Screenshot_2026-01-02-17-32-51-977_com-1024x843.jpg
Spread the love

ದಿನಾಂಕ:02-01-2026 (ಹಾಯ್ ಉಡುಪಿ ನ್ಯೂಸ್)

ಮಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯ ದೇಹ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಯಾಗಿಸಿ ಈಗ ಮಗು ಮತ್ತು ಯುವತಿಯನ್ನು ಸ್ವೀಕರಿಸಲು ನಿರಾಕರಿಸುತ್ತಿರುವ ಆರೋಪಿ ವಂಚಕ      ಕೃಷ್ಣ  ಜೆ. ರಾವ್ ನ ಜಾಮೀನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್‌ ಕ್ಲಬ್‌ ನಲ್ಲಿ  ಅನ್ಯಾಯಕ್ಕೊಳಗಾದ ಯುವತಿ ಪೂಜಾ ಮತ್ತು ಆಕೆಯ ಕುಟುಂಬದೊಂದಿಗೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣ  ಜೆ. ರಾವ್ ಎಂಬುದು ಸಾಬೀತಾಗಿದೆ.

ಆದರೂ ಆತ ಮದುವೆಗೆ ಒಪ್ಪುತ್ತಿಲ್ಲ. ಸಂಧಾನದ ಹೆಸರಿನಲ್ಲಿ 50 ಲಕ್ಷ  ರೂ ಹಣ ನೀಡಿ ಪ್ರಕರಣ ಸುಖಾಂತ್ಯ ಗೊಳಿಸಲು ಮುಂದಾಗಿದ್ದಾರೆ. ಆದರೆ ನಮಗೆ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಯಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದರು. ಸಂತ್ರಸ್ತೆಗೆ ನ್ಯಾಯ ಒದಗಿಸಲು ಜನವರಿ 24 ರಂದು ಕಲ್ಲಡ್ಕದಲ್ಲಿ ಮಗುವಿನ ನಾಮಕರಣ ಶಾಸ್ತ್ರವನ್ನು  ಪ್ರತಿಭಟನಾತ್ಮಕವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದರು .

ಕರಾವಳಿಯ ನಾಯಕರು ಒಗ್ಗಟ್ಟಿನ ಬಗ್ಗೆ   ಮಾತನಾಡುತ್ತಾರೆಯೇ ಹೊರತು ಇಂತಹ ಸಂತ್ರಸ್ತರಿಗೆ  ನೆರವಾಗುತ್ತಿಲ್ಲ. ಹಾಗಾಗಿ ಸಂಘಟನಾತ್ಮಕ ಶಕ್ತಿ ಕೇಂದ್ರವಾಗಿರುವ ಕಲ್ಲಡ್ಕ ದಿಂದಲೇ ನಾವು ಹೋರಾಟ ಆರಂಭಿಸುತ್ತಿದ್ದೇವೆ ಎಂದು ಅವರು ಹೇಳಿದರು. ಆರೋಪಿಯ ಕಡೆಯವರು ಸಂಧಾನದ ವೇಳೆ ಅಮಾನವೀಯ ಷರತ್ತುಗಳನ್ನು ವಿಧಿಸಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು, ನಂತರ ಮದುವೆಯಾಗಿ ವಿಚ್ಛೇದನ ನೀಡಲಾಗುವುದು ಎಂಬ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಆರೋಪಿ ಮದುವೆಯಾಗಿ ಮನೆ ಅಳಿಯನಾಗಿ ಬರುವುದಾದರೆ ನಾನೇ 50 ಲಕ್ಷ ರೂ. ನೀಡುತ್ತೇನೆ ಎಂದು ಪ್ರತಿಭಾ ಕುಳಾಯಿ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಯುವತಿ ಮತ್ತು ಆಕೆಯ ತಾಯಿ ಉಪಸ್ಥಿತರಿದ್ದರು.

error: No Copying!