” ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ “
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್……
ಆದ್ದರಿಂದ……
ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ…..
ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ…….
ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ……
ಸಾವು – ಸೋಲು – ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.
ಆಸ್ಪತ್ರೆ, ಪೋಲೀಸ್, ನ್ಯಾಯಾಲಯ, ದೇವರು, ಧರ್ಮ, ಸ್ವಾಮಿಗಳು ಎಲ್ಲವುಗಳ ಸುತ್ತ ನಾವು ಸುತ್ತುವುದು ಮತ್ತು ಅನೇಕ ಭ್ರಮಾತ್ಮಕ ಮೌಢ್ಯಗಳಿಗೆ ಒಳಗಾಗುವುದು ಸಹ ಈ ಮೂರರ ಕಾರಣಕ್ಕಾಗಿ.
ಇವುಗಳನ್ನು ಘನತೆಯಿಂದ ಸ್ವೀಕರಿಸುವ, ವಾಸ್ತವವಾಗಿ ಎದುರಿಸುವ, ಸಹಜವಾದ ಕ್ರಿಯೆ ಎನ್ನುವ ಸಾಮಾಜಿಕ ವಾತಾವರಣ ನಮ್ಮ ವ್ಯವಸ್ಥೆಯಲ್ಲಿ ಇಲ್ಲ.
ಮನುಷ್ಯ ಸಂಘ ಜೀವಿ. ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಸ್ವಾಭಾವಿಕವಾಗಿ ಒಪ್ಪಿಕೊಂಡರು ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿ ಇರುತ್ತದೆ. ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.
ಇದು ಹೇಳುವಷ್ಟು ಸುಲಭವಲ್ಲ. ಆದರೆ ನಮ್ಮ ಒಟ್ಟು ವ್ಯಕ್ತಿತ್ವ ಮತ್ತು ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಸಾವು ಸೋಲು ಮತ್ತು ವಿಫಲತೆಯ ಭಯವನ್ನು ಮೀರಲೇ ಬೇಕಿದೆ.
ಯಾರೋ ಕೆಲವು ವ್ಯಾವಹಾರಿಕ ವ್ಯಕ್ತಿಗಳ ಯಶಸ್ಸುಗಳನ್ನು ಮಾಧ್ಯಮಗಳಲ್ಲಿ ನೋಡಿ ಅಥವಾ ನಮ್ಮ ಸುತ್ತಮುತ್ತಲಿನ ಅಥವಾ ಪರಿಚಿತರ ಒಂದಷ್ಟು ಆರ್ಥಿಕ ಲಾಭಗಳನ್ನು ನೋಡಿ ನಮ್ಮಲ್ಲಿ ಬೆಳೆಯುವ ಕೀಳರಿಮೆ, ಆಸೆಯಿಂದ ಶ್ರಮದಿಂದ ಮಾಡಿದ ಕೆಲಸದ ಸೋಲು, ಬದುಕಿನ ಒಟ್ಟು ವಿಫಲತೆ ಜೊತೆಗೆ ಸಾವಿನ ಭಯ ನಮ್ಮನ್ನು ಅತ್ಯಂತ ಕೆಳಮಟ್ಟದ ಶರಣಾಗತಿಗೆ ಅಥವಾ ಮನಸ್ಸು ಒಪ್ಪದ ಅಸಹ್ಯ ಹೊಂದಾಣಿಕೆಗೆ ದೂಡುತ್ತದೆ. ವಿಧಿ ಇಲ್ಲ ಅಥವಾ ವಿಧಿಯ ಆಟ ಎಂದು ಸಮಾಧಾನ ಮಾಡಿಕೊಳ್ಳಬಹುದು.
