06-2026(ಹಾಯ್ ಉಡುಪಿ ನ್ಯೂಸ್) : ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಜಿಲ್ಲಾ ಅಧ್ಯಕ್ಷರಾದ ಸುಜಯ್ ಪೂಜಾರಿ ಅವರು ತಮ್ಮ ಹುದ್ದೆಗೆ ಹಾಗೂ ಸಂಘಟನೆಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರೊಂದಿಗೆ ಹಲವಾರು ಹಿರಿಯ ಪದಾಧಿಕಾರಿಗಳು, ಸಕ್ರಿಯ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೂಡ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನೀಡಿದವರಲ್ಲಿ ಜಯಪ್ರಕಾಶ್ ಶೆಟ್ಟಿ, ಪ್ರಸಾದ್, ಪ್ರಕಾಶ್ ದೇವಾಡಿಗ, ನಾಗರಾಜ್, ಗಣೇಶ್ ಆಚಾರ್ಯ, ಆನಂದ್ ಶೆಟ್ಟಿ, ಮೋಹನ್, ಬಾಬಣ್ಣ ಕಾಮಾತ್, ಅಶೋಕ್ ಸೇರಿದಂತೆ ಹಲವು ಪ್ರಮುಖ ಕಾರ್ಯಕರ್ತರು ಸೇರಿದ್ದಾರೆ.
ಈ ಕುರಿತು ಮಾತನಾಡಿದ ಸುಜಯ್ ಪೂಜಾರಿ ಅವರು, “ಸಂಘಟನೆಯ ಮೂಲ ಉದ್ದೇಶಗಳು ಮತ್ತು ಆದರ್ಶಗಳಿಗೆ ವಿರುದ್ಧವಾಗಿ ಕೆಲವು ಬೆಳವಣಿಗೆಗಳು ನಡೆಯುತ್ತಿದ್ದು, ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯಗಳಿಗೆ ಬೆಲೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ವರ್ಷಗಳ ಕಾಲ ಸಂಘಟನೆಯ ಬೆಳವಣಿಗೆಗಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚಾಗಿದ್ದು, ನಿರ್ಧಾರಗಳನ್ನು ಕೆಲವೇ ವ್ಯಕ್ತಿಗಳ ಸುತ್ತ ಸೀಮಿತಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆತ್ಮಗೌರವದಿಂದ ಮುಂದುವರಿಯುವುದು ಅಸಾಧ್ಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಾವು ಯಾವುದೇ ವೈಯಕ್ತಿಕ ಹಿತಾಸಕ್ತಿಗಾಗಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿಲ್ಲ. ಕನ್ನಡ, ಕನ್ನಡಿಗರು ಮತ್ತು ನಾಡಿನ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಆದರೆ ಕಾರ್ಯಕರ್ತರ ಶ್ರಮಕ್ಕೆ ಗೌರವವಿಲ್ಲದ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವಕಾಶವಿಲ್ಲದ ವಾತಾವರಣದಲ್ಲಿ ಮುಂದುವರಿಯಲು ಸಾಧ್ಯವಾಗದ ಕಾರಣ ಈ ಕಠಿಣ ನಿರ್ಧಾರ ಕೈಗೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ರಾಜೀನಾಮೆ ನೀಡಿರುವ ಮುಖಂಡರು ಹಾಗೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಸಮಾನ ಮನಸ್ಕರೊಂದಿಗೆ ಚರ್ಚಿಸಿ ತಮ್ಮ ಮುಂದಿನ ಸಾಮಾಜಿಕ ಹಾಗೂ ಸಂಘಟನಾ ಹೆಜ್ಜೆಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸಂಘಟನೆಗೆ ಈ ಸಾಮೂಹಿಕ ರಾಜೀನಾಮೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರು ತಮ್ಮ ನಿಲುವು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

