gettyimages-2149694496-612x612.jpg
Spread the love

ದಯಾ ಮರಣ…
( Mercy killing )


ದಾವಣಗೆರೆಯಲ್ಲಿ ಕಳೆದ ಮೊನ್ನೆಯ ಆ ಒಂದು ಭಾನುವಾರ…….

ನನ್ನ ಆತ್ಮೀಯ ಮಿತ್ರರು, ಪತ್ರಕರ್ತರು ಆದ ಕರುನಾಡ ಸಮರಸೇನೆ ಸಂಘಟನೆಯ ಶ್ರೀ ಸುರೇಶ್ ಐಗೂರು ಅವರು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆಯ ಜಯದೇವ ವೃತ್ತದ ಶಿವಯೋಗಿ ಮಂದಿರದ ಹೊರಾಂಗಣದಲ್ಲಿ ಎರಡು ಜೋಡಿಗಳ ಉಚಿತ ಸಾಮೂಹಿಕ ಸರಳ ಮಂತ್ರ ಮಾಂಗಲ್ಯ ವಿವಾಹವನ್ನು ಏರ್ಪಡಿಸಿದ್ದರು. ಮಂತ್ರ ಮಾಂಗಲ್ಯದ ನೀತಿ ಬೋಧನೆಗೆ ನನ್ನನ್ನು ಮತ್ತು ಪ್ರಾರ್ಥನೆಯ ನಾಡಗೀತೆಗೆ ಶ್ರೀ ವಚನ ಉಮೇಶ್ ಅವರನ್ನು, ನಿರೂಪಣೆಗೆ ಶ್ರೀ ರೂಪೇಶ್ ಪುತ್ತೂರು ಅವರನ್ನು ಹಾಗೂ ಆಹಾರ ನೀತಿ ಸಮಿತಿ ಬೋಧನೆಗೆ ಶ್ರೀ ಎಂ ಯುವರಾಜ್ ಅವರನ್ನು ಆಹ್ವಾನಿಸಿದ್ದರು.

ಅಂದು ರೈಲಿನಲ್ಲಿ ಪ್ರಯಾಣ ಬೆಳೆಸಿ ಬೆಳಗಿನಜಾವ ಐದು ಗಂಟೆಗೆ ಪ್ರವಾಸಿ ಮಂದಿರ ತಲುಪಿ, ಸಿದ್ದರಾಗಿ, ಮತ್ತೊಬ್ಬ ಆತ್ಮೀಯ ಗೆಳೆಯರು ಮತ್ತು ಶಿಕ್ಷಕರಾದ ಶ್ರೀ ಜಯಪ್ಪ ಅವರೊಂದಿಗೆ ನೇರವಾಗಿ ಕೊಟ್ಟೂರೇಶ್ವರ ಹೋಟೆಲ್ಲಿನ ಬಿಸಿ ಬಿಸಿ, ಗರಿಗರಿ ಬೆಣ್ಣೆ ದೋಸೆ ಸವಿದೆವು.

ನನ್ನ ಲೇಖನಗಳನ್ನು ಓದಿ ಮೆಚ್ಚಿ ಆಗಾಗ ನನ್ನನ್ನು ತಾಯಿ ಮಮತೆಯಿಂದ, ಪ್ರೀತಿಯಿಂದ ಮಾತನಾಡಿಸುತ್ತಿದ್ದ ದಾವಣಗೆರೆಯ ನಿವೃತ್ತ ಶಿಕ್ಷಕಿಯೂ, ದಯಾಮರಣದ ಪರವಾಗಿ ಸುಪ್ರೀಂಕೋರ್ಟ್ ವರೆಗೆ ಹೋಗಿ ನ್ಯಾಯಾಂಗ ಹೋರಾಟ ಮಾಡಿ ಯಶಸ್ವಿಯಾದ ಶ್ರೀ ಕರಿಬಸಮ್ಮನವರು ಆಗಾಗ ದಾವಣಗೆರೆಗೆ ನನ್ನನ್ನು ಆಹ್ವಾನಿಸುತ್ತದ್ದರು. ಅತ್ಯಂತ ಕಾಳಜಿಯಿಂದ ಒಮ್ಮೆ ನೋಡಲೇಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಿದ್ದರು. ಇದೇ ಸುಸಂದರ್ಭವೆಂದು 86 ವರ್ಷದ ಹಿರಿಯ ಜೀವವನ್ನು ಅವರು ವಾಸವಾಗಿರುವ ಆಶ್ರಮದಲ್ಲಿ ನಾವು ಗೆಳೆಯರೆಲ್ಲ ಸೇರಿ ಭೇಟಿ ಮಾಡಿದೆವು.

