ದಿನಾಂಕ:24-08-2025(ಹಾಯ್ ಉಡುಪಿ ನ್ಯೂಸ್)
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ಅನಾಮಿಕ ದೂರುದಾರ ನೀಡಿದ ಹೇಳಿಕೆಗಳು ಮತ್ತು ಒದಗಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತಲೆಬುರುಡೆ ತಂದಿದ್ದ ಮಾಸ್ಕ್ ಮ್ಯಾನ್ ನನ್ನೇ ಬಂಧಿಸಿದ್ದಾರೆ.
ಈಗ ಮಾಸ್ಕ್ ಮ್ಯಾನ್ ಮಂಡ್ಯದ ಚಿಕ್ಕಬಳ್ಳಿ ಗ್ರಾಮದ ಸಿಎನ್ ಚಿನ್ನಯ್ಯ ಎಂಬುದು ಬಹಿರಂಗಗೊಂಡಿದೆ. ಧರ್ಮಸ್ಥಳದಲ್ಲಿ ನೈರ್ಮಲ್ಯ ಕೆಲಸ ಮಾಡಿಕೊಂಡಿದ್ದ ಚಿನ್ನಯ್ಯ, ತಲೆಬುರುಡೆ ತಂದು ನಾನು ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂತಿದ್ದೇನೆ ಎಂದು ನ್ಯಾಯಾಲಯದಲ್ಲಿ 164 ಹೇಳಿಕೆ ಕೊಟ್ಟಿದ್ದನು. ಸದ್ಯ ಚಿನ್ನಯ್ಯನನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಇಂದು ವೈದ್ಯಕೀಯ ಪರೀಕ್ಷೆ ನಂತರ ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಚಿನ್ನಯ್ಯನನ್ನು 10 ದಿನ ಎಸ್ಐಟಿ ಕಸ್ಟಡಿಗೆ ನೀಡಿದೆ. ಚಿನ್ನಯ್ಯ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಸತ್ಯಗಳು ಹೀಗೆ ಒಂದೊಂದಾಗಿ ಹೊರಬರುತ್ತಿದೆ. ಇದು ಕ್ಷೇತ್ರದ ವಿರುದ್ಧ ಪಿತೂರಿಯ ಭಾಗವಾಗಿದೆ ಎಂದರು.