ಜೊತೆಗೆ ನಾವು ಸತ್ತ ನಂತರದ ನಮ್ಮ ಅವಲಂಬಿತರು, ಪ್ರೀತಿ ಪಾತ್ರರು, ವಿರೋಧಿಗಳು ಹೇಗೆ ಬದುಕಬಹುದು ಮತ್ತು ಪ್ರತಿಕ್ರಿಯಿಸಬಹುದು, ನಮ್ಮ ಸೋಲು ಹೇಗೆ ಹೊರಗಿನವರಿಂದ ಕುಹುಕಕ್ಕೆ ಗುರಿಯಾಗಬಹುದು, ನಮ್ಮ ವಿಫಲತೆ ಹೇಗೆ ನಮ್ಮ ಇಡೀ ಬದುಕನ್ನು ಪ್ರಪಾತಕ್ಜೆ ದೂಡಬಹುದು ಎಂಬ ಭಾವನೆಯೇ ನಮ್ಮನ್ನು ಯಶಸ್ಸಿಗಾಗಿ ಹಪಹಪಿಸುವಂತೆ ಮಾಡುತ್ತದೆ. ಈ ಭಯದ ಭಾವನೆಯೇ ನಮ್ಮನ್ನು ಅನೇಕ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ಏನಾದರೂ ಆಗಲಿ ಸಾಯಬಾರದು, ಸೋಲಬಾರದು ಯಶಸ್ಸು ಆಗಲೇ ಬೇಕು ಎಂದು ನಾವೆಂದೂ ಊಹಿಸದ ಹೀನಾಯ ಕೆಲಸಗಳಿಗೂ ಸಿದ್ದರಾಗುತ್ತೇವೆ. ಇದರಿಂದಾಗಿ ಕೆಲವರು ದುಶ್ಚಟಗಳಿಗೂ ದಾಸರಾಗುತ್ತಾರೆ ಹಾಗೆಯೇ ತಲೆ ಒಡೆಯಲು ತಲೆ ಹಿಡಿಯಲು ಹೇಸುವುದಿಲ್ಲ. ಭ್ರಷ್ಟಾಚಾರ ನಮಗೆ ಏನೂ ಅನಿಸುವುದಿಲ್ಲ.
ಆದರೆ ಧೈರ್ಯದಿಂದ ಸತ್ತರೆ ಸಾಯಲಿ ಸತ್ತ ನಂತರ ಹೇಗೂ ನನಗೆ ಅರಿವಿರುವುದಿಲ್ಲ ಅಥವಾ ಸೋಲಾಗಲಿ ಅಥವಾ ವಿಫಲವಾಗಲಿ ನನ್ನ ಬದುಕು ನನ್ನ ಆಯ್ಕೆ ಎಂಬ ದೃಢ ನಿರ್ಧಾರಕ್ಕೆ ಬಂದರೆ ಮನಸ್ಸಿನಲ್ಲಿ ಸ್ವಲ್ಪ ಶಾಂತಿ ನೆಮ್ಮದಿ ನೆಲೆಸುತ್ತದೆ.
ಸೂಕ್ಷ್ಮ ಮನಸ್ಸಿನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದು. ಸತ್ತರೆ ಏನಂತೆ, ಸೋತರೆ ಏನಂತೆ ಇರುವುದು ಒಂದೇ ಜೀವನ. ಹೆದರುವುದೇಕೆ ಎಂದು ತಮ್ಮಲ್ಲಿರುವ ಸ್ವಲ್ಪ ಭಯದ ಭಾವನೆಯನ್ನು ಕೊಂದುಕೊಳ್ಳಬೇಕು. ಜೊತೆಗೆ ಮಾನ ಮರ್ಯಾದೆ ಎಂಬುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸುಖಕ್ಕಾಗಿ ಹುಟ್ಡುಹಾಕಿರುವ ಭ್ರಮೆಗಳು ಎಂದು ಪರಿಗಣಿಸಬೇಕು. ಆಗ ನಿಮ್ಮಲ್ಲಿ ಹೊಸ ವಿನೂತನ ಚೈತನ್ಯ ಮೂಡುತ್ತದೆ. ಹೊಸ ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಬಹುದು.
