Statue_of_Mahatma_Gandhi_at_Kottayam.jpg
Spread the love

ಮಹಾತ್ಮ ಗಾಂಧಿಯವರು ತಾವೇ ಅತ್ಯಂತ ನೇರವಾಗಿ, ಪಾರದರ್ಶಕವಾಗಿ, ಧೈರ್ಯವಾಗಿ, ಸತ್ಯವಾಗಿ ಬರೆದುಕೊಂಡ ಬ್ರಹ್ಮಚರ್ಯೆ ಎಂಬ ಖಾಸಗಿ ಆತ್ಮನಿಗ್ರಹ ಪ್ರಯೋಗವನ್ನು ಕೆಲವು ಗಾಂಧಿಯ ವಿರೋಧಿಗಳು ಅವರನ್ನು ಒಬ್ಬ ವಿಕೃತಕಾಮಿಯಂತೆ ಚಿತ್ರಿಸುತ್ತಿರುವುದು, ಬಣ್ಣಿಸುತ್ತಿರುವುದು ಅಷ್ಟೇನೂ ಉತ್ತಮ ಬೆಳವಣಿಗೆಯಲ್ಲ. ಗಾಂಧಿ ನೆನಪಾಗಬೇಕಾಗಿರುವುದು ತಮ್ಮ ಗುಪ್ತಾಂಗದ ವಿಷಯಕ್ಕಾಗಿ ಅಲ್ಲ. ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಅದನ್ನು ಹಿಡಿದು ನೇತಾಡುವುದು ಕೂಡ ಒಳ್ಳೆಯದಲ್ಲ…..

ಈ ಸಮಯದಲ್ಲಿ ಒಂದು ಜಾನಪದ ಕಥೆ ನೆನಪಾಗುತ್ತಿದೆ. ಒಮ್ಮೆ ಒಬ್ಬ ಋಷಿಮುನಿಯ ಇಬ್ಬರು ಶಿಷ್ಯಂದಿರು ಧರ್ಮ ಪ್ರಚಾರಕ್ಕಾಗಿ ಊರೂರು ಸುತ್ತಿ ತಮ್ಮ ಕಾರ್ಯ ಪೂರೈಸಿ ಮತ್ತೆ ಆಶ್ರಮಕ್ಕೆ ವಾಪಸ್ಸಾಗುವಾಗ ನದಿಯ ಹೊಳೆ ದಾಟಬೇಕಾದ ಸಂದರ್ಭ ಬರುತ್ತದೆ. ಆಗ ಇನ್ನೇನು ನದಿ ದಾಟಬೇಕೆಂದಿರುವಾಗಲೇ ಅತ್ತ ಕಡೆಯಿಂದ ಕಾಲು ಜಾರಿ ನೀರಿಗೆ ಬಿದ್ದಿದ್ದ ಯುವತಿಯೊಬ್ಬಳು ಕಾಪಾಡಿ, ರಕ್ಷಿಸಿ ಎಂದು ಕೂಗುತ್ತಾ ಹೊಳೆಯ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಕೊಚ್ಚಿಕೊಂಡು ಹೋಗುತ್ತಿರುತ್ತಾಳೆ.

ಆಗ ಒಬ್ಬ ಶಿಷ್ಯ ಆಕೆಯನ್ನು ರಕ್ಷಿಸಲು ಮುಂದಾದಾಗ ಇನ್ನೊಬ್ಬ ಶಿಷ್ಯ ಹೇಳುತ್ತಾನೆ ” ನಾವು ಋಷಿಮುನಿಗಳು. ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದೇವೆ. ಆದ್ದರಿಂದ ಆಕೆಯನ್ನು ಮುಟ್ಟಬಾರದು. ಆಕೆಯನ್ನು ರಕ್ಷಿಸಬೇಡ ” ಎಂದು ಹೇಳುತ್ತಾನೆ. ಆಗ ಮತ್ತೊಬ್ಬ ಈ ಮಾತನ್ನು ಕೇಳಿಸಿಕೊಳ್ಳದೆ ನೀರಿಗೆ ಹಾರಿ ಹಾಗೋ ಹೀಗೋ ಕಷ್ಟಪಟ್ಟು ಆಕೆಯನ್ನು ಎಳೆದು ದಡಕ್ಕೆ ತರುತ್ತಾನೆ.

