ಉಡುಪಿ: ದಿನಾಂಕ:01-01-2026 (ಹಾಯ್ ಉಡುಪಿ ನ್ಯೂಸ್) ದೊಡ್ಡಣಗುಡ್ಡೆ ಪರಿಸರದಲ್ಲಿ ಅಟೋ ರಿಕ್ಷಾದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ ಕಂಕಣವಾಡಿ ಅವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ್ ಕಂಕಣವಾಡಿ ಅವರು ದಿನಾಂಕ:30-12-2025 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ KA-20-AC-5863 ನೇ ನಂಬ್ರದ ಆಟೋರಿಕ್ಷಾದಲ್ಲಿ ಇಬ್ಬರು ಯುವಕರು ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಅವರಿಗೆ ಗುಪ್ತ ಮಾಹಿತಿ ದೊರೆತಿದ್ದು, ಮಾಹಿತಿ ಬಂದಂತೆ ಆಟೋರಿಕ್ಷಾ ಪತ್ತೆಯ ಬಗ್ಗೆ ಠಾಣೆಯ ಸರಹದ್ದಿನಲ್ಲಿ ಅವರು ಸಿಬ್ಬಂದಿ ಗಳೊಂದಿಗೆ ಸಂಚರಿಸಿ ರಿಕ್ಷಾದ ಹುಡುಕಾಟ ನಡೆಸಿದ್ದು, ನಂತರ ಗುಂಡಿಬೈಲು ಮಾರ್ಗವಾಗಿ ದೊಡ್ಡಣಗುಡ್ಡೆ ಹೋಗುವಾಗ ದೊಡ್ಡಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಬಳಿ ದಿನಾಂಕ 31/12/2025 ರಂದು ತಡರಾತ್ರಿ ಮಾಹಿತಿ ಬಂದ ಆಟೋರಿಕ್ಷಾ ಪತ್ತೆಯಾಗಿದ್ದು, ನಂತರ ಆಟೋರಿಕ್ಷಾವನ್ನು ಹಿಂಬಾಲಿಸಿಕೊಂಡು ಹೋದಾಗ ಆಟೋರಿಕ್ಷಾ ಶಿವಳ್ಳಿ ಗ್ರಾಮದ ಕರಂಬಳ್ಳಿ ರಾಮಬೆಟ್ಟು ಕಡೆ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗಿದ್ದು, ಪೊಲೀಸರು ಹಿಂಬಾಲಿಸಿಕೊಂಡು ರಿಕ್ಷಾದ ಹತ್ತಿರ ಸಮೀಪಿಸಿದಾಗ ರಿಕ್ಷಾ ಚಲಾಯಿಸುತ್ತಿದ್ದ ಚಾಲಕನು ಖಾಲಿ ಜಾಗವೊಂದರಲ್ಲಿ ಆಟೋರಿಕ್ಷಾವನ್ನು ನಿಲ್ಲಿಸಿದ್ದು ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಓಡಿ ಹೋಗಿರುತ್ತಾನೆ.
ಪೊಲೀಸರು ನಂತರ ಚಾಲಕನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನು ತನ್ನ ಹೆಸರು ಅಬ್ದುಲ್ ರೌಫ್ ಎಂಬುದಾಗಿ ಹೇಳಿದ್ದು, ತಾನು ಆಟೋರಿಕ್ಷಾದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸ್ನೇಹಿತ ಮೊಹಮ್ಮದ್ ಅಫಾನ್ ಒಟ್ಟಿಗೆ ಸೇರಿ ನಿಷೇಧಿತ ಮಾದಕ ವಸ್ತು MDMA ಯನ್ನು ಆಟೋದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟಮಾಡುತ್ತಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಯ ಆಟೋರಿಕ್ಷಾವನ್ನು ಪೊಲೀಸರು ಶೋಧನೆ ಮಾಡಿದಾಗ ಅದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ1) ತಲಾ 2.53 ಗ್ರಾಂ ತೂಕದ ಕವರ್ ಸಮೇತ ಒಟ್ಟು 7.59 ಗ್ರಾಂ ತೂಕದ MDMA ಅಂದಾಜು ಮೌಲ್ಯ 15,000/- ರೂಪಾಯಿ, 2) MDMA ನ್ನು ಮಾರಾಟ ಮಾಡಿ ಗಳಿಸಿದ್ದ 3100/- ರೂಪಾಯಿ ,3) KA-20-AC-5863 ನೇ ನಂಬ್ರದ ಕಪ್ಪು-ಹಳದಿ ಬಣ್ಣದ ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: (U/s-8(c),22(b)) NDPS ರಂತೆ ಪ್ರಕರಣ ದಾಖಲಾಗಿದೆ.
