ಕೋಟ: ದಿನಾಂಕ:28-03-2026(ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಗರಡಿ ರಸ್ತೆಯಲ್ಲಿರುವ ಶೇಂದಿ ಅಂಗಡಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐಯವರಾದ ಮಹಾಂತೇಶ್ ಜಾಬಗೌಡ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಮಹಾಂತೇಶ್ ಜಾಬಗೌಡ ಅವರು ದಿನಾಂಕ: 27-03-2026 ರಂದು ಠಾಣೆಯಲ್ಲಿರುವಾಗ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನ ಗರಡಿ ರಸ್ತೆಯಲ್ಲಿರುವ ಕೋಟ ಸಿ ಎ ಬ್ಯಾಂಕ್ ಶೇಂದಿ ಅಂಗಡಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಸಿಬ್ಬಂದಿಯವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಕೂಡಲೇ ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸುವಾಗ ಸಾರ್ವಜನಿಕರು ಗುಂಪು ಸೇರಿದ್ದು ಓರ್ವ ವ್ಯಕ್ತಿ 1 ರೂಪಾಯಿಗೆ 70 ರೂಪಾಯಿ ಎಂದು ಜೋರಾಗಿ ಕೂಗುತ್ತಿದ್ದು ಸಂಖ್ಯೆಗಳ ಮೇಲೆ ಸಾರ್ವಜನಿಕರು ಹಣವನ್ನು ಕಟ್ಟುತ್ತಿದ್ದರು .
ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿದ್ದಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಸ್ಥಳದಲ್ಲಿ ಮಟ್ಕಾ ಬರೆಯುತ್ತಿದ್ದ ಮಹಾಬಲ ಪೂಜಾರಿ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ವಿಠಲ ದೇವಾಡಿಗ ಪಾಂಡೇಶ್ವರ ಎಂಬವನು ತಿಳಿಸಿದಂತೆ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದು ಇದರಿಂದ ಬಂದ ಹಣವನ್ನು ವಿಠಲ ದೇವಾಡಿಗ ಪಾಂಡೇಶ್ವರ ಈತನಿಗೆ ನೀಡುತ್ತಿದ್ದು ಆತನು ತನಗೆ ಕಮೀಷನ್ ನೀಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿರುತ್ತಾನೆ .
ಮಹಾಬಲ ಪೂಜಾರಿಯು ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದರಿಂದ ಆತನನ್ನು ಹಾಗೂ ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್ ಪೆನ್ ,ಮಟ್ಕಾ ಚೀಟಿ ನಗದು 940/- ರೂಪಾಯಿಯನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 78(i)(iii) KP ACT ಮತ್ತು ಕಲಂ112 ಜೊತೆಗೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.
