ಸಂಸತ್ತಿನಲ್ಲಿ ನಕ್ಸಲ್ ಮುಕ್ತ ಭಾರತ ಘೋಷಣೆಯಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕಮ್ಯುನಿಸಂ ಮುಕ್ತ ಸರ್ಕಾರವೂ ಆಗಿದೆ, ಅಂದರೆ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್ ಸರ್ಕಾರ ಸದ್ಯಕ್ಕೆ ಆಡಳಿತದಲ್ಲಿಲ್ಲ. ಕೇರಳದಲ್ಲಿ ಎಲ್. ಡಿ. ಎಫ್. ಸರ್ಕಾರದ ಪತನದೊಂದಿಗೆ ಈ ರೀತಿಯಲ್ಲಿ ಆಗಿದೆ. ಹಾಗಾದರೆ ಕಮ್ಯುನಿಸ್ಟ್ ಆಡಳಿತ ಭಾರತದಲ್ಲಿ ಮರೆಯಾಗುತ್ತಿದೆಯೇ……
ಕಾರ್ಪೊರೇಟಿಸಂ, ರಿಲಿಜನಿಸಂ, ನ್ಯಾಷನಲಿಸಂ, ಮಾರ್ಕೆಟಿಸಂ, ಕಂಜ್ಯೂಮರಿಸಂ, ಮೀಡಿಯಾಯಿಸಂಗಳ ಅಬ್ಬರದಲ್ಲಿ ಸಮಾಜವಾದ, ಸಮತಾವಾದ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ.
ಕಮ್ಯುನಿಸಂ ಎಂಬುದು ಒಂದು ಸೈದ್ಧಾಂತಿಕ ಹೋರಾಟ. ಎಲ್ಲಾ ರೀತಿಯ ಶೋಷಣೆಯ ವಿರುದ್ಧದ ಬಂಡಾಯದ ಧ್ವನಿ. ಅದರ ಮೂಲ ತಿರುಳೇ ಅನ್ಯಾಯದ ವಿರುದ್ಧದ ಹೋರಾಟ. ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟನೆ ಮತ್ತು ನ್ಯಾಯಯುತ ಹಕ್ಕು ಕೇಳುವುದು.
ಹಾಗಾದರೆ ಇತ್ತೀಚಿನ ದಿನಗಳಲ್ಲಿ ಕಮ್ಯುನಿಸಮ್ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದು ಏಕೆ. ಜನರ ಶೋಷಣೆ ಕಡಿಮೆಯಾಗುತ್ತಿದೆಯೇ, ಅಮಾಯಕ, ಅಸಹಾಯಕ ಜನರ ಮೇಲಿನ ದೌರ್ಜನ್ಯ ಇಲ್ಲವಾಗುತ್ತಿದೆಯೇ……
ಜನಸಾಮಾನ್ಯರ ಅರಿವಿಗೆ ಬರುವಂತೆ ಶೋಷಣೆ ಏನು ಕಡಿಮೆಯಾಗುತ್ತಿಲ್ಲ. ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಅವು ಬೇರೆ ಬೇರೆ ರೂಪದಲ್ಲಿ ಜನರನ್ನು ಬಲಿಪಶು ಮಾಡುತ್ತಲೇ ಇದೆ. ಆದರೆ ಅದನ್ನು ಗ್ರಹಿಸಲು ಸಾಧ್ಯವಾಗದಂತಹ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಸಾಮಾನ್ಯ ಜನರನ್ನು ಭಾವನಾತ್ಮಕವಾಗಿ ನಿರ್ವೀರ್ಯಗೊಳಿಸುತ್ತಿದೆ. ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಗುಲಾಮರನ್ನಾಗಿಸಿದೆ. ಸ್ವತಂತ್ರ ಚಿಂತನೆಗೆ ಅವಕಾಶವೇ ಸಿಗುತ್ತಿಲ್ಲ. ವೇಗ, ಸ್ಪರ್ಧೆ, ಅನಿವಾರ್ಯತೆ, ಕೊಳ್ಳುಬಾಕ ಸಂಸ್ಕೃತಿ ಜನರನ್ನು ಮರುಳು ಮಾಡಿದೆ…..
