ಬ್ರಹ್ಮಾವರ: ದಿನಾಂಕ:08-01-2026 (ಹಾಯ್ ಉಡುಪಿ ನ್ಯೂಸ್) ಭೂ ಒತ್ತುವರಿ ವಿಚಾರವಾಗಿ ಇರುವ ವಿವಾದದ ಬಗ್ಗೆ ದೇವಸ್ಥಾನವೊಂದರ ಸಮಿತಿಯ ಸದಸ್ಯ ನೋರ್ವ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮೈಕ್ ನಲ್ಲಿ ಅವಾಚ್ಯ ವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಾಗರಾಜ ಆಚಾರ್ಯ (47) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ತಾಲೂಕು ಬಾರ್ಕೂರು ನಿವಾಸಿ ನಾಗರಾಜ ಆಚಾರ್ಯ ಅವರಿಗೂ ಹಾಗೂ ಕಚ್ಚೂರು ಗ್ರಾಮದ ಬಾರ್ಕೂರಿನ ಕಾಳಿಕಾಂಬಾ ದೇವಸ್ಥಾನದ ಸಮಿತಿಯವರ ನಡುವೆ ಭೂ ಒತ್ತುವರಿ ವಿಚಾರವಾಗಿ ವಿವಾದವಿದ್ದು, ಇದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ .
ದೇವಸ್ಥಾನದ ಸಮಿತಿಯವರಾದ ಆರೋಪಿ ಪ್ರವೀಣ್ ಆಚಾರ್ಯ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿಯೂ, ಅವರು ದಿನಾಂಕ 17.11.2025 ರಂದು ದೇವಸ್ಥಾನದ ಕಾರ್ತಿಕ ದೀಪೋತ್ಸವದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಆರೋಪಿ ಪ್ರವೀಣ್ ಆಚಾರ್ಯ ನು ಮೈಕ್ ಬಳಸಿ ನಾಗರಾಜ ಆಚಾರ್ಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ನಾಗರಾಜ ಆಚಾರ್ಯ ರು ಫೋರ್ಜರಿ ಮಾಡಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಲ್ಲದೆ, ಅವರ ಕಟ್ಟಡವನ್ನು ಧ್ವಂಸಗೊಳಿಸುವುದಾಗಿ ಇದಕ್ಕೆ ನಾಗರಾಜ ಆಚಾರ್ಯರು ಹಾಗೂ ಅವರ ಕುಟುಂಬದವರು ಅಡ್ಡ ಬಂದಲ್ಲಿ ಅವರನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದು ಅಲ್ಲದೆ ತನ್ನ ಭಾಷಣದಲ್ಲಿ ಈ ವಿವಾದಿತ ಭೂಮಿ 2009 ರಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಜಡ್ಜ್ ಮೆಂಟ್ ಆಗಿದೆ ಎಂದು ಹಾಗೂ ಜಡ್ಜ್ ಮೆಂಟ್ ಆಗಿ ಇಷ್ಟು ವರ್ಷ ಆದರೂ ಯಾಕೆ ನಾಗರಾಜ ಆಚಾರ್ಯ ರನ್ನು ಮನೆಯಿಂದ ಎಳೆದು ಹೊರಗೆ ಹಾಕಲಿಲ್ಲ ಎಂದು ಸುಳ್ಳು ಹೇಳಿರುತ್ತಾರೆ.
ಈ ಭಾಷಣವು ಸ್ಥಳೀಯ ವಾಹಿನಿಗಳಲ್ಲಿ ನೇರ ಪ್ರಸಾರವಾಗಿದ್ದು ಭಾಷಣದ ನಂತರ ಆರೋಪಿ ಪ್ರವೀಣ್ ಆಚಾರ್ಯ ರು ನಾಗರಾಜ ಆಚಾರ್ಯರ ಆಸ್ತಿಗೆ ಅತಿಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 196(1)(2), 329(3), 351(2),(3), 352, 356(2) BNS ರಂತೆ ಪ್ರಕರಣ ದಾಖಲಾಗಿದೆ.
