ಚಿಕ್ಕಬಳ್ಳಾಪುರ: ದಿನಾಂಕ:24-02-2026(ಹಾಯ್ ಉಡುಪಿ ನ್ಯೂಸ್) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ) ಯೋಜನೆಯನ್ನು ಸ್ಥಗಿತಗೊಳಿಸಿದ್ದರ ಪರಿಣಾಮ ಸುಮಾರು 16.12 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಲ್ಲಿ ಶೇಕಡಾ 53 ರಷ್ಟು ಮಹಿಳೆಯರು ಮತ್ತು ಶೇಕಡಾ 28 ರಷ್ಟು ಜನ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದವರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ “ಮನರೇಗಾ ಉಳಿಸಿ ಆಂದೋಲನ” ದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹಿಂದೆ ಮನರೇಗಾ ಗ್ರಾಮೀಣ ಕಾರ್ಮಿಕರಿಗೆ 100 ದಿನಗಳ ಉದ್ಯೋಗವನ್ನು ಖಾತರಿಪಡಿಸಿತ್ತು ಮತ್ತು ಗ್ರಾಮ ಪಂಚಾಯತ್‌ಗಳ ಕಾರ್ಯಾಚರಣೆಯನ್ನು ಬೆಂಬಲಿಸಿತ್ತು ಎಂದು ಒತ್ತಿ ಹೇಳಿದರು.
ಮನರೇಗಾ ಕಾಯ್ದೆಗೆ ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು ಎಂದರು.
100 ದಿನಗಳ ಉದ್ಯೋಗದ ಖಾತ್ರಿ ನೀಡುತ್ತಿದ್ದ ಮನರೇಗಾ ಕಾಯ್ದೆಯಡಿ, ಕೂಲಿಕಾರರು ತಮ್ಮ ಸ್ಥಳೀಯ ಮಟ್ಟದಲ್ಲಿಯೇ ಕೆಲಸ ಮಾಡಬಹುದಿತ್ತು. ಕೆಲಸದ ಸ್ಥಳವನ್ನು ಗ್ರಾಮ ಪಂಚಾಯತಿ ಮತ್ತು ಗ್ರಾಮಸಭೆಗಳಿಗೆ ನಿರ್ಧರಿಸುವ ಅಧಿಕಾರವಿತ್ತು. ಆದರೀಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ.
ಕೇಂದ್ರದ ಅನುದಾನ, ಅನುಮತಿ ಇಲ್ಲದೇ, ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕೆಲಸವಾಗಲು ಅಸಾಧ್ಯ. ಆದ್ದರಿಂದ ಮನರೇಗಾವನ್ನು ಮುಂದುವರೆಸಬೇಕೆಂಬುದು ಕಾಂಗ್ರೆಸ್ ಪಕ್ಷದ ಒತ್ತಾಯವಾಗಿದೆ.
ಮನರೇಗಾದಲ್ಲಿ 100 ದಿನ ಭತ್ಯೆಯನ್ನು ತಪ್ಪದೇ ಕೊಡಲಾಗುತ್ತಿತ್ತು. ಹೊಸ ಕಾಯ್ದೆಯಂತೆ ಕೇಂದ್ರ ಶೇ 60 ರಷ್ಟು ಅನುದಾನ ಮತ್ತು ರಾಜ್ಯಗಳು ಶೇ 40 ರಷ್ಟು ಅನುದಾನ ಕೊಡಬೇಕಾಗಿದೆ. ರಾಜ್ಯದ ಹಿತವನ್ನು ಕಾಪಾಡುವಲ್ಲಿ ಕೇಂದ್ರ ಸೋತಿದೆ ಎಂದರು.
ದೇಶಾದ್ಯಂತ ‘ಮನರೇಗಾವನ್ನು ಉಳಿಸಿ’ ಅಭಿಯಾನ ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರ ಮನರೇಗಾವನ್ನು ರದ್ದುಪಡಿಸಿ, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದೆ.
ಮನರೇಗಾದ ರದ್ದತಿ ಅಗತ್ಯವೇ ಇರಲಿಲ್ಲ. ಕೂಲಿಕಾರರು, ಆದಿವಾಸಿಗಳು, ಸಣ್ಣರೈತರಿಗೆ, ಮಹಿಳೆಯರಿಗೆ ಉದ್ಯೋಗದ ಅನುಕೂಲ ಕಲ್ಪಿಸುವ ದಿಸೆಯಲ್ಲಿ 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಈ ಕಾಯ್ದೆ ಜಾರಿಯಾಯಿತು. ಇದೇ ಕಾಯ್ದೆಯಲ್ಲದೇ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಆದರೆ ಈ ಎಲ್ಲ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿಯವರ ನೇತೃತ್ವದ ಸರ್ಕಾರ ಮಾಡುತ್ತಿದೆ.
ವಿಬಿ ಜಿ ರಾಮ್ ಜಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮನರೇಗಾವನ್ನು ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯತ್ ಸ್ವಯಂ ಆಡಳಿತದ ಹಕ್ಕು ಮರುಸ್ಥಾಪನೆಯಾಗಬೇಕು, ದಿನಕ್ಕೆ 400 ರೂ.ಗಳ ಕನಿಷ್ಠ ವೇತನವನ್ನು ದೇಶಾದ್ಯಂತ ನೀಡಬೇಕು. ಈ ಬೇಡಿಕೆಗಳು ಈಡೇರುವವರೆಗೆ ನಮ್ಮ ಆಂದೋಲನ ನಿಲ್ಲುವುದಿಲ್ಲ ಎಂದರು.
ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪನೆಯಾಗುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಎಂದು ಕರೆ ನೀಡಿದರು.
