ಬ್ರಹ್ಮಾವರ: ದಿನಾಂಕ:26-10-2025 (ಹಾಯ್ ಉಡುಪಿ ನ್ಯೂಸ್) ಬಾರ್ಕೂರು ನಿವಾಸಿ ಮಹಿಳೆಯರೀರ್ವರಿಗೆ ಕೌಶಲ್ಯ ಎಂಬವರು PMEGP ಯೋಜನೆಯಲ್ಲಿ ಸಬ್ಸಿಡಿ ಸಾಲ ದೊರಕಿಸಿ ಕೊಡುವುದಾಗಿ ನಂಬಿಸಿ ಸುಮಾರು ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾರ್ಕೂರು ಹೇರಾಡಿ ನಿವಾಸಿ ಸರಿತಾ ಲೂವಿಸ್ (ಪ್ರಾಯ 39) ಎಂಬವರಿಗೆ ನವೆಂಬರ್ 2023 ರಲ್ಲಿ ಅಂಜಲಿನ್ ಡಿಸಿಲ್ವಾ ಎಂಬವರಿಂದ 1ನೇ ಆರೋಪಿ ಕೌಶಲ್ಯ ಎಂಬವರು ಪರಿಚಯವಾಗಿ ಸರಿತಾ ಲೂವಿಸ್ ರವರಿಗೆ PMEGP ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದು ಸರಿತಾ ಲೂವಿಸ್ ರವರು ಬೇಡ ಎಂದರೂ ಆರೋಪಿ ಕೌಶಲ್ಯಳು ಒತ್ತಾಯದಿಂದ ನಂಬಿಸಿ ಒಪ್ಪಿಸಿರುತ್ತಾರೆ ಎನ್ನಲಾಗಿದೆ .
ನಂತರದ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಕಟ್ಟಬೇಕು ಎಂದು ಹೇಳಿದ್ದು, ಅದರಂತೆ ಸರಿತಾ ರವರಿಂದ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬವರಿಗೆ ನಗದು ರೂಪದಲ್ಲಿ ಒಟ್ಟು 80,72,000/- ರೂಪಾಯಿ ಹಣ ನೀಡಿರುತ್ತಾರೆ ಎನ್ನಲಾಗಿದೆ.
ಆರೋಪಿ ಕೌಶಲ್ಯ ಳು ಸರಿತಾ ಲೂವಿಸ್ ರವರ ಸಂಬಂಧಿ ಅಂಜಲಿನ್ ಡಿಸಿಲ್ವಾ ರವರಿಗೂ ಕೂಡಾ PMEGP ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಹಂತ ಹಂತವಾಗಿ ಮೇಲೆ ತಿಳಿಸಿದ ವ್ಯಕ್ತಿಗಳಿಗೆ 65,00,000/- ರೂಪಾಯಿ ನಗದು ಹಣವನ್ನು ನೀಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 318(2),318(4), 319 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ..