ನಕ್ಸಲ್ ಮುಕ್ತ ಭಾರತ ಎಂಬುದೇನೋ ಉತ್ತಮ ಬೆಳವಣಿಗೆ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಹೇಳಬಹುದು. ಏಕೆಂದರೆ ಭಾರತದಂತ ಪ್ರಜಾಪ್ರಭುತ್ವ ದೇಶದಲ್ಲಿ ಹಿಂಸೆಯ ಮುಖಾಂತರ, ಬಂದೂಕಿನ ಮುಖಾಂತರ ಪರಿಹಾರ ಹುಡುಕುವುದು ಅತ್ಯಂತ ಅಮಾನವೀಯ, ಅನಾಗರಿಕ, ಆತಂಕಕಾರಿ ವಿಷಯ. ಅದು ನಿರ್ಮೂಲನೆಯಾಗಿದ್ದು ಒಳ್ಳೆಯದೇ. ಆದರೆ ಅದರೊಂದಿಗೆ ಶೋಷಿತರ ಬಂಡಾಯದ ಧ್ವನಿ ಇಲ್ಲವಾದರೆ ಅದು ಸಾಮಾನ್ಯರ ಪಾಲಿಗೆ ಅತ್ಯಂತ ಅಪಾಯಕಾರಿ ಬೆಳವಣಿಗೆ ಆಗಬಹುದು. ಮತ್ತೆ ಹೊಸ ರೂಪದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಿಂಸಾತ್ಮಕವಾದ ಅರ್ಬನ್ ನಕ್ಸಲಿಸಂ ಚಿಗುರೊಡೆಯದಿದ್ದರೆ ಅಸಹಾಯಕ ಅಮಾಯಕರ ಬದುಕು ಕಷ್ಟವಾಗಬಹುದು.
ಕಮ್ಯುನಿಸ್ಟರ ಕೆಲವು ಬದಲಾಗದ ಹಠಮಾರಿ ಧೋರಣೆಗಳು, ಸೈದ್ಧಾಂತಿಕ ಗುಲಾಮಿತನ, ಆಧುನಿಕತೆಯ ಬೆಳಕಿಗೆ ತೆರೆದುಕೊಳ್ಳದಿರುವುದು, ಎಂದಿನಂತೆ ಎಲ್ಲಾ ಸೈದ್ಧಾಂತಿಕ ವಿಚಾರಗಳ ಜನರಲ್ಲಿನ ಒಂದಷ್ಟುಮಟ್ಟಿಗಿನ ಸ್ವಾರ್ಥ, ಭ್ರಷ್ಟಾಚಾರ, ದುರಹಂಕಾರಗಳು, ವಿರೋಧಿಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸದಿರುವುದು, ಬದಲಾಗುತ್ತಿರುವ ಜನರ ಮಾನಸಿಕತೆಯನ್ನು ಅರಿಯುವಲ್ಲಿ ವಿಫಲವಾಗಿರುವುದು ಮುಂತಾದ ಅನೇಕ ಕಾರಣಗಳಿಂದ ಹಿನ್ನಡೆಯಾಗಿರುವುದು ನಿಜ.
ಅದು ಹಾಗಾಗದಂತೆ ಕಮ್ಯುನಿಸಂ ಅನ್ನು ಮತ್ತೊಮ್ಮೆ ಪುನರ್ ರಚಿಸ ಬೇಕಾಗಿರುವುದು, ಪುನರುಜ್ಜೀವನಗೊಳಿಸಬೇಕಾಗಿರುವುದು ಭಾರತದ ಜನಸಾಮಾನ್ಯರ ಹಿತದೃಷ್ಟಿಯಿಂದ ಅತ್ಯಾವಶ್ಯಕವೂ ಹೌದು. ಇಲ್ಲದಿದ್ದರೆ ಪ್ರಶ್ನಿಸುವ, ಪ್ರತಿಭಟಿಸುವ ವ್ಯವಸ್ಥೆಯೇ ಇಲ್ಲವಾಗಿ ಶೋಷಣೆ ಮತ್ತಷ್ಟು ಹೆಚ್ಚಾಗಬಹುದು.
ಕಮ್ಯುನಿಸಮ್ ಸಿದ್ದಾಂತದ ಬಗ್ಗೆ ಅರಿವಿಲ್ಲದ, ತಪ್ಪಾಗಿ ಅರ್ಥೈಸಿಕೊಂಡಿರುವ, ವಿರೋಧಿಗಳ ಟೀಕೆಗಳಿಂದ ಬೇಸರಗೊಂಡಿರುವವರಿಗಾಗಿ ಕಮ್ಯುನಿಸಂ ಸಿದ್ದಾಂತದ ಸಾಮಾನ್ಯ ಸರಳ. ಸಂಕ್ಷಿಪ್ತ, ಹೋಲಿಕೆಗಳ ವಿವರಣೆ….
ಎಡ ಮತ್ತು ಬಲ ಪಂಥಗಳ ಬಗ್ಗೆ…..
ದೇಶ ಮುಖ್ಯ – ಬಲಪಂಥೀಯರು,
ವ್ಯಕ್ತಿ ಮುಖ್ಯ – ಎಡಪಂಥೀಯರು.
ಸಾಮರ್ಥ್ಯ ಉಳ್ಳವರು ಶ್ರೇಷ್ಠರು – ಬಲಪಂಥೀಯರು,
ಎಲ್ಲರೂ ಸಮಾನರು – ಎಡಪಂಥೀಯರು.
