ಕಲಬುರಗಿ: ದಿನಾಂಕ:10-05-2026(ಹಾಯ್ ಉಡುಪಿ ನ್ಯೂಸ್) ರೈತರು, ಬಡವರಿಗಾಗಿ ಅವರ ಜಮೀನು, ಮನೆಯ ಹಕ್ಕುಪತ್ರ, ವೃದ್ಧರಿಗೆ ಪಿಂಚಣಿ ವಿತರಿಸುವ ಮೂಲಕ ನಮ್ಮ ಸರ್ಕಾರ 6ನೇ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತಂದಂತಾಗಿದೆ. ಆ ಮೂಲಕ ಎಷ್ಟೋ ಭೂವ್ಯಾಜ್ಯಗಳು ತಪ್ಪಿದಂತಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಂದಾಯ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಇ-ಪೌತಿ, ದರಖಾಸ್ತು ಪೋಡಿ, ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸವಾಗಿರುವವರಿಗೆ ನಿವೇಶನ ಹಕ್ಕುಪತ್ರ, ವೃದ್ಧಾಪ್ಯ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
‘ಜನರು ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಅಲೆದಾಡಬಾರದು ಎಂಬ ಉದ್ದೇಶದಿಂದ ಆದ್ಯತೆಯ ಮೇರೆಗೆ ಇ-ಪೌತಿ, ಪೋಡಿ ದರಖಾಸ್ತು ಅರ್ಜಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಅವರು ಹಗಲು ರಾತ್ರಿ ಶ್ರಮ ವಹಿಸಿ 1,14,337 ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾರೆ.
ಹಾಗೆ ನೋಡಿದರೆ ಈ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ಬೃಹತ್ ಮೈದಾನದಲ್ಲಿ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ. ಈಗ ಶೇ 40ರಷ್ಟು ಕೆಲಸ ಮುಗಿದಿದ್ದು, ಉಳಿದ ಕೆಲಸಗಳು ಪೂರ್ಣಗೊಂಡ ಬಳಿಕ ರಾಷ್ಟ್ರೀಯ, ರಾಜ್ಯ ನಾಯಕರನ್ನು ಕರೆಸಿ ದೊಡ್ಡ ಕಾರ್ಯಕ್ರಮ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ₹22 ಕೋಟಿ ಬೆಳೆ ವಿಮೆ ಬಂದಿತ್ತು. ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದ ಮೂರು ವರ್ಷಗಳ ಅವಧಿಯಲ್ಲಿ ₹2,590 ಕೋಟಿ ಬೆಳೆ ವಿಮೆ ಬಂದಿದೆ. ಅಧಿಕಾರಿಗಳು ಬೆಳೆ ವಿಮೆ ಮಂಜೂರಾತಿಗೆ ಅಗತ್ಯವಾದ ದಾಖಲಾತಿಗಳನ್ನು ಸಲ್ಲಿಸಿದ್ದರಿಂದಲೇ ಇದು ಸಾಧ್ಯವಾಯಿತು. ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಅದನ್ನು ಮುಂದುವರಿಸುತ್ತೇವೆ’ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಉಳುವವನಿಗೇ ಭೂಮಿಯನ್ನು ನೀಡಿದ ಮಹೋನ್ನತ ಪರಂಪರೆ ಇರುವ ಪಕ್ಷ ಕಾಂಗ್ರೆಸ್ ಪಕ್ಷ. ನಾವು ಅಧಿಕಾರಕ್ಕೆ ಬಂದಾಗಲೆಲ್ಲ ಬಡವರು, ರೈತರು, ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇವೆ. 8,39,144 ಆಸ್ತಿಗಳ ಪೈಕಿ 5,56,876 ಪಹಣಿಗಳ ಮಾಲೀಕತ್ವವನ್ನು ಕಂದಾಯ ಇಲಾಖೆ ಅಧಿಕಾರಿಗಳು ತೋರಿಸಿದ್ದಾರೆ. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನೇತೃತ್ವದಲ್ಲಿ ಅವರ ತಂಡ ಉತ್ತಮವಾಗಿ ಕೆಲಸ ಮಾಡಿದೆ. ವರ್ಗಾವಣೆಯಾಗಿ ಹೋಗುತ್ತಿರುವ ಅವರು ತಮ್ಮ ಅವಧಿಯಲ್ಲಿ ಆದ ಕೆಲಸಗಳ ರಿಪೋರ್ಟ್ ಕಾರ್ಡ್ ನೀಡಿದ್ದಾರೆ’ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
