IMG_20251228_155649-1024x1024.jpg
Spread the love

ದಿನಾಂಕ:28-12-2025 (ಹಾಯ್ ಉಡುಪಿ ನ್ಯೂಸ್)

ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆಪ್ಟೆಂಬರ್ 27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಆತ್ರಾಡಿ ನಿವಾಸಿ ಸೈಫ್ ಯಾನೆ ಸೈಪುದ್ದೀನ್  ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ(ಸೆಕ್ಷನ್ 3 ಕೋಕಾ ಆ್ಯಕ್ಟ್)ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಈ ಪ್ರಕರಣದ ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ಬಳಿ ನಿವಾಸಿ ಮಹಮ್ಮದ್ ಫೈಸಲ್ ಖಾನ್(27), ಕರಂಬಳ್ಳಿಯ ಮೊಹಮದ್ ಶರೀಫ್(37), ಕೃಷ್ಣಾಪುರದ ಅಬ್ದುಲ್ ಶುಕುರ್(43), ಫೈಸಲ್ ಖಾನ್ ಪತ್ನಿ ರಿಧಾ ಶಭನಾ(27), ಮಾಲಿ ಮೊಹಮ್ಮದ್ ಸಿಯಾನ್(31) ಎಂಬವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 3 ಕೋಕಾ ಕಾಯಿದೆಯನ್ನು ತಲೆಮರೆಸಿಕೊಂಡ ಆರೋಪಿ ಸೇರಿದಂತೆ ಎಲ್ಲಾ 6 ಆರೋಪಿಗಳ ವಿರುದ್ಧವೂ ಅಳವಡಿಸಲಾಗಿದೆ. ಯಾವುದೇ ಪ್ರಕರಣಕ್ಕೆ ಸೆಕ್ಷನ್ 3 ಕೋಕಾ ಕಾಯಿದೆಯನ್ನು ಅಳವಡಿಸಿದಾಗ ಆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

error: No Copying!