ದಿನಾಂಕ:02-10-2025(ಹಾಯ್ ಉಡುಪಿ ನ್ಯೂಸ್)
ಜಗತ್ ಪ್ರಸಿದ್ಧ ಆಕರ್ಷಣೆ ಜಂಬೂ ಸವಾರಿಯೊಂದಿಗೆ ಮೈಸೂರು ದಸರಾಗೆ ಇಂದು ತೆರೆ ಬಿದ್ದಿದ್ದು ನವರಾತ್ರಿ ಸಂಭ್ರಮ, ಸಡಗರಗಳೊಂದಿಗೆ ಸಂಪನ್ನವಾಗಿದೆ.
ಸಂಜೆ 4.42ರಿಂದ 5.06 ವರೆಗಿನ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ, ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಂಡಿತು.
ಜಂಬೂ ಸವಾರಿಗೆ ಚಾಲನೆ ನೀಡಿದ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಯದುವೀರ್ ಒಡೆಯರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 6ನೇ ಬಾರಿಗೆ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ್ದು ಈ ಬಾರಿಯ ಮೈಸೂರು ದಸರಾ ಉತ್ಸವದ ವಿಶೇಷವಾಗಿತ್ತು. ಇದಕ್ಕೂ ಮೊದಲು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು.
ಇನ್ನು ಜಂಬೂ ಸವಾರಿಯ ಜೊತೆಗೆ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. 58 ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಿದ್ದು, 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯಗಳನ್ನು ಪ್ರದರ್ಶಿಸಿದ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು.