ನನಗೆ ಮೊದಲಿನಿಂದಲೂ ದಯಾ ಮರಣದ ಬಗ್ಗೆ ಅಂತಹ ಒಲವೇನು ಇಲ್ಲ. ಏಕೆಂದರೆ ಜೀವವೊಂದು ಸಹಜವಾಗಿಯೇ ಇಲ್ಲಿಂದ ತೆರಳಬೇಕು. ಅಲ್ಲಿಯವರೆಗೂ ಅದನ್ನು ನೋಡಿಕೊಳ್ಳುವುದು, ಉಳಿಸಿಕೊಳ್ಳುವುದು ಅವರ ರಕ್ತ ಸಂಬಂಧಿಗಳದ್ದು, ಹತ್ತಿರದ ಸಂಬಂಧಿಗಳದ್ದು, ಆತ್ಮೀಯ ಸ್ನೇಹಿತರದ್ದು, ಹಿತೈಷಿಗಳದ್ದು, ಅವರು ವಾಸಿಸುವ ಸಮಾಜದ್ದು, ಸರ್ಕಾರದ್ದು, ಸ್ವಯಂ ಸೇವಾ ಸಂಸ್ಥೆಗಳದ್ದು, ವೈದ್ಯಕೀಯ ಲೋಕದ್ದು ಆಗಿರಬೇಕು ಎಂಬುದು ನನ್ನ ವೈಯಕ್ತಿಕ ನಿಲವು. ಅದಕ್ಕಾಗಿಯೇ ಆ ಬಗ್ಗೆ ಹೆಚ್ಚು ಆಸಕ್ತನಾಗಿರಲಿಲ್ಲ.

ಆದರೆ ಅವರ ಪ್ರೀತಿಪೂರ್ವಕ ಒತ್ತಾಯದಿಂದ ಒಮ್ಮೆ ಆ ವಿಷಯವನ್ನು ಪರಿಶೀಲಿಸೋಣ ಎಂದು ಅವರನ್ನು ಭೇಟಿ ಮಾಡಿದೆ. ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸಿದರು. ಅವರನ್ನು ಸಂದರ್ಶನ ಮಾಡಿದ್ದೇನೆ. ಅದು ನನ್ನ ಫೇಸ್ ಬುಕ್ ನಲ್ಲಿ ಇದೆ.

