ಕುಂದಾಪುರ: ದಿನಾಂಕ:13-03-2026(ಹಾಯ್ ಉಡುಪಿ ನ್ಯೂಸ್) ಇಲ್ಲಿನ ಶಾಂತಿನಿಕೇತನ ವಾರ್ಡ್‌ನ ಭಗತ್ ಸಿಂಗ್ ರಸ್ತೆಯಲ್ಲಿರುವ ತೆರೆದ ಮಳೆ ನೀರು ಹರಿಯುವ ಚರಂಡಿಗೆ ಕೆಲವು ಪ್ರಭಾವಿ ಸರಕಾರಿ ಅಧಿಕಾರಿಗಳ ಮನೆಯ ಮಲಿನ ನೀರನ್ನು ನೇರವಾಗಿ ಹರಿಸುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಾರೆ.
ಶಾಂತಿನಿಕೇತನ ವಾರ್ಡ್ ವ್ಯಾಪ್ತಿಯ ಭಗತ್ ಸಿಂಗ್ ರಸ್ತೆಯ ಹತ್ತಿರವಿರುವ ತೆರೆದ ಚರಂಡಿಗೆ ಕೆಲವು ನಿವಾಸಿಗಳು, ಕೆಲವು ಪ್ರಭಾವಿ ಸರಕಾರಿ ಅಧಿಕಾರಿಗಳು ತಮ್ಮ ಮನೆಯ ಬಳಕೆ ಮಾಡಿದ ಕೊಳಚೆ ನೀರನ್ನು ಕಳೆದ ಒಂದು ವರ್ಷದಿಂದ ಬಿಡುತ್ತಿದ್ದಾರೆ. ಇದರಿಂದಾಗಿ ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದ್ದು, ಇಡೀ ಪರಿಸರ ಮಲಿನಗೊಂಡಿದೆ.
ಮಲಿನ ನೀರು ಮುಂದಕ್ಕೆ ಹರಿಯದೇ ಒಂದೇ ಕಡೆ ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸ್ಥಳೀಯರು ಮಲಿನ ನೀರು ಬಿಡುತ್ತಿರುವವರ ಗಮನಕ್ಕೆ ಈ ವಿಷಯವನ್ನು ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರಿಂದ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಓಡಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ಕುಂದಾಪುರ ಪುರಸಭೆಯ ಮುಖ್ಯಧಿಕಾರಿಗಳಿಗೆ ಸ್ಥಳೀಯ ಸಾರ್ವಜನಿಕರು ಲಿಖಿತ ದೂರು ಸಲ್ಲಿಸಿದ್ದಾರೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಕಾನೂನುಬಾಹಿರವಾಗಿ ಚರಂಡಿಗೆ ಕೊಳಚೆ ನೀರು ಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಗೋಪಾಲ್, ಶ್ರೀಧರ್, ಪ್ರಶಾಂತ್ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ಒಂದು ವೇಳೆ ಈ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.


