ದಿನಾಂಕ:12-04-2026(ಹಾಯ್ ಉಡುಪಿ ನ್ಯೂಸ್)
ಇಸ್ಲಾಮಾಬಾದ್‌ನಲ್ಲಿ ಇರಾನ್ ಜೊತೆಗೆ ನಡೆದ ಶಾಂತಿ ಮಾತುಕತೆ ಫಲಪ್ರದವಾಗದ ಹಿನ್ನೆಲೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಹೋರ್ಮುಜ್ ಜಲಸಂಧಿಯಲ್ಲಿ ಸಂಚಾರ ಮಾಡುವ ಎಲ್ಲಾ ಹಡಗುಗಳ ಮೇಲೆ ನಾಕೇಬಂದಿ ವಿಧಿಸುವುದಾಗಿ ಅವರು ತಿಳಿಸಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಯಿಂದ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. “ಅಮೆರಿಕದ ನೌಕಾಪಡೆ ತಕ್ಷಣದಿಂದಲೇ ಹೋರ್ಮುಜ್ ಜಲಸಂಧಿಯಲ್ಲಿ ಪ್ರವೇಶಿಸುವ ಅಥವಾ ಹೊರಬರುವ ಎಲ್ಲಾ ಹಡಗುಗಳನ್ನು ತಡೆಹಿಡಿಯುವ ಕ್ರಮ ಆರಂಭಿಸುತ್ತದೆ,” ಎಂದು ಟ್ರಂಪ್ ಹೇಳಿದ್ದಾರೆ.
ಇದರ ಜೊತೆಗೆ, “ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಇರಾನ್‌ಗೆ ಟೋಲ್ ಪಾವತಿಸುವ ಪ್ರತಿಯೊಂದು ಹಡಗನ್ನು ಪತ್ತೆಹಚ್ಚಿ ತಡೆಹಿಡಿಯುವಂತೆ ನೌಕಾಪಡೆಗೆ ನಿರ್ದೇಶನ ನೀಡಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.
ಈ ಬೆಳವಣಿಗೆ ಜಾಗತಿಕ ತೈಲ ಸರಬರಾಜು ಮತ್ತು ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