ಈ ರೀತಿಯ ಧೈರ್ಯ ನಿಮ್ಮಲ್ಲಿ ಉಂಟಾದರೆ ಆಗ ನೀವು ಮೌಡ್ಯಗಳಿಗೆ ದಾಸರಾಗುವುದಿಲ್ಲ, ಲಂಚ ಪಡೆಯುವುದಿಲ್ಲ, ವರದಕ್ಷಿಣೆ ಕೇಳುವುದಿಲ್ಲ, ಇನ್ನೊಬ್ಬರ ಆಸ್ತಿಗೆ ಆಸೆ ಪಡುವುದಿಲ್ಲ. ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ.
ಸ್ವಾಭಿಮಾನದಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸಬಹುದು.
ನೆನಪಿರಲಿ, ಇದೆಲ್ಲವೂ ಒಳ್ಳೆಯ ರೀತಿಯಲ್ಲಿ ನೆಮ್ಮದಿಯ ಬದುಕನ್ನು ಅಪೇಕ್ಷಿಸುವವರಿಗೆ ಮಾತ್ರ.
ದುಷ್ಟತನದ ಕ್ರಿಮಿನಲ್ ಗಳಿಗೆ ಇದು ಯಾವುದೇ ರೀತಿಯಲ್ಲಿಯೂ ಅನ್ವಯಿಸುವುದಿಲ್ಲ.
ಆದ್ದರಿಂದ ಇನ್ನು ಮುಂದೆ ಸಾವು ಸೋಲು, ಅಪಯಶಸ್ಸಿನ ಭಯದಿಂದ ತಪ್ಪುಗಳನ್ನು ಮಾಡುವುದು ಬಿಡೋಣ. ಬಾಬಾ ಸಾಹೇಬರ ಮಾತುಗಳಂತೆ ಧೈರ್ಯವಾಗಿ ಸ್ವಾಭಿಮಾನದಿಂದ, ಸ್ವತಂತ್ರವಾಗಿ, ಆದರ್ಶಮಯವಾಗಿ, ಇತರರಿಗೆ ಮಾದರಿಯಾಗಿ ಬದುಕಲು ಪ್ರಯತ್ನಿಸೋಣ…………………….
ಏಕೆಂದರೆ……,
ಬದುಕೊಂದು ಯುದ್ದ ಭೂಮಿ……………
ಗೆಲ್ಲಬಹುದು – ಸೋಲಬಹುದು – ಅನಿರೀಕ್ಷಿತವಾಗಿ ಸಾಯಬಹುದು………..
ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ………
ಯುದ್ದದಲ್ಲಿ ಕತ್ತಿ, ಬಂದೂಕು,
ಬಾಂಬು, ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು…..
ಯುದ್ದದಂತೆ ಬದುಕಿನಲ್ಲಿ ನಮ್ಮೊಂದಿಗೆ ಹಲವಾರು ಜನರಿರುತ್ತಾರೆ. ಕೆಲವೊಮ್ಮೆ ಮುಂದೆ, ಮತ್ತೆ ಕೆಲವರು ಹಿಂದೆ, ಹಲವರು ಆಗಾಗ ಜೊತೆಯಾಗುತ್ತಾರೆ ಅಥವಾ ಸಂದರ್ಭ ಸನ್ನಿವೇಶದ ಒತ್ತಡದಿಂದ ಎಲ್ಲರೂ ಬೇರೆಯಾಗಿ ನಾವು ಒಂಟಿಯೂ ಆಗಬಹುದು……..
ಯುದ್ದದಲ್ಲಿರುವ ಯಶಸ್ಸುಗಳು, ಸಂಭ್ರಮಗಳು, ತ್ಯಾಗಗಳು, ತೃಪ್ತಿಗಳು ಬದುಕಿನಲ್ಲೂ ಸಂಭವಿಸುತ್ತದೆ. ಹಾಗೆಯೇ ಸೋಲು, ಹತಾಶೆ, ಒಂಟಿತನ, ಕುತಂತ್ರಗಳೂ ಸಹ ಯುದ್ಧ ಮತ್ತು ಬದುಕಿನ ಭಾಗಗಳೇ ಆಗಿದೆ…….