ಸಮಾಜಕ್ಕೆ ಧರ್ಮವೇ ಸಂಜೀವಿನಿ – ಬಲಪಂಥೀಯರು,
ಸಮಾಜಕ್ಕೆ ಧರ್ಮವೇ ಅಫೀಮು – ಎಡಪಂಥೀಯರು.
ಸಂಪತ್ತಿನ ವೃಧ್ಧಿಗೆ ಶ್ರೀಮಂತರ ಚಾಣಕ್ಷತೆಯೇ ಕಾರಣ – ಬಲಪಂಥೀಯರು,
ಸಂಪತ್ತಿನ ವೃಧ್ಧಿಗೆ ಕಾರ್ಮಿಕರ ಶ್ರಮವೇ ಕಾರಣ – ಎಡಪಂಥೀಯರು.
ಮಹಲು ಕಟ್ಟಿರುವುದು ನಮ್ಮ ಸ್ವಂತ ದುಡಿಮೆಯಿಂದ – ಬಲಪಂಥೀಯರು,
ಮಹಲು ಕಟ್ಟಿರುವುದು ನಮ್ಮ ಬೆವರ ಹಣದಿಂದ – ಎಡಪಂಥೀಯರು.
ಶಿಸ್ತು ಮತ್ತು ತಂತ್ರಜ್ಞಾನ ನಮ್ಮ ಬಂಡವಾಳ – ಬಲಪಂಥೀಯರು,
ಸಂಘಟನೆ ಮತ್ತು ಹೋರಾಟ ನಮ್ಮ ಬಂಡವಾಳ – ಎಡಪಂಥೀಯರು.
ಸ್ಪರ್ಧೆ, ಸಾಮರ್ಥ್ಯ, ಪ್ರತಿಭೆಯೇ ನಮ್ಮ ಆದ್ಯತೆ – ಬಲಪಂಥೀಯರು,
ಶೋಷಣೆ, ದೌರ್ಜನ್ಯದ ವಿರುದ್ಧ ಹೋರಾಟ ನಮ್ಮ ಆದ್ಯತೆ -ಎಡಪಂಥೀಯರು.
ಬುದ್ದಿಯೇ ನಮ್ಮ ಶಕ್ತಿ – ಬಲಪಂಥೀಯರು
ಶ್ರಮವೇ ನಮ್ಮ ಶಕ್ತಿ – ಎಡಪಂಥೀಯರು.
ಬಲಿಷ್ಠರ ಉಳಿವು ದುರ್ಬಲರ ಅಳಿವೇ ಇತಿಹಾಸ – ಬಲಪಂಥೀಯರು,
ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ – ಎಡಪಂಥೀಯರು.
ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಬೀಡು ನಮ್ಮ ದೇಶ – ಬಲಪಂಥೀಯರು,
ಬಡವರ, ರೋಗರುಜಿನಗಳ, ಜಾತಿ ಅಸ್ಪೃಷ್ಯತೆಯ ನೆಲ ನಮ್ಮ ದೇಶ – ಎಡಪಂಥೀಯರು.
ವಾಸ್ತಶಿಲ್ಪದ ಭವ್ಯತೆಯ ಸುಂದರ ಕಟ್ಟಡ ವಿಧಾನಸೌದ – ಬಲಪಂಥೀಯರು,
ಕೂಲಿಕಾರ್ಮಿಕರ ನೋವಿನ ನರಳಾಟದ ಸ್ಮಶಾನ ವಿಧಾನಸೌಧ – ಎಡಪಂಥೀಯರು.
ಕಣ್ಣ ಹನಿ ಮುತ್ತಾಗಿ ಕಂಡರೆ – ಬಲಪಂಥೀಯರು,
ಕಣ್ಣ ಹನಿ ರಕ್ತವಾಗಿ ಕಂಡರೆ – ಎಡಪಂಥೀಯರು.
ಬಡವರನ್ನು ಶೋಷಿಸಿಯಾದರೂ ಸಂಪತ್ತನ್ನು ಗಳಿಸೋಣ – ಬಲಪಂಥೀಯರು,
ಶ್ರೀಮಂತರನ್ನು ಕೊಂದಾದರೂ ಸಂಪತ್ತನ್ನು ಹಂಚೋಣ – ಎಡಪಂಥೀಯರು.
ನನ್ನದೆಲ್ಲವೂ ನನ್ನದೇ – ಬಲಪಂಥೀಯರು,
ನನ್ನದೆಲ್ಲವೂ ಇತರರದೇ – ಎಡಪಂಥೀಯರು.
ಸೂಟುಬೂಟಿನಲ್ಲಿ ಪ್ರತಿಭೆ ಮತ್ತು ಸೌಂದರ್ಯ ಕಂಡರೆ – ಬಲಪಂಥೀಯರು,
ಹರಿದ ಬಟ್ಟೆಯಲ್ಲಿ ನೋವು ಮತ್ತು ಸೌಂದರ್ಯ ಕಂಡರೆ – ಎಡಪಂಥೀಯರು.
