unnamed-1.jpg
Spread the love

ಉಡುಪಿ: ದಿನಾಂಕ:28-02-2026 (ಹಾಯ್ ಉಡುಪಿ ನ್ಯೂಸ್) ತಾಲೂಕು ಕಚೇರಿಯ ಸಂಕೀರ್ಣದಲ್ಲಿರುವ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಕಚೇರಿಯ ಕಡತಗಳನ್ನು ತಮ್ಮ ವೈಯಕ್ತಿಕ ಬ್ಯಾಗಿನಲ್ಲಿ ಇಟ್ಟುಕೊಂಡು ಅಪರಾಧ ಎಸಗಿರುವ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಹಾಲಮೂರ್ತಿ ರಾವ್ ವಿ ಎಸ್ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ, ಉಡುಪಿ ಕಚೇರಿಯಲ್ಲಿ ಹಾಲಮೂರ್ತಿ ರಾವ್ ವಿ ಅವರು  ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ 27/02/2026 ರಂದು ಗೌರವಾನ್ವಿತ ನ್ಯಾಯಮೂರ್ತಿ ಉಪಲೋಕಾಯುಕ್ತರು ಕರ್ನಾಟಕ ರಾಜ್ಯ ಬೆಂಗಳೂರು ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆಯಲ್ಲಿರುವ ತಾಲ್ಲೂಕು ಕಛೇರಿ ಸಂಕೀರ್ಣದಲ್ಲಿರುವ ಹಿರಿಯ ಉಪನೋಂದಣಾಧಿಕಾರಿ ಯವರ ಕಛೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಕಛೇರಿಯಲ್ಲಿ ಹೊರಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಕೇಶ್ ಎಂಬವರು ತಮ್ಮ ವೈಯಕ್ತಿಕ ಬ್ಯಾಗ್ ನಲ್ಲಿ 8 ಕಡತಗಳನ್ನು ಮತ್ತು ಸುನೀಲ್ ರವರು ತಮ್ಮ ವೈಯಕ್ತಿಕ ಬ್ಯಾಗ್ ನಲ್ಲಿ 35 ಕಡತಗಳನ್ನು ಒಟ್ಟಾರೆಯಾಗಿ ಸಾರ್ವಜನಿಕರಿಂದ ಆಸ್ತಿ ಮತ್ತು ಮದುವೆ ನೋಂದಾಣಿಗೆ ಸಂಬಂಧಿಸಿದ 43 ಕಡತಗಳನ್ನು ಕಚೇರಿಯ ಇನ್ ವರ್ಡ್ ಪುಸ್ತಕದಲ್ಲಿ ನಮೂದಿಸದೇ ಅನಧಿಕೃತವಾಗಿ ತಮ್ಮ ವೈಯಕ್ತಿಕ ಬ್ಯಾಗಿನಲ್ಲಿ ಇಟ್ಟುಕೊಂಡು ಅಪರಾಧಿಕ ದುರ್ನಡತೆ ಮತ್ತು ಕಾನೂನಿನ ದುರುಪಯೋಗ ಮಾಡಿರುತ್ತಾರೆ ಹಾಗೂ ಕಛೇರಿಗೆ ಬಂದ ಸಾರ್ವಜನಿಕರ ಜೊತೆ ಸರ್ಕಾರಿ ನೌಕರರಂತೆ ವರ್ತಿಸಿರುತ್ತಾರೆ.

ಇಷ್ಟೆಲ್ಲಾ ಕೃತ್ಯಗಳನ್ನು ಆರೋಪಿತರು ಮಾಡಿದ್ದರೂ ಸಹಾ ಕಛೇರಿಯ ಉಪನೋಂದಾಣಾಧಿಕಾರಿಯವರಾದ ಗಿರೀಶ್ ರವರು ಗಮನ ಹರಿಸದೇ ಇದ್ದು, ಇವರ ಕುಮ್ಮಕ್ಕಿನಿಂದಲೇ ಸುಕೇಶ್ ಮತ್ತು ಸುನೀಲ್ ರವರು ಮೇಲಿನ ಕೃತ್ಯವನ್ನು ನಡೆಸಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 316(4) 337, 340, 344, 204, r/w 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!