FB_IMG_1755873019962.jpg
Spread the love

ದಿನಾಂಕ:22-08-2025(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ಎರಡು ವಾರಗಳ ಕಾಲ ನಡೆದ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ಅಧಿಕೃತವಾಗಿ ತೆರೆ ಬಿದ್ದಿದ್ದು, ಪ್ರತಿಪಕ್ಷಗಳ ವಿರೋಧದ ನಡುವೆಯೇ ಒಟ್ಟು 39 ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಈ ಬಗ್ಗೆ ಅಧಿವೇಶನದ ಸಮಾರೋಪದ ವೇಳೆ ಮಾಹಿತಿ ನೀಡಿರುವ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರು, ಕಳೆದ 9 ದಿನಗಳಲ್ಲಿ ಒಟ್ಟು 70 ಗಂಟೆಗಳ ಕಾಲ ಅಧಿವೇಶನ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಅತಿ ಹೆಚ್ಚು ಅಂದರೆ 39 ವಿಧೇಯಕಗಳನ್ನು ಆಡಳಿತ ಪಕ್ಷ ಮಂಡನೆ ಮಾಡಿ ಅದಕ್ಕೆ ಅನುಮೋದನೆ ಪಡೆದಿದ್ದು, ಒಂದು ಇತಿಹಾಸ ಸೃಷ್ಟಿಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮಸೂದೆಗಳ ಮಂಡನೆ ಮಾಡಿ, ಅನುಮೋದನೆ ನೀಡಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲ ಆಡಳಿತ ಮತ್ತು ವಿಪಕ್ಷಗಳ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ಈ ಮೊದಲು ಅಧಿವೇಶನಗಳಲ್ಲಿ ಸುಮಾರು 20 ವಿಧೇಯಕಗಳ ಮಂಡನೆಯಾಗುತ್ತಿದ್ದವು. ಆದರೆ ಈ ಬಾರಿಯ ಅಧಿವೇಶನ‌‌ದ‌ಲ್ಲಿ ಅದಕ್ಕೂ ಎರಡು ಪಟ್ಟು ವಿಧೇಯಕಗಳ ಮಂಡನೆ ಮಾಡಿ ಅವುಗಳಿಗೆ ಅನುಮೋದನೆ ಪಡೆದದ್ದು ದಾಖಲೆಯಾಗಿದೆ.

ಮುಂಗಾರು ಅಧಿವೇಶನದಲ್ಲಿ ಒಟ್ಟು 2,306 ಪ್ರಶ್ನೆಗಳು ಸ್ವೀಕೃತವಾಗಿದ್ದು, ಈ ಪೈಕಿ 2,199 ಪ್ರಶ್ನೆಗಳನ್ನು ಅಂಗೀಕರಿಸಲಾಗಿತ್ತು.

error: No Copying!