ಯುದ್ಧದ ಗೆಲುವು ನಮ್ಮನ್ನು ವಿಜೃಂಬಿಸಿದರೆ, ಯುದ್ಧದ ಸೋಲು ನರಕಯಾತನೆಯೂ ಆಗಿ ಬದುಕು ಅಲ್ಲಿಗೆ ಮುಕ್ತಾಯವೂ ಆಗಬಹುದು. ಹಾಗೆ ಜೀವನದ ಯಶಸ್ಸು ನಮ್ಮನ್ನು ಅತ್ಯುತ್ತಮ ಸ್ಥಾನಕ್ಕೆ ಕೊಂಡೊಯ್ದುರೆ, ಸೋಲು ಸಾವಾಗಿಯೂ ಪರಿವರ್ತನೆಯಾಗಬಹುದು….
ಯುದ್ಧದ ತೀವ್ರ ಭಾವನೆಗಳು, ಆತಂಕಗಳು, ಆಯಾಯ ಸಂದರ್ಭದ ನಮ್ಮ ನಿರ್ಧಾರಗಳು ನಮ್ಮ ಮುಂದಿನ ಗತಿಯನ್ನು ನಿರ್ಧರಿಸುವಂತೆ ಜೀವನದಲ್ಲಿಯೂ ಕಠಿಣ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ………..
ರಣಭೂಮಿಯ ಪ್ರತಿ ಹೆಜ್ಜೆಯನ್ನು ಅತ್ಯಂತ ಜಾಗರೂಕತೆಯಿಂದ, ವಿವೇಚನೆಯಿಂದ, ಸೂಕ್ಷ್ಮ ಮುಂದಾಲೋಚನೆಯಿಂದ, ನಿರೀಕ್ಷಿತ ಪರಿಣಾಮ ಊಹಿಸಿಯೇ ಇಡಬೇಕು ಮತ್ತು ಅದರ ಫಲಿತಾಂಶವನ್ನು ಎದುರಿಸಬೇಕು. ಹಾಗೆಯೇ ಬದುಕಿನಲ್ಲಿಯೂ ಬಾಲ್ಯದಿಂದ ಮುಪ್ಪಿನವರಗೆ ಆಯಾಯ ಕಾಲಘಟ್ಟದಲ್ಲಿ ನಾವು ಯೋಚಿಸಿ ನಿರ್ಧರಿಸಬೇಕು ಮತ್ತು ಫಲಿತಾಂಶಗಳನ್ನು ನಮ್ಮೆಲ್ಲ ಶ್ರಮದ ನಂತರವೂ ಬಂದಂತೆ ಸ್ವೀಕರಿಸಬೇಕು. ಕೊರಗುತ್ತಾ ಕುಳಿತರೆ ಸಾವು ಖಚಿತ………..
ಯುದ್ದದಲ್ಲಿ ಕೆಲವೊಮ್ಮೆ ಸೋಲಿನ ಅಂಚಿಗೆ ಬರಬಹುದು. ನಮ್ಮ ಯೋಜನೆಗಳು ತಲೆಕೆಳಗಾಗಬಹುದು, ನಮ್ಮವರಿಂದ ನಿರೀಕ್ಷಿತ ಬೆಂಬಲ ಸಿಗದಿರಬಹುದು. ಆಗಲೂ ನಿರಾಶರಾಗದೆ ಕೊನೆಯವರೆಗೂ ಹೋರಾಡಬೇಕು. ಬದುಕಿನಲ್ಲೂ ಕೂಡ ಇದು ಅಷ್ಟೇ ಸಹಜ……..