ಆಕೆಗೆ ಪ್ರಜ್ಞೆ ತಪ್ಪಿರುತ್ತದೆ. ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುತ್ತದೆ. ಆ ಶಿಷ್ಯನಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವಿದ್ದುದರಿಂದ ಹೊಟ್ಟೆಯನ್ನು ಒತ್ತುತ್ತಾ ನೀರನ್ನು ಹೊರ ಚೆಲ್ಲುತ್ತಾನೆ ಹಾಗೂ ಆಕೆಯ ಬಾಯಿಗೆ ಬಾಯಿ ಹಾಕಿ ಉಸಿರಾಟ ಪ್ರಕ್ರಿಯೆಗೆ ಸಹಾಯ ಮಾಡುತ್ತಾನೆ. ಆಕೆಗೆ ಪ್ರಜ್ಞೆ ಬಂದ ನಂತರ ಆಕೆಯನ್ನು ಮನೆಗೆ ತಲುಪಿಸುತ್ತಾನೆ. ನಂತರ ಶಿಷ್ಯರಿಬ್ಬರು ಆಶ್ರಮದ ಕಡೆ ಪ್ರಯಾಣ ಮುಂದುವರಿಸುತ್ತಾರೆ.

ಬ್ರಹ್ಮಚರ್ಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಶಿಷ್ಯ ಇದನ್ನು ನೋಡಿ ಗಾಬರಿಯಾಗಿ ಗುರುಗಳಿಗೆ ಹೇಳುವುದಾಗಿ ತಿಳಿಸಿ ಈತನನ್ನು ಧರ್ಮಭ್ರಷ್ಠನಂತೆ ಕಾಣುತ್ತಾನೆ. ಕೊನೆಗೆ ಆಶ್ರಮಕ್ಕೆ ಮರ‌ಳಿ
ಗುರುಗಳ ದರ್ಶನವಾದಾಗ ಆತ ಅವರಿಗೆ ನಡೆದ ಘಟನೆಯನ್ನೆಲ್ಲಾ ಹೇಳಿ ಈತನನ್ನು ಆಶ್ರಮದಿಂದ ಹೊರ ಹಾಕಲು ಹೇಳುತ್ತಾನೆ. ಆಗ ಆ ಗುರುಗಳು ಹೇಳುತ್ತಾರೆ. ” ಶಿಷ್ಯ, ಪ್ರಾಣ ರಕ್ಷಣೆಯ ಸೇವೆ ಧರ್ಮ ರಕ್ಷಣೆಗಿಂತ ಮುಖ್ಯ. ಬ್ರಹ್ಮಚರ್ಯೆ ರಕ್ಷಣೆಗಿಂತ ಮುಖ್ಯ. ಆಕೆಗೆ ಮರು ಜೀವ ನೀಡಿ ಈತ ಮಹಾನ್ ಮಾನವೀಯ ವ್ಯಕ್ತಿಯಾಗಿದ್ದಾನೆ ಮತ್ತು ಆಕೆಯ ಜೀವ ಉಳಿಸಿ ಆ ವಿಷಯವನ್ನು ಅಲ್ಲಿಯೇ ಮರೆತಿದ್ದಾನೆ. ಆದರೆ ನೀನು ಆಕೆಯನ್ನು ರಕ್ಷಿಸಲೂ ಇಲ್ಲ. ಜೊತೆಗೆ ಆಕೆಯ ನೆನಪುಗಳನ್ನು ಮನದಲ್ಲೇ ಇಟ್ಟುಕೊಂಡು ಇಲ್ಲಿಯವರೆಗೂ ಆಕೆಯ ನೆನಪಿನಲ್ಲೇ ಬಂದು ನಿನ್ನ ಬ್ರಹ್ಮಚರ್ಯೆಯನ್ನು, ಧರ್ಮ ನಿಷ್ಠೆಯನ್ನು ನೀನೇ ಉಲ್ಲಂಘಿಸಿರುವೆ. ಆದ್ದರಿಂದ ಆಶ್ರಮದಿಂದ ಹೊರಹಾಕಬೇಕಾಗಿರುವುದು ಅವನನ್ನಲ್ಲ, ನಿನ್ನನ್ನು ಎಂದು ಅವನನ್ನು ಹೊರ ಹಾಕುತ್ತಾರೆ.

