ದಿನಾಂಕ:30-04-2026(ಹಾಯ್ ಉಡುಪಿ ನ್ಯೂಸ್)
ಕಲಬುರ್ಗಿ:ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾಯಕತ್ವ ಬದಲಾವಣೆಯ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದ್ದ ಸಿಎಂ ಬದಲಾವಣೆ ವದಂತಿಗೆ ಹೈಕಮಾಂಡ್ ತೆರೆ ಎಳೆದಂತಾಗಿದೆ.
ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲಗಳಿರುವುದು ನಿಜ, ಅದು ಶೀಘ್ರವೇ ಬಗೆಹರಿಯಲಿದೆ. ನಾನು ಸಿಎಂ ಆಗಬೇಕೆಂದು ಕೆಲವರು ಹೇಳುತ್ತಾರೆ, ನೀವು ಮಾಧ್ಯಮದವರು ಕೂಡ ಆಗಾಗ ಆ ವಿಷಯ ಬಗ್ಗೆ ಮಾತನಾಡುತ್ತಿರುತ್ತೀರಿ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧಾಂತ ಮತ್ತು ದಶಕಗಳ ದುಡಿಮೆ ಮುಖ್ಯ. ನಮ್ಮ ನಿರ್ಧಾರಗಳನ್ನು ಸೋನಿಯಾ ಗಾಂಧಿಯವರೇ ತೆಗೆದುಕೊಳ್ಳುತ್ತಾರೆ ಎಂದರು.
ಪಂಚ ರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ ಉಪ ಚುನಾವಣೆ ಮುಗಿದು ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿ ಕಳೆದೊಂದು ವಾರದಿಂದ ಚಟುವಟಿಕೆ ಗರಿಗೆದರಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಬಣದ ಸಚಿವರು, ಶಾಸಕರು ಹೇಳಿಕೆಗಳನ್ನು ನೀಡುತ್ತಾ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಮೇ 15ರೊಳಗೆ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಹೈಕಮಾಂಡ್ ಗಿಫ್ಟ್ ನೀಡುತ್ತದೆ ಎಂದು ಆಸೆಪಟ್ಟವರಿಗೆ ತಣ್ಣೀರೆರಚಿದಂತಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿಗಳಿದ್ದಾರೆ, ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಚರ್ಚೆ ಇಲ್ಲಿ ಬರುವುದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ ಬದಲಾವಣೆಗೆ ಇನ್ನೂ ಸಮಯವಿದೆ, ಆ ಸಮಯ ಬಂದಾಗ ನೋಡೋಣ ಎಂದಷ್ಟೇ ಹೇಳಿದರು.