ಆಧ್ಯಾತ್ಮಿಕ ಭಕ್ತಿಯ ತವರೂರು ಭಾರತ – ಬಲಪಂಥೀಯರು,
ಸಂಘರ್ಷ, ಅಸಮಾನತೆ, ಅಸಹಿಷ್ಣತೆಯ ತವರೂರು ಭಾರತ – ಎಡಪಂಥೀಯರು.
ಹೌದು,
ಎರಡೂ ಪಂಥದವರು ಇದನ್ನು ಒಪ್ಪುವುದಿಲ್ಲ. ನಮ್ಮದು ಇದಕ್ಕಿಂತ ಉತ್ತಮ ಆದರ್ಶ ಹೊಂದಿದ ಸಿದ್ಧಾಂತ ಎಂದೇ ವಾದಿಸುತ್ತಾರೆ.
ಮೂಲ ಸಿದ್ಧಾಂತ ಏನಾದರೂ ಇರಲಿ. ವಾಸ್ತವದ ಆಚರಣೆಯಲ್ಲಿರುವುದು ಬಹುತೇಕ ಇದೇ.
ಹಾಗಾದರೆ ಇದರಲ್ಲಿ
ನಿಜವಾದ ದೇಶದ್ರೋಹಿಗಳಾರು ?
ನಿಜವಾದ ದೇಶಭಕ್ತರಾರು ?
ನಮ್ಮ ಭಾರತಾಂಬೆಯ ಬುಡಕ್ಕೆ ಕೊಡಲಿ ಹಾಕುತ್ತಿರುವವರು ಯಾರು ?
ಮಾನವೀಯತೆಯ ಕಗ್ಗೋಲೆ ಮಾಡುತ್ತಿರುವವರು ಯಾರು ?
ಬಹಳ ಜನರಿಗೆ ಕಹಿಯಾದ – ಒಂದಷ್ಟು ಸ್ನೇಹವಲಯದ ಅಸಮಾಧಾನಕ್ಕೂ ಒಳಗಾಗಬಹುದಾದ ಸತ್ಯ ಮತ್ತು ವಾಸ್ತವದ ಹುಡುಕಾಟದ ಒಂದು ಪ್ರಯತ್ನ.
ಕಮ್ಯುನಿಸಂ ಎಂಬುದು ಮಾನವ ಜೀವಿಯ ಸಮಾನತೆಯನ್ನು ಬಯಸುವ ಒಂದು ಅತ್ಯುತ್ತಮ ವ್ಯವಸ್ಥೆ. ಆದರೆ ಅದೇ ಜೀವ ವಿರೋಧಿಯಾಗಬಾರದು. ತನ್ನ ವಾದದಿಂದಲೇ ಬದಲಾವಣೆ ಬಯಸದೆ ಕೊಳೆತು ನಾರಬಾರದು.
ಹಾಗೆಯೇ,
ಅಂದಿನ ಸಾಮಾಜಿಕ ವ್ಯವಸ್ಥೆಗೆ ಒಂದಷ್ಟು ಕ್ರಮ ಬದ್ದತೆ ತಂದು ಕೊಟ್ಟಿದ್ದ ಮನುವಾದ ಕಾಲಾಂತರದಲ್ಲಿ RSS ಎಂಬ ಸಂಘಟನೆಯ ರೂಪ ಪಡೆದು ಶಿಸ್ತು ಬದ್ದ ಸಂಘಟನೆಯಾಗಿ ರೂಪಗೊಂಡಿರುವ ಸಂಸ್ಥೆ ಬದಲಾದ ಸಾಮಾಜಿಕ ಮನಸ್ಥಿತಿ, ಜಾಗೃತ ವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥಮಾಡಿಕೊಳ್ಳದೆ ಹಳೆಯ ಸಿದ್ದಾಂತಕ್ಕೆ ಗಂಟು ಬಿದ್ದು ಧರ್ಮಕ್ಕಾಗಿ ಹಿಂಸೆಯನ್ನೇ ಪ್ರಚೋದಿಸುವುದು ಒಳ್ಳೆಯ ಬೆಳವಣಿಗೆಯಲ್ಲ.
ಈ ಎರಡೂ ಸಿದ್ದಾಂತ ವಾದಿಗಳು ತಮ್ಮ ಭಾಷಣಗಳಲ್ಲಿ – ಅಂಕಣ ಬರಹಗಳಲ್ಲಿ – ಬ್ರಿಗೇಡ್ ಮುಂತಾದ ಸಂಘಟನೆಗಳ ಮೂಲಕ ಪ್ರಚೋದನಾಕಾರಿಯಾಗಿ ವರ್ತಿಸಿ ಯುವ ಪೀಳಿಗೆಯನ್ನು ಅಸಹನೆಯ ಕೂಪಕ್ಕೆ ತಳ್ಳಿ ದೇಶದ ಅಭಿವೃದ್ಧಿಗೆ ಮಾರಕವಾಗಿರುವುದು ಸತ್ಯವಲ್ಲವೇ ?