ನಮ್ಮ ಕಣ್ಣ ಮುಂದೆಯೇ ಅನೇಕ ಸಾವುನೋವುಗಳು ಸಂಭವಿಸಿದರೂ ನಾವು ಆ ಕ್ಷಣದ ನಮ್ಮ ಕರ್ತವ್ಯ ಮುಗಿಸಿ ಮನ್ನಡೆಯವುದು ಯುದ್ಧದ ಅನಿವಾರ್ಯತೆ. ಹಾಗೆಯೇ ಬದುಕಿನಲ್ಲಿಯೂ ಇದರಲ್ಲಿ ಅಂತಹ ವ್ಯತ್ಯಾಸವಿಲ್ಲ…………….
ಅದೃಷ್ಟ ಮತ್ತು ದುರಾದೃಷ್ಟವೆಂಬ ಖಚಿತವಲ್ಲದ, ವಿವರಿಸಲಾಗದ, ಪರಿಣಾಮದವರೆಗೂ ತಿಳಿಯದ ಒಂದು ಆಟ ಮಾತ್ರ ಯುದ್ಧ ಮತ್ತು ಬದುಕಿನಲ್ಲಿ ಇದ್ದೇ ಇರುತ್ತದೆ……..
ನಿಮ್ಮೆಲ್ಲಾ ಶ್ರಮ, ಒಳ್ಳೆಯತನ, ಚಾಕಚಕ್ಯತೆ ಎಲ್ಲವೂ ಇದ್ದು ವಿವರಿಸಲಾಗದ ಕಾರಣಕ್ಕೆ ನಿಮಗೆ ಯುದ್ದದಲ್ಲಿ ಸೋಲಾಗಬಹುದು. ಹಾಗೆಯೇ ಜೀವನದಲ್ಲಿಯೂ ಅನಿರೀಕ್ಷಿತವಾಗಿ ಯಶಸ್ಸು ಸಿಗಬಹುದು ಅಥವಾ ಸೋಲೂ ಆಗಬಹುದು……………
ದುಷ್ಟರು ಜನಪ್ರಿಯರಾಗಬಹುದು, ಉಡಾಫೆಯವರು ಅಧಿಕಾರಕ್ಕೇರಬಹುದು ಮತ್ತು ಪ್ರಾಮಾಣಿಕರು ದಕ್ಷರು ಹೇಳ ಹೆಸರಿಲ್ಲದಂತಾಗಬಹುದು…….
ಈ ಎಲ್ಲಾ ಸಾಧ್ಯತೆಗಳ ವಿಸ್ಮಯ ಪ್ರಪಂಚ ಯುದ್ಧ ಮತ್ತು ಬದುಕು………
ಹಾಗಾದರೆ ಇದರ ಪಾಠವೇನು ?
ಏನೂ ಇಲ್ಲ…..
ಸೃಷ್ಟಿಯ ಸಹಜತೆಯನ್ನು ಒಪ್ಪಿಕೊಂಡು ನಮ್ಮ ಮೆದುಳಿನ ಗ್ರಹಿಕೆಯ ಪ್ರತಿಕ್ರಿಯೆಗಳನ್ನು ಅನುಸರಿಸುತ್ತಾ ಜೀವವಿರುವವರೆಗೂ ನಮ್ಮ ನಿಯಂತ್ರಣವಿಲ್ಲದ ವಿಷಯಗಳಲ್ಲಿ ಅದನ್ನು ಬಂದಂತೆ ಸ್ವೀಕರಿಸಿ, ನಿಯಂತ್ರಣ ಇರುವ ಕಡೆ ಮತ್ತದೇ ಮೆದುಳ ಅರಿವಿನಿಂದ ಅದನ್ನು ನಮಗೆ ಸಾಧ್ಯವಿರುವಂತೆ ಅನುಕೂಲಕರವಾಗಿ ಪರಿವರ್ತಿಸಿ ಬದುಕುವುದು.
ಮಾಡುವುದನ್ನು ಯೋಚಿಸಿ ಮಾಡಿ. ಪರಿಣಾಮ ಸ್ವೀಕರಿಸಿ.
ಪಶ್ಚಾತ್ತಾಪಕ್ಕೆ ಹೆಚ್ಚಿನ ಅವಕಾಶ ಕೊಡಬೇಡಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
