IMG-20260513-WA0036.jpg
Spread the love

ಕೊಲ್ಲೂರು: ದಿನಾಂಕ:13-05-2026(ಹಾಯ್ ಉಡುಪಿ ನ್ಯೂಸ್) ಉಡುಪಿ ಯಿಂದ ಕೊಲ್ಲೂರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ ಒಂದರ ಚಾಲಕನಿಗೆ ಕೊಲ್ಲೂರಿನ ಪುಡಿ ರೌಡಿ ರಿಕ್ಷಾ ಚಾಲಕನೋರ್ವನ ಗ್ಯಾಂಗ್ ಗಂಭೀರ ಹಲ್ಲೆ ನಡೆಸಿರುವ ಘಟನೆ ಕೊಲ್ಲೂರು ಪರಿಸರದಲ್ಲಿ ನಡೆದಿದೆ.

ಉಡುಪಿಯಿಂದ ಕೊಲ್ಲೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಎಸ್.ಎಮ್.ಎಮ್.ಎಸ್ ಹೆಸರಿನ ಬಸ್ ನ ಚಾಲಕ ನಿನ್ನೆ ರಿಕ್ಷಾ ಚಾಲಕ ನೋರ್ವನಿಗೆ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ರಿಕ್ಷಾ ಚಾಲಕನೋರ್ವ ಇಂದು ಎರಡು ರಿಕ್ಷಾ ಗಳಲ್ಲಿ ಐದು ಜನರ ಗ್ಯಾಂಗ್ ಕಟ್ಟಿಕೊಂಡು ಬಂದು ಕೊಲ್ಲೂರು ಸಮೀಪದ ಹಲ್ಕಲ್ ಜಂಕ್ಷನ್ ಬಳಿ ಪ್ರಯಾಣಿಕರು ತುಂಬಿದ್ದ ಬಸ್ಸ ನ್ನು  ರಿಕ್ಷಾಗಳನ್ನು ಅಡ್ಡ ಇಟ್ಟು ತಡೆದು ರಿಕ್ಷಾ ಗಳಿಂದ ಇಳಿದ ಐದು ಜನ ರೌಡಿಗಳು ಬಸ್ ಚಾಲಕ ಮಂದಾರ ಎಂಬವರನ್ನು  ಬಸ್ ನಿಂದ ಹೊರಗೆಳೆದು ರಿಕ್ಷಾ ಕ್ಕೆ ನಿನ್ನೆ ಸೈಡ್ ಕೊಡದೆ ಇರುವ ಬಗ್ಗೆ ಐವರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಗಂಭೀರ ಹಲ್ಲೆ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು ಹಲ್ಲೆ ನಡೆಸುತ್ತಿದ್ದ ರೌಡಿಗಳಿಗೆ ಹಲ್ಲೆ ಮಾಡಬೇಡಿ ಎಂದು ಕೈಮುಗಿದು ಅಂಗಲಾಚಿದ ನಂತರ ರೌಡಿ ರಿಕ್ಷಾ ಚಾಲಕರ ತಂಡವು ಬಸ್ ಚಾಲಕನ ಚಿನ್ನದ ಸರ ಎಳೆದು ಕೊಂಡು ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.

ದಕ್ಷಿಣದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರಿಗೆ ದಿನನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಿದ್ದು,ಇಂತಹ ಸಾರ್ವಜನಿಕ ರಸ್ತೆಯಲ್ಲಿ ಕಾನೂನನ್ನು ಕೈ ಗೆತ್ತಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಭಕ್ತಾದಿಗಳು ತುಂಬಿದ್ದ ಬಸ್ ತಡೆದು ರಿಕ್ಷಾ ಚಾಲಕರು ಗೂಂಡಾಗಿರಿ ನಡೆಸಿರುವುದು ಸ್ಥಳೀಯ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ ಯಾಗಿದೆ.

ಇಂತಹ ಪುಡಿ ರೌಡಿಗಳನ್ನು ಪೊಲೀಸ್ ಇಲಾಖೆ ಹೆಡೆಮುರಿ ಕಟ್ಟದಿದ್ದಲ್ಲಿ ಮುಂದೆ ಈ ರಸ್ತೆಯಲ್ಲಿ ಸಂಚರಿಸುವ ಕೊಲ್ಲೂರು ದೇವಿಯ ಭಕ್ತಾದಿಗಳ ವಾಹನಗಳಿಗೂ ಪ್ರಯಾಣಿಕರಿಗೂ ಈ ಪುಡಿ ರೌಡಿಗಳಿಂದ ಆತಂಕ ತಪ್ಪಿದ್ದಲ್ಲ.

ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಾನೂನನ್ನು ಕೈಗೆತ್ತಿಕೊಂಡು ರೌಡಿಸಂ ನಡೆಸಿ ಸಾರ್ವಜನಿಕರಲ್ಲಿ ಭೀತಿಯನ್ನು ಸ್ರಷ್ಟಿಸಿರುವ  ಐದು ಜನ ಪುಡಿ ರೌಡಿಗಳ ತಂಡವನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: No Copying!