ದಯಾಮರಣ ಏಕೆ ಅವಶ್ಯಕತೆ ಇದೆ ಎಂಬುದನ್ನು ಅವರು ಅವರದೇ ಮಾತು ಮತ್ತು ಅನುಭವದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದೆಲ್ಲವನ್ನು ಕೇಳಿಸಿಕೊಂಡ ನಂತರ ದಯಾಮರಣ ಅತ್ಯಂತ ಕೊನೆಯ ಅಸ್ತ್ರವಾಗಬೇಕು. ಜೊತೆಗೆ ವೈದ್ಯಕೀಯ ಲೋಕ ಅದನ್ನು ತುಂಬಾ ಸ್ಪಷ್ಟವಾಗಿ ಖಚಿತಪಡಿಸಬೇಕು. ಯಾವುದೇ ದುರುಪಯೋಗವಾಗುವ ಯಾವ ಸಾಧ್ಯತೆಯೂ ಇಲ್ಲವಾಗಬೇಕು. ಒಂದು ವೇಳೆ ಸಣ್ಣ ತಪ್ಪಾದರೂ ಅದನ್ನು ಕೊಲೆ ಎಂದೇ ಪರಿಗಣಿಸಬೇಕು ಎಂಬ ಖಚಿತ ನಿಲುವು ನನ್ನದು. ಈ ಮಾನದಂಡಗಳನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಏಕೆಂದರೆ ನನ್ನ ವೈಯಕ್ತಿಕ ಅಭಿಪ್ರಾಯ ದಯ ಮರಣದ ಪರವಾಗಿ ಇಲ್ಲದಿದ್ದರೂ ಸಾರ್ವತ್ರಿಕ ಹಿತದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಬೇಕಾದ ಸಂದರ್ಭ ಮತ್ತು ಅನಿವಾರ್ಯವಾದರೆ ನೀತಿ ನಿಯಮಗಳು ಕಠಿಣವಾಗಿರಬೇಕು.

ಏನೇ ಆಗಲಿ ಆ ಹಿರಿಯ ಜೀವ ಗುಬ್ಬಚ್ಚಿಯಂತ ಸಣ್ಣ ದೇಹವನ್ನು ಇಟ್ಟುಕೊಂಡು, ಸಾಕಷ್ಟು ಖಾಯಿಲೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು, ಒಂದು ನಿರ್ದಿಷ್ಟ ಉದ್ದೇಶದಿಂದ ಹೋರಾಡುತ್ತಿರುವುದು ಛಲದಂಕಮಲ್ಲರಿಗೆ ಒಂದು ಸ್ಪೂರ್ತಿದಾಯಕ.

ಅವರು ನನ್ನ ಬಳಿ ಅವರ ಮನದಾಳದ ಒಂದು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ಪೂರೈಸಲು ಪ್ರಯತ್ನಿಸುತ್ತೇನೆ.

ಹಾಗೆಯೇ ಕಳೆದ 35 ವರ್ಷಗಳಿಂದ ಸತತವಾಗಿ ಹಿಮೋಫಿಲಿಯಾ ( ಕುಸುಮ ರೋಗ ) ಖಾಯಿಲೆಯ ವಿರುದ್ಧ ಹೋರಾಡುತ್ತಿರುವ ಡಾ. ಸುರೇಶ್ ಹನಗವಾಡಿ ಅವರನ್ನು ಅವರ ಸಂಸ್ಥೆಯಲ್ಲಿಯೇ ಭೇಟಿಯಾದೆವು. ಕುಸುಮ ರೋಗ ಎಂಬ ಮನುಷ್ಯನ ದೇಹದ ರಕ್ತ ಸಂಚಾರದ ಮೇಲಿನ ನಿಯಂತ್ರಣವಿಲ್ಲದ ಖಾಯಿಲೆ. ಸದಾ ಅಪಾಯಕಾರಿಯಾದದ್ದು. ಭಾರತ ಸರ್ಕಾರ ಘೋಷಿಸಿರುವ 21 ದಿವ್ಯಾಂಗ ಚೇತನರ ಪಟ್ಟಿಯಲ್ಲಿ ಕುಸುಮ ರೋಗಿಗಳು ಸಹ ಇದ್ದಾರೆ. ಇದು ಸಾಮಾನ್ಯವಾಗಿ ಅದೃಶ್ಯ ಖಾಯಿಲೆ. ಅಂದರೆ ಬಹಿರಂಗವಾಗಿ ಕಣ್ಣಿಗೆ ಕಾಣುವುದಿಲ್ಲ. ಸ್ವತಃ ಕುಸುಮ ರೋಗಿಯಾಗಿರುವ ಡಾಕ್ಟರ್ ಸುರೇಶ್ ಹನಗವಾಡಿ ಅವರು ದಾನಿಗಳು ನೀಡಿದ ಜಾಗದಲ್ಲಿ, ಜನರ ಸಹಕಾರದೊಂದಿಗೆ, ಖ್ಯಾತ ಹಾಡುಗಾರರಾದ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಸಹಕಾರದ ನೆರವಿನ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯನ್ನು ಗಟ್ಟಿಗೊಳಿಸುತ್ತಾ ಮುನ್ನಡೆಸುತ್ತಿದ್ದಾರೆ‌. ಆದರೂ ಅವರ ಬೇಡಿಕೆಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಎಲ್ಲಾ 21 ರೀತಿಯಲ್ಲಿ ದಿವ್ಯಾಂಗ ಚೇತನರಿಗೆ ಸರ್ಕಾರದಿಂದ ಸಿಗಬೇಕಾದ, ಸಮಾಜದಿಂದ ಸಿಗಬೇಕಾದ ಸೌಕರ್ಯಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತಿದ್ದಾರೆ.