ಅಂದು ಗಾಂಧಿ ಮಾಡಿದ ಸತ್ಯದೊಂದಿಗಿನ ಆತ್ಮನಿಗ್ರಹ ಪ್ರಯೋಗವನ್ನು ಎಲ್ಲಾ ಬಿಟ್ಟು ಈಗಲೂ ಚರ್ಚಿಸುತ್ತಿರುವುದು ವಿಚಿತ್ರವಲ್ಲವೇ. ಇವರುಗಳ ಮೂಲ ಉದ್ದೇಶ ಗಾಂಧಿ ಸರಿ ಇಲ್ಲ ಅಥವಾ ಗಾಂಧಿಯ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನ ಮಾತ್ರ ಅಲ್ಲವೇ. ಗಾಂಧಿ ನಿಜಕ್ಕೂ ನೆನಪಾಗಬೇಕಾಗಿರುವುದು ಅವರ ಸತ್ಯ, ಅಹಿಂಸೆ, ಸರಳತೆ, ನೈತಿಕತೆ, ಸತ್ಯಾಗ್ರಹ, ಹೋರಾಟ, ಉಪವಾಸ, ಸಾಮರಸ್ಯ, ಸಮನ್ವಯ, ಸೌಹಾರ್ದತೆ, ಗ್ರಾಮ ಸ್ವರಾಜ್ಯ ಮುಂತಾದ ವಿಷಯಗಳೇ ಹೊರತು ಯಾವುದೋ ವೈಯಕ್ತಿಕ ವಿಷಯವಲ್ಲ.

ಒಂದು ವೇಳೆ ಗಾಂಧಿಯವರ ಮೇಲಿನ ಈ ಆರೋಪಗಳು ನಿಜವೇ ಆಗಿದ್ದರೂ ಅದೊಂದು ಆ ವ್ಯಕ್ತಿಯ ದೈವಿಕ ಗುಣದ ಪ್ರಯೋಗವೇ ಹೊರತು ಅಶ್ಲೀಲವಲ್ಲ. ಈ ಕ್ಷಣದಲ್ಲಿ ನಿಂತು ಅದನ್ನು ವಿಮರ್ಶಿಸುವಾಗ ಅಶ್ಲೀಲವೆನಿಸಬಹುದೇನೋ ಅಥವಾ ಆ ಹಠಮಾರಿ ಧೋರಣೆ ಅಥವಾ ಪ್ರಯೋಗಬೇಕಿರಲಿಲ್ಲ ಎನಿಸುತ್ತದೆ. ಆದರೆ ನಾವು ಚರ್ಚೆ ಮಾಡಬೇಕಾಗಿರೋದು ಆ ವಿಷಯವಲ್ಲ. ಏಕೆಂದರೆ ಯಾವ ವ್ಯಕ್ತಿಯೂ ಪರಿಪೂರ್ಣರಲ್ಲ.
ನಾವು ಕೂಡ ಎಲ್ಲಾ ತಿಳುವಳಿಕೆಗಳ ನಡುವೆಯೂ ಈ ಕ್ಷಣದಲ್ಲೂ ಅನೇಕ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಅದು ಆತ್ಮಪ್ರಜ್ಞೆ ಇರುವವರಿಗೆ ಮಾತ್ರ ಅರ್ಥವಾಗುತ್ತದೆ.

ಮೂಲತಃ ಬ್ರಹ್ಮಚರ್ಯ ಎಂಬುದೇ ಒಂದು ಧಾರ್ಮಿಕ ನಂಬಿಕೆ ಮತ್ತು ಆಗಿನ ಕರ್ಮಠ ಸಿದ್ಧಾಂತಿಗಳ ನಂಬಿಕೆ ಮಾತ್ರ. ಏಕೆಂದರೆ ಇಡೀ ಜಗತ್ತಿನ ಎಲ್ಲಾ ಜೀವರಾಶಿಗಳು, ಸಸ್ಯಗಳು ಮುಂದುವರಿಯುತ್ತಿರುವುದೇ ಸಂತಾನ ಅಭಿವೃದ್ಧಿಯಿಂದ. ಅದಕ್ಕೆ ಲೈಂಗಿಕ ಕ್ರಿಯೆಯೊಂದೇ ಮಾರ್ಗ. ಪ್ರತಿ ಪ್ರಾಣಿ, ಪಕ್ಷಿ, ಕೀಟಗಳು ಲೈಂಗಿಕ ಕ್ರಿಯೆ ಮುಖಾಂತರವೇ ಮುಂದಿನ ಪೀಳಿಗೆಯನ್ನು ಸೃಷ್ಟಿಸುವುದು. ಅಂದಮೇಲೆ ಅದು ನಿಯಂತ್ರಿತವೋ, ನಿಷೇಧವೋ ಯಾವುದೂ ಅಲ್ಲ.

