ಶಂಕರನಾರಾಯಣ: ದಿನಾಂಕ:20-04-2026(ಹಾಯ್ ಉಡುಪಿ ನ್ಯೂಸ್) ಗಂಡನು ತನ್ನನ್ನು ಮತ್ತು ಮಕ್ಕಳನ್ನು ಭೌದ್ಧ ಧರ್ಮಕ್ಕೆ ಮತಾಂತರ ವಾಗುವಂತೆ ಒತ್ತಾಯಿಸುತ್ತಿದ್ದು ಅದಕ್ಕೆ ಒಪ್ಪದೇ ಇದ್ದಾಗ ಮಾನಸಿಕ, ದೈಹಿಕ ಹಿಂಸೆ ನೀಡಿ ಇದೀಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಂಪಾರು ಗ್ರಾಮದ ಜಡ್ಡಿನಬೈಲು ನಿವಾಸಿ ನಿಶಿತಾ ಶೆಟ್ಟಿ (26) ಎಂಬವರು ದಿನಾಂಕ 19-02-2021 ರಂದು ಕೆಂಚನೂರು ಗ್ರಾಮದ ಸುಬ್ಬಣ್ಣ ಶೆಟ್ಟಿ ರವರ ಮಗ ಆಪಾದಿತ ಜಯರಾಮ ಶೆಟ್ಟಿ ಎಂಬವರನ್ನು ವಿವಾಹವಾಗಿದ್ದು, ಜಯರಾಮ ಶೆಟ್ಟಿಯು 2022 ರಿಂದ ಪ್ರಸ್ತುತ ಬಂಟ್ವಾಳದ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಸಿಸ್ಟಂಟ್ ಪ್ರೊಪೇಸರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ.
ಮದುವೆಯ ನಂತರ ನಿಶಿತಾ ಶೆಟ್ಟಿ ರವರು ಉಪ್ಪೂರಿನ ಉಗ್ಗೇಲಬೆಟ್ಟುವಿನಲ್ಲಿ ವೈವಾಹಿಕ ಜೀವನ ನಡೆಸಲು ಪ್ರಾರಂಭಿಸಿರುತ್ತಾರೆ. ಅವರಿಗೆ ಝಾನಿಯಾ ಮತ್ತು ನೈರಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿರುತ್ತಾರೆ. ಜಯರಾಮ ಶೆಟ್ಟಿಯು ನಿಶಿತಾ ಶೆಟ್ಟಿ ರವರ ರ ಬಳಿ ನಾನು, ನೀನು ಹಾಗೂ ಮಕ್ಕಳು ಬೌಧ ಧರ್ಮ ಸೇರುವುದು ಅನಿವಾರ್ಯ ಎಂದು ಹೇಳುತ್ತಿದ್ದು ಇದಕ್ಕೆ ನಿಶಿತಾ ಶೆಟ್ಟಿ ರವರು ವಿರೋಧ ವ್ಯಕ್ತಪಡಿಸಿದಾಗ ನಿಶಿತಾ ಶೆಟ್ಟಿ ರವರಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದನು.
ನಿಶಿತಾ ರವರು ಸುಮಾರು 6 ತಿಂಗಳ ಹಿಂದೆ ಎರಡನೆ ಮಗುವಿಗೆ ಜನ್ಮನೀಡಿದ್ದು, ತಾಯಿಯ ಮನೆಯಾದ ಬಲಾಡಿಯಲ್ಲಿ ವಾಸವಿರುತ್ತಾರೆ, ಆಪಾದಿತ ಜಯರಾಮ ನು ದಿನಾಂಕ 13-04-2026 ರಂದು ನಿಶಿತಾ ಶೆಟ್ಟಿ ರವರ ತಾಯಿಯ ಮನೆಗೆ ಬಂದು ವಾಸ್ತವ್ಯ ಮಾಡಿದ್ದು, ದಿನಾಂಕ 18-04-2026 ರಂದು ಬೆಳಿಗ್ಗೆ ನಿಶಿತಾ ಶೆಟ್ಟಿ ರವರ ಚಿಕ್ಕಮ್ಮನ ಮಗ ಶಮಿತ್ ಶೆಟ್ಟಿ ಚಾ ಕುಡಿಯಲು ಬಂದಾಗ ಆಪಾದಿತ ಜಯರಾಮ ಶೆಟ್ಟಿಯು ಈತ ಯಾಕೆ ಇಲ್ಲಿಗೆ ಬಂದಿದ್ದು ಎಂದು ನಿಶಿತಾ ಶೆಟ್ಟಿ ರವರೊಂದಿಗೆ ಗಲಾಟೆ ತೆಗೆದು, ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಕೊಲ್ಲುವ ಉದ್ದೇಶದಿಂದ ನಿಶಿತಾ ರವರ ಚೂಡಿದಾರದ ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಕೊಲ್ಲಲು ಯತ್ನಿಸಿದ್ದು, ಆಗ ನಿಶಿತಾ ರವರ ತಂದೆ ಸದಾಶಿವ ಶೆಟ್ಟಿ, ಅಣ್ಣ ಸುಜಿತ ಹಾಗೂ ಶಮಿತ್ ಹಲ್ಲೆಯನ್ನು ಬಿಡಿಸಿರುತ್ತಾರೆ. ಆಪಾದಿತ ಜಯರಾಮ ಶೆಟ್ಟಿಯು ಸದಾಶಿವ ಶೆಟ್ಟಿ ರವರ ಮೇಲೆ ಹಲ್ಲೆ ಮಾಡಿ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಿಶಿತಾ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ 109, 85, 115(2), 351(2) BNS ರಂತೆ ಪ್ರಕರಣ ದಾಖಲಾಗಿದೆ.
