ಕಾರ್ಕಳ: ದಿನಾಂಕ:18-02-2026 (ಹಾಯ್ ಉಡುಪಿ ನ್ಯೂಸ್) ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವಕನೋರ್ವ ನನ್ನು ಸಂಬಂಧಿಕರು ಥಳಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಬೆಳ್ಳೆ ಗ್ರಾಮದ ನಿವಾಸಿ ಸುಜಯ್ (22) ಎಂಬವರು 6 ತಿಂಗಳ ಹಿಂದೆ ಮಂಜುಳ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದು, ಸುಜಯ್ ರವರು ಮದುವೆಯಾಗುವುದು ಸುಜಯ್ ರವರ ತಾಯಿ ಹಾಗೂ ಇತರ ಸಂಬಂಧಿಕರಿಗೆ ಇಷ್ಟ ಇದ್ದಿರುವುದಿಲ್ಲ, ಮನೆಯಲ್ಲಿ ತಾಯಿ ಮತ್ತು ಅಕ್ಕ ಕಿರಿಕಿರಿ ಮಾಡುತ್ತಿದ್ದ ಕಾರಣ ಮನೆ ಬಿಟ್ಟು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಾರ್ಕಳ ಎಂಬಲ್ಲಿ 4 ದಿನಗಳಿಂದ ಬಾಡಿಗೆ ಮನೆಯಲ್ಲಿ ಹೆಂಡತಿಯೊಂದಿಗೆ ವಾಸವಾಗಿರುತ್ತಾರೆ.
ದಿನಾಂಕ 16/02/2026 ರಂದು ಸುಜಯ್ ರವರು ಬಜಗೋಳಿಗೆ ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ಸಂಜೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯ ಲಕ್ಷ್ಮಿ ಹೊಟೇಲ್ ಬಳಿ ಬರುತ್ತಿರುವಾಗ ಸುಜಯ್ ರವರ ತಾಯಿಯ ತಂಗಿಯ ಮಗ ಶರತ್ ಮತ್ತು ಇತರ ಇಬ್ಬರು ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಶರತ್‌ನು ಸುಜಯ್ ರವರ ತಲೆಗೆ ಕೈಯಿಂದ ಹೊಡೆದಾಗ ಸುಜಯ್ ರವರು ಬಿದ್ದಾಗ ಮೂವರೂ ಸೇರಿ ಕಾಲಿನಿಂದ ತುಳಿದು ಅಲ್ಲಿಯೇ ಇದ್ದ ದೊಣ್ಣೆಯಿಂದ ಎಡಕಾಲಿಗೆ ಮತ್ತು ಬಲಕೈಗೆ ಹೊಡೆದಿರುತ್ತಾರೆ ಮತ್ತು ಮೂವರೂ ಸೇರಿ ಸ್ವಲ್ಪ ದೂರ ಎಳೆದುಕೊಂಡು ಹೋಗಿ ಬಿಟ್ಟು ಹೋಗಿರುತ್ತಾರೆ.
ಅಲ್ಲಿಂದ ಜಾರ್ಕಳದಲ್ಲಿರುವ ಮನೆಗೆ ಹೋಗಿ ನಂತರ ಹೆಂಡತಿಯೊಂದಿಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುಜಯ್ ತಿಳಿಸಿದ್ದಾರೆ.
ಸುಜಯ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 126(2),352,351(2),115(2), 118(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
