ಉಡುಪಿ : ದಿನಾಂಕ:21-10-2025(ಹಾಯ್ ಉಡುಪಿ ನ್ಯೂಸ್)ಶಿರಿಬೀಡು ನಿವಾಸಿ ವಯೋವೃದ್ಧ ರೋರ್ವರಿಗೆ ಮಹಿಳೆಯೋರ್ವರು ಮನೆಯನ್ನು ಮಾರಾಟ ಮಾಡುವುದಾಗಿ ನಂಬಿಸಿ ಮುಂಗಡ ಹಣ ಪಡೆದು ಆ ನಂತರ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಿ ಮುಂಗಡ ಹಣವನ್ನು ವಾಪಸ್ ನೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಸ್ ಗೋಪಾಲ ಶೆಟ್ಟಿಗಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಿರಿಬೀಡು ನಿವಾಸಿ ಎಸ್ ಗೋಪಾಲ ಶೆಟ್ಟಿಗಾರ್, ಪ್ರಾಯ : 73 ವರ್ಷ ಎಂಬವರು ಹಾಗೂ ಆರೋಪಿ ಕಾಂಚನ ಕಾಮತ್ ಎಂಬವರ ನಡುವೆ ದಿನಾಂಕ :11-03-2014 ರಂದು ಆರೋಪಿ ಕಾಂಚನ ಕಾಮತ್ ರ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲು ವಾರ್ಡಿನ ಸೀಮಾ ಕಾಂಪ್ಲೆಕ್ಸ ನ 1ನೇ ಮಹಡಿಯಲ್ಲಿರುವ ಮನೆ ನಂಬ್ರ 1-4-46ಕೆ2 ಆಸ್ತಿ ಖರೀದಿಗೆ 6 ಲಕ್ಷ ರೂಪಾಯಿಗಳಿಗೆ ಒಡಂಬಡಿಕೆಯಾಗಿರುತ್ತದೆ ಎನ್ನಲಾಗಿದೆ.
ಎಸ್ . ಗೋಪಾಲ ಶೆಟ್ಟಿಗಾರ್ ರವರು ಮುಂಗಡವಾಗಿ 2 ಲಕ್ಷ ರೂಪಾಯಿ ಹಣವನ್ನು ಆರೋಪಿ ಕಾಂಚನ ಕಾಮತ್ ಗೆ ನೀಡಿದ್ದು, ಉಳಿದ 4 ಲಕ್ಷ ಹಣವನ್ನು ನೋಂದಣಿ ಮಾಡುವ ಸಮಯ ನೀಡಲು ಒಪ್ಪಂದವಾಗಿರುತ್ತದೆ ಹಾಗೂ ಈ ಕ್ರಿಯೆಯು ಮುಗಿಯಲು ಎಸ್ ಗೋಪಾಲ ಶೆಟ್ಟಿಗಾರ್ ರವರು ಆರೋಪಿ ಕಾಂಚನ ಕಾಮತ್ ಗೆ ಒಂದು ವರ್ಷ ಸಮಯಾವಕಾಶವನ್ನು ನೀಡಿರುತ್ತಾರೆ. ಆದರೆ ಆರೋಪಿ ಕಾಂಚನ ಕಾಮತ್ ರು ಎಸ್ ಗೋಪಾಲ ಶೆಟ್ಟಿಗಾರ್ ರಿಗೆ ಒಂದು ವರ್ಷ ಕಳೆದರೂ ಅವರ ಹೆಸರಿಗೆ ಆಸ್ತಿಯನ್ನು ನೋಂದಣಿ ಮಾಡಿಕೊಡದೇ ಸತಾಯಿಸಿದ್ದು, ದಿನಾಂಕ :05/07/2017 ರಂದು ಪುನಃ ಎಸ್ ಗೋಪಾಲ ಶೆಟ್ಟಿಗಾರ್ ರು ಹಾಗೂ ಆರೋಪಿ ಕಾಂಚನ ಕಾಮತ್ ರ ನಡುವೆ ಮರು ಒಡಂಬಡಿಕೆಯಾಗಿರುತ್ತದೆ ಇದರ ಪ್ರಕಾರ ಆರೋಪಿ ಕಾಂಚನ ಕಾಮತ್ ಆಸ್ತಿಯ ಮೇಲೆ ಪಡೆದಿದ್ದ ಬ್ಯಾಂಕ್ ಸಾಲವನ್ನು ತೀರಿಸಿ ಎಸ್ ಗೋಪಾಲ ಶೆಟ್ಟಿಗಾರ್ ರಿಗೆ ಒಂದು ತಿಂಗಳಿನೊಳಗೆ ನೋಂದಣಿ ಮಾಡಿಕೊಡುವಂತೆ ಒಪ್ಪಂದವಾಗಿರುತ್ತದೆ. ಒಂದು ತಿಂಗಳು ಕಳೆದರೂ ಆರೋಪಿ ಕಾಂಚನ ಕಾಮತ್ ರು ಎಸ್.ಗೋಪಾಲ ಶೆಟ್ಟಿಗಾರ್ ರಿಗೆ ಆಸ್ತಿ ನೋಂದಣಿ ಮಾಡಿರುವುದಿಲ್ಲ. ದಿನಾಂಕ : 06/02/2021 ರಂದು ಎಸ್.ಗೋಪಾಲ ಶೆಟ್ಟಿಗಾರ್ ರು ಹಾಗೂ ಆರೋಪಿ ಕಾಂಚನ ಕಾಮತ್ ರ ನಡುವೆ ಪುನಃ ಮರು ಒಡಂಬಡಿಕೆಯಾಗಿದ್ದು, ಇದರ ಪ್ರಕಾರ ಆರೋಪಿ ಕಾಂಚನ ಕಾಮತ್ ಆಸ್ತಿಯ ಮೇಲಿನ ಸಾಲವನ್ನು ದಿನಾಂಕ : 30/06/2025 ರೊಳಗೆ ಪಾವತಿಮಾಡಿ ನೋಂದಣಿ ಮಾಡಿಕೊಡಬೇಕೆಂದು ಒಪ್ಪಂದವಾಗಿರುತ್ತದೆ. ಜೂನ್ -2025 ರಂದು ಎಸ್ ಗೋಪಾಲ ಶೆಟ್ಟಿಗಾರ್ ರಿಗೆ ಬಂದ ಬಲ್ಲಮೂಲಗಳ ಪ್ರಕಾರ ಆರೋಪಿ ಕಾಂಚನ ಕಾಮತ್ ರು ದಿನಾಂಕ : 04/10/2017 ರಂದು ಆಸ್ತಿಯನ್ನು ಶದಕುತುಲ್ಲಾ ಅಬ್ಬಾಸ್ ಬ್ಯಾರಿ ಎಂಬುವವರಿಗೆ ಉಡುಪಿ ಸಬ್ ರಿಜಿಸ್ಟರ್ ನಲ್ಲಿ ದಾಖಲೆ ಸಂಖ್ಯೆ 6093/2017-18 ರಂತೆ ಮಾರಾಟ ಮಾಡಿರುವುದು ಕಂಡು ಬಂದಿದ್ದು, ಇದರ ಬಗ್ಗೆ ಎಸ್ ಗೋಪಾಲ ಶೆಟ್ಟಿಗಾರ್ ರವರು ಆರೋಪಿ ಕಾಂಚನ ಕಾಮತ್ ರನ್ನು ವಿಚಾರಿಸಲು ಮನೆಗೆ ಹೋದಾಗ “ ನನ್ನ ಗಂಡ ರೌಡಿ ಇದ್ದು ಈಗಾಗಲೇ 10-18 ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ನಿನ್ನನ್ನು ಕೊಲ್ಲಲು ಹೇಸುವುದಿಲ್ಲ ಹಾಗೂ ನೀನು ನೀಡಿದ ಹಣವನ್ನು ನಿನಗೆ ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ u/s 316(1) 316(2) 318(1) 318(2) 318(4) 351(2) 352 BNS ರಂತೆ ಪ್ರಕರಣ ದಾಖಲಾಗಿದೆ.