ನೀರು, ಗಾಳಿ, ಆಹಾರದಂತೆ ಮೈಥುನ ಅಥವಾ ಮಿಲನ ಮಹೋತ್ಸವವೂ ಅತ್ಯಂತ ಸಹಜವಾದದ್ದು. ಪ್ರಾಣಿಗಳಲ್ಲಿ ಅದನ್ನು ಗಮನಿಸಬಹುದು. ಆದರೆ ನಾಗರಿಕ ಸಮಾಜದಲ್ಲಿ ಮನುಷ್ಯ ನಿಯಂತ್ರಣ ಮೀರಬಹುದು ಎಂಬ ಕಾರಣದಿಂದ ಕೌಟುಂಬಿಕ ಚೌಕಟ್ಟಿಗೆ ಒಳಪಡಿಸಲಾಗಿದೆ. ಅಲ್ಲೂ ಕೂಡ ಲೈಂಗಿಕ ಕ್ರಿಯೆಯೇ ನಡೆಯುವುದು.

ಬ್ರಹ್ಮಚರ್ಯೆ ಎಂಬುದೇ ಒಂದು ಅಸ್ವಾಭಾವಿಕ, ಅನೈಸರ್ಗಿಕ ಒತ್ತಡ. ಆದ್ದರಿಂದ ಗಾಂಧಿಯವರ ಬ್ರಹ್ಮಚರ್ಯೆ ಪ್ರಯೋಗವು ಅಷ್ಟೇನು ಉತ್ತಮ ನಡೆಯಲ್ಲ. ಆದರೆ ವ್ಯಕ್ತಿಗತವಾಗಿ ಅವರೇನೋ ಪ್ರಯೋಗಕ್ಕೆ ಒಳಪಡಿಸಿಕೊಂಡರು. ಅದೂ ಸಂಪೂರ್ಣ ಬೆತ್ತಲೆ ಎಂಬುದು ಅನುಮಾನಾಸ್ಪದ. ಈಗ ಅದನ್ನೇ ದೊಡ್ಡದು ಮಾಡಿ ಇಡೀ ಗಾಂಧಿಯ ಮೌಲ್ಯಗಳನ್ನೇ ಅಧ: ಪತನದತ್ತ ಕೊಂಡೊಯ್ಯುತ್ತಿರುವವರು ಈ ದೇಶದ ಮುಂದಿನ ಭವಿಷ್ಯವನ್ನೇ ನಾಶ ಮಾಡುತ್ತಿದ್ದಾರೆ.

ಗಾಂಧಿ ಎಂಬ ನೈತಿಕ ಪ್ರಜ್ಞೆಯ ಜಗತ್ತಿನ ಶ್ರೇಷ್ಠ ಮಾನವ ಜೀವಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಮೂಲಕ ತಮ್ಮ ಬೆನ್ನಿಗೆ, ತಮ್ಮ ಹೃದಯಕ್ಕೆ ತಾವೇ ಚೂರಿ ಹಾಕಿಕೊಂಡು, ಭಾರತದ ಸಾಂಸ್ಕೃತಿಕ ಮೌಲ್ಯಗಳಿಗೆ ಕನ್ನ ಹಾಕುತ್ತಿದ್ದಾರೆ. ಮತ್ತೆ ತಾವು ಈ ಸಮಾಜದಲ್ಲಿ ಮೂಡನಂಬಿಕೆ, ಅಂಧಶ್ರದ್ಧೆ, ಮತಾಂಧತೆಯನ್ನು ಪುನರ್ ಸ್ಥಾಪಿಸಿ ಜನರನ್ನು ಮೂರ್ಖರನ್ನಾಗಿಸಿ, ಅವರನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಪ್ರಯತ್ನವೇ ತುಂಬಾ ಅಪಾಯಕಾರಿ. .

ದಯವಿಟ್ಟು ಪಂಥಗಳಾಚೆ ನಿಂತು ಆತ್ಮವಿಮರ್ಶೆ ಮಾಡಿಕೊಳ್ಳಿ.
ಮಹಾತ್ಮನನ್ನು ದುರಾತ್ಮನನ್ನಾಗಿಸಿದರೆ ಆ ಮಹಾತ್ಮನಿಗೆ ಆಗಬೇಕಾದದ್ದು ಏನು ಇಲ್ಲ, ಆಗುವುದೆಲ್ಲಾ ನಮಗೇ ಎಚ್ಚರಿಕೆ ಇರಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!