ಈ ಅಸಹಿಷ್ಣುತೆಯ ಕಾರಣದಿಂದಾಗಿಯೇ ಯುವಜನತೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಗುಲಾಮಿ ಮನೋಭಾವ ಬೆಳೆಸಿಕೊಂಡು ಹಣದ ಹಿಂದೆ ಬಿದ್ದಿಲ್ಲವೇ ? .
ದೇಶಕ್ಕಿಂತ ಧರ್ಮವೇ ಮುಖ್ಯ ಎನ್ನುವ ಎಲ್ಲಾ ಹಿಂದೂಗಳು ಮುಸ್ಲಿಮರು ಕ್ರಿಶ್ಚಿಯನ್ನರು ಸಿಖ್ಖರು ಇತ್ಯಾದಿಗಳನ್ನು ದೇಶದ್ರೋಹಿಗಳೆಂದೇ ಪರಿಗಣಿಸಬಹುದು. ಏಕೆಂದರೆ ಧರ್ಮವೆನ್ನುವುದು ಜೀವನ ಶೈಲಿ. ಆದರೆ ದೇಶ ನಾವು ಜೀವಿಸುವ ಒಂದು ಪ್ರದೇಶ. ನಮ್ಮ ದೇಹದ ಅಸ್ತಿತ್ವವಿರುವುದೇ ಆ ಪ್ರದೇಶದ ಗಾಳಿ ನೀರು ಬೆಳಕು ಆಹಾರಗಳಿಂದ. ಆದ್ದರಿಂದ ದೇಶವೇ ಮುಖ್ಯ ಮನುಷ್ಯ ಅದಕ್ಕಿಂತ ಮುಖ್ಯ. ದೇವರು ಧರ್ಮ ಜಾತಿ ಎಂದೆಲ್ಲಾ ಇಲ್ಲದ ಭ್ರಮೆ ಸೃಷ್ಟಿಸುವುದು – ಕಾರ್ಮಿಕರಿಲ್ಲದೆ ಪ್ರಪಂಚವೇ ಇಲ್ಲ ಎನ್ನುವಷ್ಟು ಅವಾಸ್ತವಿಕ ವಾದ ಮೂಡಿಸುವುದು ಎರಡೂ ಒಳ್ಳೆಯದಲ್ಲ.
ಇದಕ್ಕೆ ಬಹುಶಃ ಭಾರತೀಯತೆ ಪರಿಹಾರವಾಗಬಲ್ಲದು. ಭಾರತೀಯತೆ ಎಂದರೆ 2026 ರ ಈ ಕ್ಷಣದಲ್ಲಿ ನಮ್ಮ ಅನುಭವ, ಅನುಭಾವ, ಅರಿವಿನಿಂದ ಅಳವಡಿಸಿಕೊಳ್ಳಬಹುದಾದ ನಾಗರಿಕ ಪ್ರಜ್ಞೆಯೇ ಭಾರತೀಯತೆ. ಸಭ್ಯತೆ – ಸಹಿಷ್ಣುತೆ – ವಿಶಾಲ ಮನೋಭಾವ – ನಾಯಕತ್ವ – ಕಠಿಣ ಶ್ರಮ – ಅಸ್ತಿತ್ವಕ್ಕೆ ಧಕ್ಕೆಯಾದಾಗ ಸಹಜ ಆಕ್ರಮಣ ಮುಂತಾದವುಗಳ ಒಟ್ಟು ನಡವಳಿಕೆಯ ಪ್ರಬುಧ್ದತೆಯೇ ಭಾರತೀಯತೆ.
ನಾವು ನೀವು ಎಲ್ಲರೂ ಒಂದೇ ದೋಣಿಯ ಪಯಣಿಗರು. ಸಿದ್ದಾಂತಕ್ಕಾಗಿ ಮನುಷ್ಯರನ್ನು ಕೊಲ್ಲುವ ಎಲ್ಲಾ ಸಂಘಟನೆಗಳೂ ದೇಶದ್ರೋಹಿಗಳೇ. ಇವುಗಳ ಮದ್ಯೆ ಸೋದರತ್ವದ ಸಂಪರ್ಕ ಸಾಧಿಸಿ ಮತ್ತೊಮ್ಮೆ ನೆಮ್ಮದಿಯ ಬದುಕಿಗೆ ಮರಳೋಣ, ಚರ್ಚೆಗಳು ಬದುಕಲ್ಲ ನಡವಳಿಕೆಗಳೇ ಬದುಕು…
ಇಲ್ಲಿ ನಿಜವಾದ ದೇಶಭಕ್ತರು ಇವರೇ ?
