ಶಂಕರನಾರಾಯಣ: ದಿನಾಂಕ :04-01-2026(ಹಾಯ್ ಉಡುಪಿ ನ್ಯೂಸ್) ಅಂಪಾರು ಸಹಕಾರಿ ವ್ಯವಸಾಯಿಕ ಸಂಘ (ನಿ) ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವ್ಯಕ್ತಿ ಯೋರ್ವರು ಸಂಸ್ಥೆಗೆ 4ಕೋಟಿ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಪಾರು ಸಹಕಾರಿ ವ್ಯವಸಾಯಿಕ ಸಂಘ (ನಿ) ಅಂಪಾರು ಇಲ್ಲಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 2023-2024 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಆರೋಪಿ ಸದಾಶಿವ ವೈದ್ಯ ಎಂಬವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡ್ಡಿ ಖಾತೆಗೆ ನಕಲಿ ಖರ್ಚು ಬರೆದು, ನಕಲಿ ಠೇವಣಿ ಸೃಷ್ಟಿಸಿ, ಉಳಿತಾಯ ಖಾತೆಯಲ್ಲಿ ಅವ್ಯವಹಾರ ಮಾಡಿ ಒಟ್ಟು 3,95,65,000/- ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದು, ಎಲ್ಲಾ ಹೊಂದಾಣಿಕೆ ಲೆಕ್ಕಗಳು ಸಂಘದ ಕಂಪ್ಯೂಟರ್ ನಲ್ಲಿರುವ ದಾಖಲೆಗಳಲ್ಲಿ “ವೈದ್ಯ” ಹಾಗೂ “ಮೇನೆಜರ್” ಎನ್ನುವ ಪಾಸ್ ವರ್ಡ್ ಮೂಲಕ ದಾಖಲಾಗಿದ್ದು ಅವುಗಳನ್ನು ಆರೋಪಿ ಸದಾಶಿವ ವೈದ್ಯನು ಬಳಸುತ್ತಿದ್ದು ಅಲ್ಲದೇ ನಕಲಿ ಠೇವಣಿ ಖಾತೆ, ಉಳಿತಾಯ ಖಾತೆ, ಸಾಲದ ಖಾತೆಗಳು ಆರೋಪಿ ಸದಾಶಿವ ವೈದ್ಯನ ಸಂಬಂಧಿಕರಿಗೆ ಸೇರಿದ ಖಾತೆಯ ಮೂಲಕ ಸಂಘದ ಹಣ ಪಡೆದುಕೊಂಡಿದ್ದಾರೆ.
ಅಂಪಾರು ಸಹಕಾರಿ ವ್ಯವಸಾಯಿಕ ಸಂಘ (ನಿ) ಅಂಪಾರು ಇದರ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ (48) ಅವರಿಗೆ ಸಂಸ್ಥೆಯ ನಿರಖು ಠೇವಣಿ ಕುಳುವಾರು ಪರಿಶೀಲನೆಯ ಸಮಯ ಈ ಮಾಹಿತಿ ತಿಳಿದು ಬಂದಿದೆ.
ಆರೋಪಿ ಸದಾಶಿವ ವೈದ್ಯನು ಸಂಸ್ಥೆ ಮತ್ತು ಗ್ರಾಹಕರಿಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಪಾಸ್ ವರ್ಡ್ ಸೃಷ್ಟಿಸಿ ಒಟ್ಟು 3,95,65,000/-ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿರುತ್ತಾನೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ 314, 228, 316(4), 316(5), 319(1), 319(2), 318(2), 318(3), 318(4) BNS ರಂತೆ ಪ್ರಕರಣ ದಾಖಲಾಗಿದೆ.
