img_3575.jpeg
Spread the love

ದಿನಾಂಕ:18-05-2026(ಹಾಯ್ ಉಡುಪಿ ನ್ಯೂಸ್)

ಮಂಗಳೂರು: ನಗರದ ಕುಂಟಿಕಾನ ಸಮೀಪದ ಆನ್‌ಲೈನ್ ಡೆಲಿವರಿ ಸಂಸ್ಥೆಯ ಕಟ್ಟಡದಲ್ಲಿ ಸಂಭವಿಸಿದ ಹೃದಯವಿದ್ರಾವಕ ಲಿಫ್ಟ್ ದುರಂತದಲ್ಲಿ ಯುವ ಉದ್ಯೋಗಿಯೊಬ್ಬರು ದುರ್ಮರಣಕ್ಕೀಡಾದ ಘಟನೆ ಶನಿವಾರ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಆನ್‌ಲೈನ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಕರ್ತವ್ಯದ ನಿಮಿತ್ತ ಕಟ್ಟಡದ ಮೇಲ್ಮಹಡಿಗೆ ಲಿಫ್ಟ್ ಮೂಲಕ ತೆರಳುತ್ತಿದ್ದ ವೇಳೆ ಏಕಾಏಕಿ ಲಿಫ್ಟ್ ತಾಂತ್ರಿಕ ದೋಷದಿಂದ ನೆಲಮಹಡಿ ಮತ್ತು ಮೊದಲ ಮಹಡಿ ನಡುವಿನ ಭಾಗದಲ್ಲಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಲಿಫ್ಟ್ ಒಳಗೆ ಸಿಲುಕಿಕೊಂಡ ನೌಫಾಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದು, ತಕ್ಷಣ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರು.

ಲಿಫ್ಟ್‌ನ ಒಂದು ಭಾಗ ಮೊದಲ ಮಹಡಿಗೆ ಸಮೀಪದಲ್ಲಿದ್ದ ಹಿನ್ನೆಲೆ, ಸಿಬ್ಬಂದಿ ಬಾಗಿಲು ತೆರೆಯುವ ಮೂಲಕ ನೌಫಾಲ್ ಅವರನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ಇದೇ ವೇಳೆ ಲಿಫ್ಟ್ ಅನಿರೀಕ್ಷಿತವಾಗಿ ಮರುಚಲನೆಗೊಂಡ ಪರಿಣಾಮ, ನೌಫಾಲ್ ಗಂಭೀರವಾಗಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಯುವ ಉದ್ಯೋಗಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಸಹೋದ್ಯೋಗಿಗಳಲ್ಲಿ ಆಕ್ರಂದನ ಮೇಳೈಸಿದೆ.

ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದೇ ಅಥವಾ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

error: No Copying!