ಸತ್ಯ ಅಹಿಂಸೆ ತ್ಯಾಗದ ಮುಖಾಂತರ ಸ್ವಾತಂತ್ರ್ಯ ಗಳಿಸಿಕೊಟ್ಟು ಸ್ವರಾಜ್ಯದ ಕನಸು ನನಸಾಗಲು ಪ್ರಜೆಗಳ ಕಲ್ಯಾಣ ರಾಜ್ಯವಾಗಲು ವಾಲ್ಮೀಕಿಯವರ ಕಲ್ಪನೆಯ ರಾಮರಾಜ್ಯದ ಆದರ್ಶ ಕನಸನ್ನು ನಮ್ಮಲ್ಲಿ ಮೂಡಿಸಿದ ಮಹಾತ್ಮ ಗಾಂಧಿಯವರ ವಿಚಾರಗಳಿಂದ ಪ್ರೇರಿತವಾದ ಒಂದು ವರ್ಗ.
ಸಮಾನತೆ – ಸ್ವಾತಂತ್ರ್ಯ- ಸಾರ್ವಭೌಮತೆ – ಭ್ರಾತೃತ್ವದ ಸಂವಿಧಾನ ನೀಡಿ ನಮ್ಮೆಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ಸಂವಿಧಾನ ರಚಿಸಿ ನಮ್ಮ ಮುಂದೆ ಇಟ್ಟಿರುವ ಅಂಬೇಡ್ಕರ್ ಕನಸಿನ ಭೀಮರಾಜ್ಯ ಪ್ರತಿಪಾದಿಸುವ ವರ್ಗ.
ಮತ್ತೊಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವೈಚಾರಿಕ ಆಧ್ಯಾತ್ಮದ ವಿಶ್ವ ನಾಯಕತ್ವ ಪ್ರತಿಪಾದಿಸುವ ವರ್ಗ.
ಬಸವಣ್ಣನವರ ಸಮ ಸಮಾಜದ ಕಾಯಕವೇ ಕೈಲಾಸ ಎಂದು ಪ್ರತಿಪಾದಿಸುವ ಸರ್ವ ಜನಾಂಗದ ಶಾಂತಿಯ ತೋಟ.
ಇನ್ನೊಂದು ಯಾವುದೇ ರಿಸ್ಕ್ ಇಷ್ಟಪಡದೆ, ಯಾವ ಸಿದ್ಧಾಂತಕ್ಕೂ ತಲೆಕೆಡಿಸಿಕೊಳ್ಳದ, ಸಹಜ ಸಾಮಾನ್ಯರಂತೆ ದೇಶಪ್ರೇಮವನ್ನು ತಮ್ಮ ರಕ್ತದಲ್ಲೇ ಹೊಂದಿರುವ ವರ್ಗ.
ಇವರಲ್ಲೂ ಒಣ ಪ್ರತಿಷ್ಠೆ – ಶೋಕಿತನ – ಎಲ್ಲಾ ತಿಳಿದವರೆಂಬ ಅಹಂ – ಹೆಚ್ವು ಸ್ವಾರ್ಥಗಳಿದ್ದರೂ ಮೂಲಭೂತವಾಗಿ ಹಿಂಸಾವಾದಿಗಳಲ್ಲ.
ಆದ್ದರಿಂದ ಈಗ ಆಯ್ಕೆ ನಮ್ಮದು. ಇಲ್ಲೂ ಅನವಶ್ಯಕವಾಗಿ ಬುದ್ದ – ಬಸವ – ಗಾಂಧಿ – ಅಂಬೇಡ್ಕರ್- ವಿವೇಕಾನಂದರ ವಾದಗಳಿಗೆ ದಾಸರಾಗದೆ ಸಹಜ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ನಾಗರಿಕವಾಗಿ ಬದುಕುವುದೇ ನಿಜವಾದ ದೇಶಭಕ್ತಿಯೇ ಹೊರತು ಧರ್ಮದ ಬಗ್ಗೆ ಬರೆದರೆ RSS Agent ಅನ್ನುವುದು – ವ್ಯವಸ್ಥೆಯ ಶೋಷಣೆಯ ಬಗ್ಗೆ ಬರೆದರೆ Communist Agent ಎಂದು Demoralise ಮಾಡುವುದು ನಿಜವಾದ ದೇಶಭಕ್ತಿಯಲ್ಲ…
ಇಸಂಗಳನ್ನು ಮೀರಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದ ಸನ್ನಿವೇಶದಲ್ಲಿ…..
ಬಂಡವಾಳಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮುಕ್ತ ಮಾರುಕಟ್ಟೆಯ ಹೊಸ ಪೀಳಿಗೆ ಮುಖ್ಯವಾಹಿನಿಯಲ್ಲಿ ಮಹತ್ವ ಪಡೆದಿರುವಾಗ ಕಾರ್ಲ್ ಮಾರ್ಕ್ಸ್, ಮಾವೋ, ಸ್ಟಾಲಿನ್, ಕ್ಯಾಸ್ಟ್ರೋ ಮುಂತಾದವರು ಈ ಕೊಳ್ಳುಬಾಕ ಸಂಸ್ಕೃತಿಯ ಜನರ ನಡುವೆ ವಿಲನ್ ರೀತಿಯಲ್ಲಿ ಬಿಂಬಿತವಾಗುತ್ತಿರುವಾಗ, ಬಹುತೇಕ ಯುವ ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮವಾಗಿ ಸೂಕ್ಷ್ಮತೆ ಕಳೆದುಕೊಂಡಿರುವಾಗ, ಈಗಲೂ ಈ ವ್ಯವಸ್ಥೆಯ ಬಂಡಾಯಗಾರರಿಗೆ
ಕಮ್ಯುನಿಸಂ ಅತ್ಯಂತ ಆಕರ್ಷಕ ಮತ್ತು ಸ್ಪೂರ್ತಿದಾಯಕವಾಗಿದೆ.
ಆಧುನಿಕ ಸಂಕೀರ್ಣ ಜೀವನಶೈಲಿಯ ಮೋಹಕ್ಕೆ ಒಳಗಾಗಿ ವಸ್ತು ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವ್ಯಾಪಾರವಾಗಿಸಿರುವಾಗ ಪ್ರತಿಯೊಬ್ಬರು ಕಮ್ಯುನಿಸ್ಟರೇ. ಆದರೆ ಕಾರಣ ಮತ್ತು ರೂಪಗಳು – ಸ್ವರೂಪಗಳು ಮಾತ್ರ ಭಿನ್ನ.
ಇಡೀ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕೌಟುಂಬಿಕ, ಧಾರ್ಮಿಕ ಮುಂತಾದ ಎಲ್ಲಾ ಕ್ಷೇತ್ರಗಳು ಹಣ ಕೇಂದ್ರಿತವಾಗಿರುವಾಗ ಶೋಷಣೆಯೇ ಅದರ ಮೂಲ ಧರ್ಮವಾಗಿರುವಾಗ ಶೋಷಿತರೆದೆಯಲ್ಲಿ ಬಂಡಾಯದ ಕಿಚ್ಚು ಸಹಜವಾಗಿ ಕಿಡಿ ಹೊತ್ತುತ್ತದೆ.
ಇಷ್ಟು ವಿಶಾಲ ಮತ್ತು ವ್ಯಾಪಕತೆ ಪಡೆದ ಕಮ್ಯುನಿಸಂ ಇಂದು ಏಕೆ ತನ್ನ ಅಸ್ತಿತ್ವಕ್ಕಾಗಿ ಚಡಪಡಿಸುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಸಾಮಾನ್ಯ ಜನರಲ್ಲಿ ಮೂಡುತ್ತದೆ. ಶೋಷಿತರ ಪರ ಶೋಷಕರ ವಿರುದ್ಧದ ಧ್ವನಿ ಏರುತ್ತಲೇ ಇರಬೇಕಾದ ಸಂದರ್ಭದಲ್ಲಿ ಕ್ಷೀಣವಾಗುತ್ತಿರುವುದು ಎಲ್ಲರನ್ನೂ ಕಾಡುತ್ತಿದೆ.
ಅಪ್ ಕೋರ್ಸ್ ಕಮ್ಯುನಿಸ್ಟ್ ಮೂಲಭೂತವಾದಿಗಳು ಇದನ್ನು ಒಪ್ಪುವುದಿಲ್ಲ. ಇದು ತಾತ್ಕಾಲಿಕ ಹಿನ್ನಡೆ. ಈ ಜಗತ್ತಿನಲ್ಲಿ ಮತ್ತೆ ತನ್ನ ಸಿದ್ದಾಂತ ಜನ ಸಾಮಾನ್ಯರ ಒಡಲಾಳದಿಂದ ಎದ್ದು ಬರುತ್ತದೆ. ಮನುಷ್ಯ ಜೀವಿಯ ನಿಜವಾದ ಪ್ರಗತಿ ಮತ್ತು ಸಮ ಸಮಾಜದ ಕನಸು ಈಡೇರಲು ಕಮ್ಯುನಿಸ್ಟ್ ಸಿದ್ದಾಂತ ಬೇಕೆ ಬೇಕು ಎನ್ನುತ್ತಾರೆ.
