IMG_20260205_112652.jpg
Spread the love

ದಿನಾಂಕ:05-02-2026 (ಹಾಯ್ ಉಡುಪಿ ನ್ಯೂಸ್)

ಇಸ್ಲಾಮಾಬಾದ್: ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಪುನರುಚ್ಚರಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಫೆಡರಲ್ ಕ್ಯಾಬಿನೆಟ್ ಉದ್ದೇಶಿಸಿ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ. ಈ ಕುರಿತ ನಮ್ಮ ನಿಲುವು ಸ್ಪಷ್ಟವಾಗಿದೆ  ಎಂದು ಹೇಳಿದ್ದಾರೆ.

ಎಲ್ಲಾ ದೃಷ್ಟಿಯಿಂದ ಪರಾಮರ್ಶೆ ಮಾಡಿದ ನಂತರವೇ ಭಾರತದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.

ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಎಲ್ಲ ನಿಟ್ಟಿನಿಂದ ಚರ್ಚಿಸಿದ ಬಳಿಕವೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇದು ಸೂಕ್ತ ನಿರ್ಧಾರ ಎಂದೂ ತಿಳಿಸಿದ್ದಾರೆ.

ಬಾಂಗ್ಲಾದೇಶ ತಂಡ ಐಸಿಸಿ ಟಿ20 ವಿಶ್ವಕಪ್‌ನಿಂದ ಹೊರ ನಡೆಯುತ್ತಿದ್ದಂತೆ ಪಾಕಿಸ್ತಾನ ತನ್ನ ಹೊಸ ನಾಟಕ ಆರಂಭಿಸಿತ್ತು. ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೆ ತನ್ನ ಗುಂಪು ಹಾಗೂ ಸ್ಥಳವನ್ನು ಬದಲಿಸುವಂತೆ ಐಸಿಸಿಗೆ ಬೇಡಿಕೆ ಇಟ್ಟಿತ್ತು. ಆದರೆ ಐಸಿಸಿ ಈ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ. ಅಲ್ಲದೆ ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಡಲಾಯಿತು.

ಬಾಂಗ್ಲಾದೇಶಕ್ಕೆ ಬೆಂಬಲವಾಗಿ ಪಾಕಿಸ್ತಾನ ಟೂರ್ನಿಯನ್ನು ಬಾಯ್ಕಟ್ ಮಾಡುವುದಾಗಿ ಈ ಮೊದಲು ಸುದ್ದಿಗಳು ಹೊರ ಬಂದಿದ್ದವು. ಆ ಬಳಿಕ ಪಾಕಿಸ್ತಾನ ಸರ್ಕಾರ ಯಾವುದೇ ಕಾರಣವನ್ನು ನೀಡದೇ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಅಂಗಳಕ್ಕೆ ಇಳಿಯುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿತ್ತು.

ನಂತರ ಸ್ಪಷ್ಟನೆ ನೀಡಿದ್ದ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆ. ಆದರೆ, ಭಾರತದ ವಿರುದ್ಧ ಲೀಗ್‌ ಹಂತದ ಪಂದ್ಯವನ್ನು ಆಡುವುದಿಲ್ಲ ಎಂದು ತಿಳಿಸಿತ್ತು.

error: No Copying!