ಮತ್ತೆ ಕೊನೆಯದಾಗಿ ಕೆಲವೇ ನಿಮಿಷಗಳಷ್ಟು ಸಮಯವನ್ನು ಆಟಿಸಂ ಖಾಯಿಲೆಯವರಿಗಾಗಿ ಶಾಲೆ ಮತ್ತು ಆಸ್ಪತ್ರೆ ನಡೆಸುತ್ತಿರುವ ಡಾಕ್ಟರ್ ಸುಮನಾ ಅವರೊಂದಿಗೆ ಕಳೆದವು. ತನ್ನ ಸ್ವಂತ ಮಗ ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದರೂ, ರಾಷ್ಟ್ರೀಯ ಮಟ್ಟದ ಪ್ರತಿಭಾ ಸ್ಪರ್ಧೆಯಲ್ಲಿ ಅಪಾರ ಪ್ರಶಸ್ತಿಗಳನ್ನು ಪಡೆದಿರುವ ಮಗನಿಗಾಗಿ ಆಟಿಸಂ ಅಧ್ಯಯನ ಮಾಡಿ ಇದೀಗ ನೂರಕ್ಕೂ ಹೆಚ್ಚು ಆಟಿಸಂ ಮಕ್ಕಳ ಶಾಲೆ ನಡೆಸುತ್ತಿದ್ದಾರೆ. ಅವರು ಹೇಳಿದ ಮಾತು ಒಂದಷ್ಟು ಗಮನ ಸೆಳೆಯಿತು. ಈಗ ಕೇವಲ ಕೆಲವರು ಮಾತ್ರ ಆಟಿಸಂಗೆ ಒಳಗಾಗಿಲ್ಲ, ಬಹುತೇಕ ಮೊಬೈಲ್ ಗೀಳಿಗೆ ಬಲಿಯಾಗಿರುವ ಎಲ್ಲಾ ಯುವಸಮೂಹವನ್ನು ಆಟಿಸಂ ಲೆಕ್ಕಕ್ಕೆ ಸೇರಿಸಿಕೊಳ್ಳಬಹುದು. ಏಕೆಂದರೆ ಅವರಿಗೂ ಕೂಡ ಮೊಬೈಲ್ ಹಿಡಿದ ತಕ್ಷಣ ಪ್ರಪಂಚದ ಅರಿವೇ ಇಲ್ಲದೆ, ಸುತ್ತಮುತ್ತಲಿನ ಯಾವುದೇ ಆಗುಹೋಗುಗಳಿಗೆ ಸ್ಪಂದಿಸದೆ, ತಾವೇ ಬುದ್ಧಿಹೀನರಂತೆ ಯಾವುದೋ ಚಟುವಟಿಕೆಗಳಲ್ಲಿ ತೊಡಗಿರುವುದು. ಇದನ್ನು ಕೇಳಿದಾಗ ಹೌದು ಎನಿಸುತ್ತದೆ. ತಮ್ಮ ವಯೋಮಾನಕ್ಕೆ ಅನುಗುಣವಾಗಿ ಯಾವುದೇ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದ ಯುವ ಸಮೂಹ, ಆಟಿಸಂ ಖಾಯಿಲೆ ರೀತಿಯ ಗುಣಲಕ್ಷಣವನ್ನು ಹೊಂದಿರುವುದು ನಿಜಕ್ಕೂ ದುರಂತವೇ ಸರಿ.