ಭವಿಷ್ಯ ಏನೇ ಇರಲಿ ಈ ಕ್ಷಣದಲ್ಲಿ ಕಮ್ಯುನಿಸಂ ಖಂಡಿತ ಜನಪ್ರಿಯತೆ ಕಳೆದುಕೊಂಡು ಕುಸಿಯುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಜಾಗತೀಕರಣದ ನಂತರ ಬದಲಾದ ಕಾರ್ಮಿಕ ಶೋಷಣೆಯ ವಿವಿಧ ರೂಪಗಳು ಪರೋಕ್ಷವಾಗಿ ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಜೀವನದ ಜಂಜಾಟದಲ್ಲಿ ಹಣ ಕೇಂದ್ರ ಬಿಂದುವಾಗಿ ಕುಳಿತುಕೊಂಡಿದೆ. ಸ್ಪರ್ಧೆ ಮನುಷ್ಯನ ಚಿಂತನಾ ಶಕ್ತಿಯನ್ನು ರಾಕ್ಷಸ ಪ್ರವೃತ್ತಿಯೆಡೆಗೆ ಕೊಂಡೊಯ್ದಿದೆ. ಬಹುತೇಕ ಜನರು ಮುಖವಾಡಗಳ ಮರೆಯಲ್ಲಿ ಬದುಕುತ್ತಿದ್ದಾರೆ. ನಡೆ ನುಡಿ ನಡುವೆ ಬೃಹತ್ ಕಂದಕ ಸೃಷ್ಟಿಯಾಗಿದೆ.
ಇಂತಹ ಸನ್ನಿವೇಶದಲ್ಲಿ ಕಮ್ಯುನಿಸಮ್ಗೆ ಹೆಚ್ಚು ಅವಕಾಶ ಇಲ್ಲ ಎಂದು ಭಾವಿಸಲಾಗುತ್ತದೆ. ಹಾಗೆಂದು ಶೋಷಣಾ ಮುಕ್ತ ಸಮ ಸಮಾಜ ಸೃಷ್ಟಿಯಾಗಿಲ್ಲ. ಈಗ ಹಿಂದಿಗಿಂತಲೂ ಹೆಚ್ಚು ಅಸಮಾನತೆ ಮತ್ತು ಅಮಾನವೀಯತೆ ಇದೆ.
ಕಮ್ಯುನಿಸಂ ಎಂಬುದು ಈಗಿನ ಕೆಲವು ಮೂಲಭೂತವಾದಿ ಕಾಮ್ರೇಡ್ ಗಳ ಹಠವಾದಿ, ಪ್ರೀತಿಯಿಲ್ಲದ, ಕಲ್ಲು ಮನಸ್ಸಿನ ವರ್ತನೆಯ ಸಿದ್ದಾಂತವಲ್ಲ. ಅದು ಅತ್ಯಂತ ಜೀವಪರ ನಿಲುವಿನ ವೈಚಾರಿಕ ಪ್ರಜ್ಞೆ. ಇದನ್ನು ದ್ವೇಷಿಸುವ ಬಲಪಂಥೀಯ ಚಿಂತನೆಯವರು ಕೂಡ ಒಮ್ಮೆ ಕಣ್ಣಾಡಿಸಿ ಸರಿ ಎನಿಸಿದರೆ ಕೆಲವು ಅಂಶಗಳನ್ನು ತಮ್ಮ ಅಭಿಪ್ರಾಯಗಳಲ್ಲಿ ಸೇರಿಸಿಕೊಳ್ಳಬಹುದು.
ಆಧುನಿಕ ನಾಗರಿಕ ಸಮಾಜದಲ್ಲಿರುವ ನಾವು, ಅಂಜದೆ – ಅಳುಕದೆ – ಹೇಡಿಗಳಾಗದೆ – ಪೂರ್ವಾಗ್ರಹ ಪೀಡಿತರಾಗದೆ – ಪಕ್ಷಪಾತಿಗಳಾಗದೆ – ಸಿದ್ಧಾಂತದ ಗುಲಾಮರಾಗದೆ -ಭಾವನಾತ್ಮಕರಾಗದೆ – ಕಠೋರಿಗಳಾಗದೆ – ಯಾವ ದಿಕ್ಕಿಗೂ ವಾಲದೆ – ಪ್ರಬುಧ್ಧತೆಯಿಂದ ಸತ್ಯ ಮತ್ತು ವಾಸ್ತವದ ಹುಡುಕಾಟ ನಡೆಸಿ ನವ ನಾಗರಿಕ ಸಮಾಜ ನಿರ್ಮಿಸೋಣ.
ಪಂಥಗಳಾಚೆಯ ಬದುಕನ್ನು ರೂಪಿಸಿಕೊಳ್ಳೋಣ.
ಪ್ರಕೃತಿಗೆ ನಿಷ್ಠರಾದ ಸಹಜ ಸ್ವಾಭಾವಿಕ ಜೀವನಕ್ಕೆ ಆದ್ಯತೆ ನೀಡೋಣ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
