ಉಡುಪಿ: ದಿನಾಂಕ: 11-09-2025(ಹಾಯ್ ಉಡುಪಿ ನ್ಯೂಸ್) ಪುತ್ತೂರು ಗ್ರಾಮದ ನಿವಾಸಿ ಯುವಕನೋರ್ವನಿಗೆ ಸಾಲದ ಮೇಲಿನ ಹೆಚ್ಚಿನ ಬಡ್ಡಿಯನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಮೂವರು ಯುವಕರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಂಕ 09/09/2025 ರಂದು ಬೆಳಿಗ್ಗೆ ಉಡುಪಿ ಪುತ್ತೂರು ಗ್ರಾಮದ ನಿವಾಸಿ ಜೀವಿತ್ ಕಾರ್ಡೊಜಾ (19) ಎಂಬವರಿಗೆ ಪರಿಚಯವಿರುವ ಅರೋಪಿತರುಗಳಾದ ಕಟಪಾಡಿಯ ಆದರ್ಶ ಆತನ ತಮ್ಮ ಗೌರವ್ ಹಾಗೂ ತರುಣ್ ಎಂಬವರು ಎರಡು ಬುಲೆಟ್ ಬೈಕ್ ನಲ್ಲಿ ಜೀವಿತ್ ಕಾರ್ಡೊಜಾರವರ ಮನೆಗೆ ಬಂದು ಮನೆಯ ಬಾಗಿಲನ್ನು ಬಡಿದಾಗ ಮನೆಯ ಬಾಗಿಲನ್ನು ತೆರೆದ ಜೀವಿತ್ ಕಾರ್ಡೊಜಾರವರ ತಾಯಿಯನ್ನು ಆರೋಪಿತರು ದೂಡಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಜೀವಿತ್ ಕಾರ್ಡೊಜಾರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಇದ್ದ ಜೀವಿತ್ ಕಾರ್ಡೊಜಾರವರನ್ನು ಮನ ಬಂದಂತೆ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿತರನ್ನು ತಡೆಯಲು ಬಂದ ಜೀವಿತ್ ಕಾರ್ಡೊಜಾರವರ ತಂದೆಯನ್ನು ದೂಡಿ ಅವರ ಕೆನ್ನೆಗೆ ಹೊಡೆದರು.
ನಂತರ ಆರೋಪಿತರು ಜೀವಿತ್ ಕಾರ್ಡೊಜಾರವರನ್ನು ನೆಲಕ್ಕೆ ಬೀಳಿಸಿ ಎದೆಗೆ ಬೆನ್ನಿಗೆ ಕಾಲಿನಿಂದ ತುಳಿದು, ಅಲ್ಲೆ ಇದ್ದ ಫ್ಯಾನ್ ರೆಕ್ಕೆಯಿಂದ ಕುತ್ತಿಗೆಗೆ ಹೊಡೆದು ಗಾಯವಾಗಿ ರಕ್ತ ಸ್ರಾವ ಆಗಿರುತ್ತದೆ. ಅಲ್ಲದೇ ಅವರ ಕುತ್ತಿಗೆಯಲ್ಲಿದ್ದ 16 ಗ್ರಾಂ ನ ಚೈನನ್ನು ಕಸಿದುಕೊಂಡು ನನ್ನ ಬಡ್ಡಿಹಣವನ್ನು ನೀಡಿ ಅದನ್ನು ತಗೊಂಡು ಹೋಗು ಎಂದಿರುತ್ತಾರೆ. ಈ ಹಲ್ಲೆಗೆ ಜೀವಿತ್ ಕಾರ್ಡೊಜಾರವರು ಆರು ತಿಂಗಳ ಹಿಂದೆ ಆರೋಪಿತರ ಬಳಿ ತೆಗೆದುಕೊಂಡಿದ್ದ ಸಾಲದ ಮೇಲಿನ ಹೆಚ್ಚಿನ ಬಡ್ಡಿಯ ಹಣವನ್ನು ಕಟ್ಟಿಲ್ಲವೆಂಬುವುದೇ ಕಾರಣವಾಗಿದೆ ಎಂದು ಜೀವಿತ್ ಕಾರ್ಡೊಜಾರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜೀವಿತ್ ಕಾರ್ಡೊಜಾರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 329(3), 329(4), 115(2), 118(1), 304(2), 352, 3(5) BNS ರಂತೆ ಪ್ರಕರಣ ದಾಖಲಾಗಿದೆ.