ಮಂತ್ರ ಮಾಂಗಲ್ಯದ ಮದುವೆ ಸಂಭ್ರಮದ ಜೋಡಿಗಳು ಮತ್ತು ಅಲ್ಲಿನ ಕನ್ನಡ ಹೋರಾಟಗಾರರ ಸಮ್ಮುಖದಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡು, ಮತ್ತದೇ ಮಾನವೀಯ ಮೌಲ್ಯಗಳ ಕುರಿತಾಗಿ ಚಿಂತಿಸುತ್ತಾ, ಈ ಸಂದರ್ಭದಲ್ಲಿ ಜೊತೆಯಾದ ಆತ್ಮೀಯ ಗೆಳೆಯರಾದ ರಂಗಕರ್ಮಿ ಶ್ರೀ ಸಿದ್ದರಾಜು ಸೊಕ್ಕೆಶೆಟ್ಟರ್, ವಿಶ್ವ ಮಾನವ ಎಂದೇ ಹೆಸರಾದ ಶ್ರೀ ರುದ್ರಮುನಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ದಾವಣಗೆರೆಯಿಂದ ಬೆಂಗಳೂರಿನ ಕಡೆಗೆ ಹೊರಟೆವು.

ಸುರೇಶ ಐಗೂರು ( 93410 46423 ) ಅವರು ಒಂದು ಕಡೆ, ಕರಿಬಸಮ್ಮ ( 94499 74078 ) ಮತ್ತೊಂದು ಕಡೆ, ಡಾ. ಸುರೇಶ್ ಹನಗವಾಡಿ ( 87222 09404 ) ಇನ್ನೊಂದು ಕಡೆ, ಡಾಕ್ಟರ್ ಸುಮನ ( 99164 85871 ) ಮಗದೊಂದು ಕಡೆ ಹೀಗೆ ಭಿನ್ನ-ಭಿನ್ನ ವಿಷಯಗಳು, ಭಿನ್ನ ವ್ಯಕ್ತಿಗಳು, ಅವರ ಸಮಾಜಮುಖಿ ಚಟುವಟಿಕೆಗಳು, ಇವರನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಿದ ಆತ್ಮೀಯ ಗೆಳೆಯರಾದ ಶ್ರೀ ವಿಕ್ಟರಿ ವೀರೇಶ್ ಅವರು, ಇದಕ್ಕೆಲ್ಲಾ ವೇದಿಕೆ ಮತ್ತು ಸಂಪರ್ಕ ಕಲ್ಪಿಸುವ ಸಾಮಾಜಿಕ ಜಾಲತಾಣಗಳೆಂಬ ಮಾಯಾಲೋಕ, ಹೀಗೆ ಬದುಕಿನ ಪಯಣದಲ್ಲಿ ಜೊತೆಯಾಗುತ್ತಾ ಸಾಗೋಣ. ಇಲ್ಲಿ ಕಳೆದುಕೊಳ್ಳುವುದು ಏನು ಇಲ್ಲ, ಎಲ್ಲವನ್ನು ಪಡೆದುಕೊಳ್ಳುವುದೇ. ಸಾಕು ಸಾಕು ಎನ್ನೋಣ, ಬೇಕು ಬೇಕು ಎನ್ನುವುದನ್ನು ಕಡಿಮೆ ಮಾಡಿಕೊಳ್ಳೋಣ…. ಧನ್ಯವಾದಗಳು

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!